

ಕೈಲಾಂಚ : ತೆಂಗಿನಕಲ್ಲು ಅರಣ್ಯದಲ್ಲಿದ್ದ ಆನೆಗಳ ಹಿಂಡು ಕಳೆದ ಎರಡು ಮೂರು ದಿನಗಳಿಂದ ಮೂಲಸ್ಥಾನಕ್ಕೆ ಹಿಂತಿರುಗದೆ ನಂಜಾಪುರ ಗ್ರಾಮಗಳ ಆಸುಪಾಸಿನ ರೈತರ ತೋಟಗಳಲ್ಲಿ ಬೆಳಗಿನ ವೇಳೆ ಕಾಣಿಸಿಕೊಂಡು ಸಾರ್ವಜನಿಕರಲ್ಲಿ ಭಯದ ವಾತಾವರಣ ಮೂಡಿಸಿವೆ.
ಭಾನುವಾರ ಬೆಳಗ್ಗೆ ಬನ್ನಿಕುಪ್ಪೆ-ಅಂಕನಹಳ್ಳಿ ರಸ್ತೆಯಲ್ಲಿ ಒಂದು ಮರಿಯಾನೆ ಸೇರಿ ನಾಲ್ಕು ಕಾಡಾನೆಗಳು ರಸ್ತೆಯಲ್ಲಿ ಸಂಚರಿಸುತ್ತಿದ್ದದ್ದು ಕಂಡುಬಂದಿದೆ. ಇತ್ತೀಚಿಗೆ ಲಕ್ಕೋಜನ ಹಳ್ಳಿ-ನಂಜಾಪುರ ರಸ್ತೆ, ದೇವರದೊಡ್ಡಿ ಗ್ರಾಮ ರೈತರ ಜಮೀನುಗಳಲ್ಲಿ ಆನೆಗಳ ದಾಳಿ ವಿವಿಧ ಬೆಳೆಗಳನ್ನು ನಾಶ ಮಾಡಿದ್ದವು. ಕಳೆದ ವಾರ ತೆಂಗಿನಕಲ್ಲು ಅರಣ್ಯದಂಚಿನ ದೊಡ್ಡನಹಳ್ಳಿಯ ಸತೀಶ್ (35) ಎಂಬ ರೈತನನ್ನು ಆನೆಗಳು ಬಲಿ ಪಡೆದಿದ್ದವು. ಇದರಿಂದ ದನಕರುಗಳನ್ನು ಮೇಯಿಸಲು, ಜಮೀನಿನ ಕಡೆ ಹೋಗಲು ರೈತರು ಭಯಭೀತರಾಗಿದ್ದಾರೆ ಎನ್ನುತ್ತಾರೆ.
ರೈತರ ಫಸಲು ಹಾನಿ : ನಂಜಾಪುರದ ಸದಾನಂದ ಅವರ ತಂಡದಲ್ಲಿ ಶನಿವಾರ ರಾತ್ರಿ 20ಕ್ಕೂ ಹೆಚ್ಚಿನ ಮಾವಿನ ಗಿಡಗಳನ್ನು ಆನೆಗಳು ನಾಶಪಡಿಸಿವೆ. ಇನ್ನು ಹೊಸದೊಡ್ಡಿ ಗೋಪಾಲ್ ಎಂಬ ರೈತರ ನೀರಾವರಿ ಪರಿಕರ, ಮಾವಿನ ಮರಗಳು ಹಾಗೂ ಕವಣಾಪುರದ ಕೆ. ಶಿವಲಿಂಗಯ್ಯ ಎಂಬುವವರ ತೆಂಗಿನಸಸಿ, ಕೃಷಿಹೊಂಡ ಟಾರ್ಪಲ್, ಬೋರ್‌ವೆಲ್ ನೀರಿನ ಪೈಪು, ಬನ್ನಿಕುಪ್ಪೆ ರೈತರ ಮಾವಿನ ಗಿಡ ನಾಶಪಡಿಸಿವೆ.
ತೆಂಗಿನಕಲ್ಲು ಅರಣ್ಯಕ್ಕೆ ಬಂದ ಆನೆಗಳನ್ನು ಅವುಗಳ ಮೂಲಸ್ಥಾನಕ್ಕೆ ಸೇರಿಸುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ಒಂದೆರಡು ದಿನಗಳಲ್ಲಿ ಆನೆ ಹಿಂಡು ಕಾವೇರಿ ವನ್ಯಜೀವಿಧಾಮ ಸೇರಲಿವೆ. ದಿನೇಶ್ ವಲಯ ಅರಣ್ಯಾಧಿಕಾರಿ, ಚನ್ನಪಟ್ಟಣ ದೊಡ್ಡನಹಳ್ಳಿಯಲ್ಲಿ ಆನೆ ದಾಳಿಗೆ ರೈತ ಬಲಿಯಾದ ನಂತರ ಈ ಭಾಗದ ರೈತರಲ್ಲಿ ಮತ್ತಷ್ಟು ಆತಂಕ ಎದುರಾಗಿದೆ. ಆನೆಗಳು ಬೆಳಗ್ಗೆ, ಸಂಜೆ ವೇಳೆಯಲ್ಲಿ ರಸ್ತೆಗಳಲ್ಲಿ ಕಾಣಿಸಿಕೊಳ್ಳುತ್ತಿರು ವುದರಿಂದ ಅಕ್ಕಪಕ್ಕದ ಗ್ರಾಮಗಳಲ್ಲಿ ಭಯದ ವಾತಾವರಣ ಮೂಡಿದೆ. ಕೂಡಲೇ ಅರಣ್ಯ ಇಲಾಖೆ ಆನೆಗಳನ್ನು ಮೂಲಸ್ಥಾನಕ್ಕೆ ಸೇರಿಸಲು ಮುಂದಾಗಬೇಕು. ಜನರಿಗೆ ಕರಪತ್ರ, ಧ್ವನಿವರ್ಧಕಗಳ ಮೂಲಕ ಜಾಗೃತಿ ಮೂಡಿಸಬೇಕು. ಆರ್.ಮೂರ್ತಿನಾಯಕ್ ಗ್ರಾಪಂ ಸದಸ್ಯ, ಕಾಡನಕುಪ್ಪೆ