

ಭದ್ರಾವತಿ: ತಾಲೂಕಿನಾದ್ಯಂತ ಸೋಮವಾರ ಹಾಗೂ ಮಂಗಳವಾರ ಬಿರುಸಿನ ಮಳೆಯಾಗಿದೆ. ತಾಲೂಕಿನ ಕೆಲವೆಡೆ ಭತ್ತ ಕಟಾವಿಗೆ ಬಂದಿದ್ದು, ಈಗ ಮಳೆ ಆಗುತ್ತಿರುವುದರಿಂದ ಅಡಚಣೆಯಾಗಿದೆ. ಭತ್ತ ಸಂಪೂರ್ಣ ಒಣಗಿದ್ದು ಜೋರು ಮಳೆ ಹಾಗೂ ಗಾಳಿ ಬಂದರೆ ಭತ್ತ ಉದುರುವ ಜತೆಗೆ ಹುಲ್ಲು ನೆನೆಯುತ್ತದೆ. ಇತ್ತೀಚೆಗೆ ಭತ್ತ ಕಟಾವು ಯಂತ್ರದಿಂದ ನಡೆಯುತ್ತಿದ್ದು ಕಟಾವು ಮಾಡಿದ ಹುಲ್ಲು ಮಳೆಯಲ್ಲಿ ನೆನೆದರೆ ರೈತರಿಗೆ ಮೇವಿನ ಸಮಸ್ಯೆ ಎದುರಾಗುತ್ತದೆ. ತಾಲೂಕಿನಲ್ಲಿ ಬೇಸಿಗೆ ಹಂಗಾಮಿನಲ್ಲಿ 4 ಸಾವಿರ ಹೆಕ್ಟೇರ್ ಭತ್ತ ಬೆಳೆಯಲಾಗಿದ್ದು ಎಲ್ಲವೂ ಕಟಾವು ಹಂತ ತಲುಪಿದೆ. ಮಳೆ ಬೀಳುತ್ತಿರುವ ಹಿನ್ನೆಲೆಯಲ್ಲಿ ಇನ್ನೂ 3 ರಿಂದ 4 ದಿನಗಳ ಕಾಲ ಭತ್ತ ಕಟಾವು ಮಾಡದಿರುವಂತೆ ರೈತರಿಗೆ ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಸೊರಬ ತಾಲೂಕಿನಾದ್ಯಂತ ಮಂಗಳವಾರವೂ ಬೆಳಗ್ಗೆಯಿಂದಲೇ ಎಡೆಬಿಡದೆ ಮಳೆ ಸುರಿಯುತ್ತಿದ್ದು ಜನರ ದೈನಂದಿನ ಕೆಲಸ ಕಾರ್ಯಗಳಿಗೆ ಅಡ್ಡಿಪಡಿಸಿದೆ. ಇದುವರೆಗೆ ಕೆಲವು ಗ್ರಾಮಗಳಿಗೆ ಭಾರಿ ಮಳೆಯಾದರೆ ಮತ್ತೆ ಕೆಲವು ಗ್ರಾಮಗಳಿಗೆ ಆಗಿರಲಿಲ್ಲ. ಆದರೆ ಮಂಗಳವಾರ ತಾಲೂಕಿನ ಎಲ್ಲೆಡೆ ಬಿರುಸಿನ ಮಳೆಯಾಗಿದೆ. ಬೇಸಿಗೆ ಜೋಳದ ಕಟಾವು ಹಾಗೂ ಕಟಾವು ಮಾಡಿದ ಬೆಳೆ ಮಳೆಗೆ ಒದ್ದೆಯಾಗುತ್ತಿದೆ. ಇನ್ನು ಮದುವೆ, ಬೀಗರ ಊಟಕ್ಕೆ ತಯಾರಿ ಮಾಡಿಕೊಂಡವರ ಮುಖದಲ್ಲಿ ಬೇಸರ ತರಿಸಿದೆ. ಮಳೆಯಿಂದ ಕೆರೆಗಳಲ್ಲಿ ನೀರಿನ ಪ್ರಮಾಣ ಏರಿಕೆಯಾಗುತ್ತಿದೆ. ಕೆಲ ಕೆರೆಗಳ ಬೇಟೆ ಮಳೆಯಿಂದ ಮುಂದೂಡಲ್ಪಟ್ಟಿವೆ. ಈಗಾಗಲೆ ಶುಂಠಿ ನೆಟ್ಟಿರುವ ರೈತರಿಗೆ ಹಾಗೂ ತೋಟಕ್ಕೆ ಮಳೆಯಿಂದ ಅನುಕೂಲವಾಗಿದೆ.