ಭತ್ತ ಬೆಳೆಯುವ ರೈತರ ಸಂಖ್ಯೆ ಹೆಚ್ಚಾಗಲಿ

7MDG2 krishi
ಉಗ್ಗೆಹಳ್ಳಿಯ ಗದ್ದೆಯಲ್ಲಿ ಶಾಸಕಿ ನಯನಾ ಮೋಟಮ್ಮ ಯಂತ್ರೋಪಕರಣದಿಂದ ಭತ್ತದ ನಾಟಿ ಮಾಡಿದರು. ಹೊಸಕೆರೆ ರಮೇಶ್, ಸುಜಾತಾ, ವೆಂಕಟೇಶ್ ಚೌಹಾಣ್, ಯು.ಪಿ.ಜಗದೀಶ್, ಸುರೇಂದ್ರ ಇತರರಿದ್ದರು.
Published on

ಮೂಡಿಗೆರೆ: ವರ್ಷ ಕಳೆದಂತೆ ಭತ್ತ ಬೆಳೆಯುವ ರೈತರ ಸಂಖ್ಯೆ ಕಡಿಮೆಯಾಗುತ್ತಿದೆ. ಭತ್ತದ ಬೆಳೆ ಕುಂಠಿತವಾಗಬಾರದು. ಬೇಸಾಯಕ್ಕೆ ಬೇಕಾದ ಯಾಂತ್ರಿಕ ಉಪಕರಣಗಳನ್ನು ಸಹಾಯಧನದ ಮೂಲಕ ಸರ್ಕಾರ ರೈತರಿಗೆ ಒದಗಿಸುತ್ತಿದೆ. ಇದರ ಉಪಯೋಗ ರೈತರು ಪಡೆದುಕೊಳ್ಳಬೇಕು ಎಂದು ಶಾಸಕಿ ನಯನಾ ಮೋಟಮ್ಮ ತಿಳಿಸಿದರು.

ಕೃಷಿ ಇಲಾಖೆಯಿಂದ ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯಡಿ ಉಗ್ಗೆಹಳ್ಳಿ ರೈತ ಶರತ್ ಎಂಬುವವರ ಭತ್ತದ ಗದ್ದೆಯಲ್ಲಿ ನಾಟಿ ಮಾಡುವ ಯಾಂತ್ರೋಪಕರಣಕ್ಕೆ ಚಾಲನೆ ನೀಡಿ ಮಾತನಾಡಿದರು. ಈ ಹಿಂದೆ ತಾಲೂಕಿನ ಉದ್ದಗಲಕ್ಕೂ ಭತ್ತದ ಗದ್ದೆಗಳು ಹೆಚ್ಚಾಗಿತ್ತು. ವರ್ಷ ಕಳೆದಂತೆ ಗದ್ದೆಗಳು ಕಣ್ಮರೆಯಾಗುತ್ತಿವೆ. ಕೆಲವೆಡೆ ಗದ್ದೆಗಳನ್ನು ಪಾಳು ಬಿಡಲಾಗುತ್ತಿದೆ. ಇನ್ನು ಕೆಲವೆಡೆ ರೈತರು ಗದ್ದೆಯನ್ನು ತೋಟವನ್ನಾಗಿ ಮಾಡಿಕೊಂಡಿದ್ದಾರೆ. ಕೆಲ ಪ್ರಮುಖ ಪ್ರದೇಶದಲ್ಲಿ ನಿವೇಶನಗಳಾಗಿವೆ. ರೈತರು ಭತ್ತದ ಗದ್ದೆಗಳನ್ನು ಇತರ ಉದ್ದೇಶಕ್ಕೆ ಬಿಡದೆ ಭತ್ತ ಬೆಳೆಯಲು ಮುಂದಾಗಬೇಕು. ಗ್ರಾಮದ ಸುತ್ತ ಹಸಿರು ಗದ್ದೆಗಳಿದ್ದರೆ ಆ ಗ್ರಾಮಕ್ಕೆ ಹೆಚ್ಚಿನ ಗೌರವ ಬರುತ್ತದೆ ಎಂದರು.

ಸ್ಥಳೀಯವಾಗಿ ಬೆಳೆದ ಭತ್ತದಲ್ಲಿ ಆಹಾರ ತಯಾರಿಸಿದರೆ ಆರೋಗ್ಯ ಹದಗೆಡಿಸುವ ಅಂಶ ಉಂಟಾಗಲಾರದು. ಗ್ರಾಮೀಣ ಭಾಗದಲ್ಲಿ ಹೈನುಗಾರಿಕೆ ಹೆಚ್ಚಾಗಿರುವುದರಿಂದ ಕಾಂಪೋಸ್ಟ್ ಗೊಬ್ಬರ ತಯಾರಿಸುವ ರೈತರ ಸಂಖ್ಯೆ ಹೆಚ್ಚಾಗಿದೆ. ಕಾಂಪೋಸ್ಟ್ ಗೊಬ್ಬರವನ್ನು ರೈತರು ಬೆಳೆಗೆ ಬಳಸಿಕೊಳ್ಳುತ್ತಾರೆ. ಇದರಿಂದ ಬೆಳೆಯಲ್ಲಿ ಇಳುವರಿ ಹೆಚ್ಚಾಗುವ ಜತೆಗೆ ರೈತರಿಗೆ ಹೆಚ್ಚಿನ ಆದಾಯ ಬರುತ್ತದೆ. ಇಂತಹ ಆಹಾರದ ಉತ್ಪಾದನೆ ಮತ್ತು ಬಳಕೆಯಿಂದ ಅನಾರೋಗ್ಯ ತಡೆಗಟ್ಟಲು ಸಾಧ್ಯವಿದೆ. ರೈತರು ಕೃಷಿ ಮತ್ತು ತೋಟಗಾರಿಕಾ ಇಲಾಖೆ ಅಧಿಕಾರಿಗಳ ನಿರಂತರ ಸಂಪರ್ಕದಲ್ಲಿರಬೇಕು. ಸರ್ಕಾರದಿಂದ ಸಿಗುವ ಕೃಷಿ ಸಂಬಂಧಿತ ಉಪಕರಣಗಳನ್ನು ಪಡೆದುಕೊಂಡು ಬೇಸಾಯ ಕ್ರಮವನ್ನು ಮುಂದುವರಿಸಬೇಕು ಎಂದು ಹೇಳಿದರು.

ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಹೊಸಕೆರೆ ರಮೇಶ್, ಹಂತೂರು ಗ್ರಾಪಂ ಅಧ್ಯಕ್ಷೆ ಶೋಭಾ ನಾಗರಾಜ್, ಉಪಾಧ್ಯಕ್ಷೆ ಪಾರ್ವತಮ್ಮ, ತಾಲೂಕು ಕೆಡಿಪಿ ಸದಸ್ಯ ಸುರೇಂದ್ರ, ಕೃಷಿ ಇಲಾಖೆ ಉಪನಿರ್ದೇಶಕ ವೆಂಕಟೇಶ್ ಚವ್ಹಾಣ್, ಕೃಷಿಕ ಸಮಾಜದ ಖಜಾಂಚಿ ಎಚ್.ಬಿ.ಜಗನ್ನಾಥ್, ರೈತ ಉತ್ಪಾದಕರ ಸಂಘದ ತಾಲೂಕು ಅಧ್ಯಕ್ಷ ಎಚ್.ಕೆ.ಪೂರ್ಣೇಶ್, ಗ್ರಾಪಂ ಮಾಜಿ ಅಧ್ಯಕ್ಷ ಯು.ಪಿ.ಜಗದೀಶ್, ಮುಖಂಡರಾದ ರಮೇಶ್ ಪಟೇಲ್, ನಾಗರಾಜ್ ನಚಿಕೇತ್, ಶರತ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net