

ತರೀಕೆರೆ: ದಿನೇದಿನೆ ಬಾಲ ಗರ್ಭಿಣಿಯರ ಪ್ರಕರಣ ಹೆಚ್ಚಳವಾಗುತ್ತಿದ್ದು ಇದಕ್ಕೆ ಅಪ್ರಾಪ್ತ ಬಾಲಕಿಯರು ಕಲಿಕೆ ಮೊಟಕುಗೊಳಿಸಿ ಶಾಲೆ ತೊರೆಯುತ್ತಿರುವುದೇ ಕಾರಣ ಎಂದು ಕೆಡಿಪಿ ಸದಸ್ಯೆ ಜಿ.ಎಸ್.ರಚನಾ ತಿಳಿಸಿದರು.
ಪಟ್ಟಣದ ತಾಪಂ ಸಭಾಂಗಣದಲ್ಲಿ ಸೋಮವಾರ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ಇದನ್ನು ತಡೆಗಟ್ಟುವಲ್ಲಿ ಎಲ್ಲ ಇಲಾಖೆ ಅಧಿಕಾರಿಗಳು ಸಮನ್ವಯತೆ ಸಾಧಿಸಿ ಕಾರ್ಯಕ್ರಮ ರೂಪಿಸಬೇಕು. ಅಲ್ಲದೆ ಇದರ ನಿಯಂತ್ರಣಕ್ಕಾಗಿ ಜಾರಿಗೊಳಿಸಿರುವ ಭದ್ರ ಬಾಲ್ಯ ಯೋಜನೆಯನ್ನು ಪರಿಣಾಮಕಾರಿಯಾಗಿ ಕಾರ್ಯಗತಗೊಳಿಸಬೇಕು ಎಂದು ತಿಳಿಸಿದರು.
ಶಾಸಕ ಜಿ.ಎಚ್.ಶ್ರೀನಿವಾಸ್ ಮಾತನಾಡಿ, ಬಾಲ ಗರ್ಭಿಣಿ ಪ್ರಕರಣ ರಾಜ್ಯದ ಇತರ ಜಿಲ್ಲೆಗಿಂತ ಚಿಕ್ಕಮಗಳೂರು ಜಿಲ್ಲೆಯಲ್ಲಿ ಹೆಚ್ಚು ಕಂಡು ಬರುತ್ತಿದೆ. ಅದರಲ್ಲೂ ಕಡೂರು, ತರೀಕೆರೆ ತಾಲೂಕಿನಲ್ಲಿ ಅಧಿಕ ಪ್ರಮಾಣದಲ್ಲಿ ದಾಖಲಾಗಿದೆ. ಪೊಲೀಸ್ ಠಾಣೆಯಲ್ಲಿ ವಾರಕ್ಕೊಂದು ಅಪ್ರಾಪ್ತ ಬಾಲಕಿಯರ ನಾಪತ್ತೆ ಪ್ರಕರಣ ದಾಖಲಾಗುತ್ತಿರುವುದು ಆತಂಕ ಸೃಷ್ಟಿಸಿದೆ. ಬಾಲ್ಯ ವಿವಾಹ ಪಿಡುಗು ನಿರ್ಮೂಲನೆಗೆ ಸರ್ಕಾರ ಮಾತ್ರವಲ್ಲ, ಜನಪ್ರತಿನಿಧಿಗಳು, ವಿವಿಧ ಇಲಾಖೆ ಅಧಿಕಾರಿಗಳು ಹೋರಾಟ ನಡೆಸಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ತಿಳಿಸಿದರು.
ಬಿಇಒ ಎಚ್.ಎ.ಪರಶುರಾಮಪ್ಪ ಮಾತನಾಡಿ, ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ 147 ಮಕ್ಕಳು ಶಾಲೆ ಬಿಟ್ಟಿದ್ದಾರೆ. ತಳಹಂತದಿಂದಲೇ ಪರಿಶೀಲಿಸಿ ಮಕ್ಕಳನ್ನು ಮತ್ತೆ ಶಾಲೆಗೆ ಕರೆತರುವ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು.
ಜಿ.ಎಚ್.ಶ್ರೀನಿವಾಸ್ ಮಾತನಾಡಿ, ಅಜ್ಜಂಪುರ ತಾಲೂಕಿನ ನಾಗಭೋಗನಹಳ್ಳಿಯಲ್ಲಿ ಕೊಠಡಿ ಕೊರತೆ ಕಾರಣ ಸರ್ಕಾರಿ ಶಾಲೆಯನ್ನು ವಾರಕ್ಕೊಂದು ಮನೆಯಲ್ಲಿ ನಡೆಸಲಾಗುತ್ತಿರುವುದೊಂದೇ ಅಲ್ಲ, ಅಡುಗೆಯನ್ನು ಹೊರಗಡೆಯೆ ಮಾಡುವಂತಾಗಿರುವುದರಿಂದ ಸಮಾಜಕ್ಕೆ ತಪ್ಪು ಸಂದೇಶ ರವಾನೆಯಾಗುತ್ತಿದೆ. ಅದರಲ್ಲೂ ಕೆಲ ಸರ್ಕಾರಿ ಶಾಲೆಯಲ್ಲಿ ಮಕ್ಕಳ ಕಲಿಕೆ ಜತೆ ಶಿಸ್ತು ಪಾಲನೆಗೆ ಹೆಚ್ಚಿನ ಒತ್ತು ನೀಡಿಲ್ಲ. ಹೀಗಾದರೆ ಹೇಗೆ? ಎಂದು ಬಿಇಒ ಎಚ್.ಎ.ಪರಶುರಾಮಪ್ಪ ಅವರನ್ನು ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಬಿಇಒ ಎಚ್.ಎ.ಪರಶುರಾಮಪ್ಪ, ಕಲಿಕೆಯಲ್ಲಿ ಹಿಂದುಳಿದಿರುವ ಮಕ್ಕಳ ಪಟ್ಟಿ ಮಾಡಿ ವಿಶೇಷ ತರಗತಿ ನಡೆಸಲಾಗುತ್ತಿದೆ ಎಂದು ಹೇಳಿದರು. ಶಾಸಕ ಜಿ.ಎಚ್.ಶ್ರೀನಿವಾಸ್ ಮಾತನಾಡಿ, ಕಲಿಕೆಯಲ್ಲಿ ಹಿಂದೆ ಬಿದ್ದ ಮಕ್ಕಳ ಕತೆ ಒಂದೆಡೆಯಾದರೆ, ಕೆಲವು ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹಲವು ಶಿಕ್ಷಕರಿಗೆ ಭೋದನಾ ಕ್ರಮವೇ ಗೊತ್ತಿಲ್ಲವೆಂಬುದು ತಲೆ ತಗ್ಗಿಸುವ ವಿಚಾರ. ಕಲಿಕಾ ಸಾಮರ್ಥ್ಯ ಅನುಸಾರ ಎಬಿಸಿ ಎಂದು ಮಕ್ಕಳ ಗ್ರೇಡಿಂಗ್ ಮಾಡುವಂತೆ, ಪಾಠವೇ ಬಾರದ ಕೆಲ ಶಿಕ್ಷಕರನ್ನೂ ವರ್ಗೀಕರಿಸಬೇಕು. ಶಾಲಾ ಅವಧಿಯಲ್ಲಿ ಯಾರ ಅನುಮತಿಯೂ ಇಲ್ಲದೆ ಹೊರಗಡೆ ಅನಗತ್ಯವಾಗಿ ಓಡಾಡುವ ಶಿಕ್ಷಕರನ್ನು ನಿಯಂತ್ರಿಸಬೇಕು ಎಂದು ಬಿಇಒಗೆ ಎಚ್.ಎ.ಪರಶುರಾಮಪ್ಪಗೆ ನಿರ್ದೇಶಿಸಿದರು.
ಸಭೆಯಲ್ಲಿ ಎಸಿ ಎನ್.ವಿ.ನಟೇಶ್, ತಾಪಂ ಆಡಳಿತಾಧಿಕಾರಿ ರಾಜಗೋಪಾಲ್, ತಹಸೀಲ್ದಾರ್ ವಿಶ್ವಜೀತ ಮೆಹತಾ, ವಿನಾಯಕ ಸಾಗರ್, ತಾಪಂ ಇಒ ಡಾ.ಆರ್.ದೇವೇಂದ್ರಪ್ಪ, ಎಂ.ಕೆ.ವಿಜಯಕುಮಾರ್ ಇದ್ದರು.