ಭಕ್ತರಿಗೆ ಸಕಲ ಸೌಲಭ್ಯ ಕರುಣಿಸುವ ರಾಜರಾಜೇಶ್ವರಿ

sri sa-1
Published on

ಶೃಂಗೇರಿ: ಶ್ರೀ ಶರನವರಾತ್ರಿ ಮಹೋತ್ಸವದ ಎಂಟನೇ ದಿನ ಗುರುವಾರ ಶ್ರೀ ಶಾರದೆ ಕೈಯಲ್ಲಿ ಪಾಶ, ಅಂಕುಶ, ಪುಷ್ಪ್ಪಬಾಣ ಮತ್ತು ಬಿಲ್ಲುಗಳನ್ನು ಧರಿಸಿ, ಕರುಣಾಪೂರಿತ ದೃಷ್ಟಿಯುಳ್ಳವಳಾಗಿ, ಸರ್ವಾಲಂಕಾರಭೂಷಿತಳಾಗಿ, ಕಾಮೇಶ್ವರನ ಪ್ರಾಣಕಾಂತೆಯಾಗಿ ಭಕ್ತರಿಗೆ ಸಕಲ ಸೌಲಭ್ಯವನ್ನು ನೀಡುವ ರಾಜರಾಜೇಶ್ವರಿ ಅಲಂಕಾರದಲ್ಲಿ ಶೋಭಿಸಿ ಭಕ್ತರನ್ನು ಅನುಗ್ರಹಿಸುವ ಮಾತೆಯಾದಳು.

ಋಗ್ವೇದ, ಯಜುರ್ವೇದ, ಸಾಮವೇದ, ಅಥರ್ವಣ ವೇದಗಳ ಹಾಗೂ ದುರ್ಗಾಸಪ್ತಶತಿ, ಲಕ್ಷ್ಮೀನಾರಾಯಣ ಹೃದಯ, ಸೂತಸಂಹಿತೆ ಪಾರಾಯಣಗಳು, ಸೂರ್ಯನಮಸ್ಕಾರ, ಶ್ರೀ ಸೂಕ್ತಜಪ, ದುರ್ಗಾಜಪ, ಭುವನೇಶ್ವರಿ ಜಪ ಮಠದಲ್ಲಿ ನೆರವೇರಿದವು. ಸುವಾಸಿನಿ ಹಾಗೂ ಕುಮಾರಿ ಪೂಜೆ ಜರುಗಿದವು. ಜಗದ್ಗುರುಗಳು ಶ್ರೀ ಶಾರದಾಪರಮೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಸಂಜೆ ಪ್ರವಚನಮಂದಿರದಲ್ಲಿ ಯತಿವರ್ಯರು ಸಮ್ಮುಖದಲ್ಲಿ ಶ್ರೀ ಶಾರದೆಗೆ ಡೋಲೋತ್ಸವ ನೆರವೇರಿತು. ಬಳಿಕ ಶ್ರೀ ಚಂದ್ರಮೌಳೀಶ್ವರರಿಗೆ ವಿಶೇಷ ಪೂಜೆ ನೆರವೇರಿತು.
ಬೀದಿ ಉತ್ಸವದಲ್ಲಿ ಬೇಗಾರು ಗ್ರಾಪಂ ವ್ಯಾಪ್ತಿಯ ಭಕ್ತರು ಭಾಗವಹಿಸಿದ್ದರು. ಬಿದರಗೋಡು ಶ್ರೀರಾಮ ದೇವಸ್ಥಾನ, ಶ್ರೀ ಗಣಪತಿ ಆಂಜನೇಯ ದೇವಸ್ಥಾನ, ಹಗ್ಗುರುಡಿ ಶ್ರೀ ಮಲ್ಲಿಕಾರ್ಜುನ ದೇವಸ್ಥಾನ, ಶ್ರೀ ಗಣಪತಿ ಸೇವಾ ಸಮಿತಿ, ಅಸನಬಾಳು ಶ್ರೀ ಗುತ್ಯಮ್ಮ ದೇವಸ್ಥಾನ, ಶ್ರೀ ಮಲ್ಲಿಕಾರ್ಜುನ ಸೇವಾ ಸಮಿತಿ ಹಾಗೂ ಸಂಘ-ಸಂಸ್ಥೆಗಳು, ಶಾಲಾ ಕಾಲೇಜು ವಿದ್ಯಾರ್ಥಿಗಳು ಭಾಗಿಯಾದರು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಬೆಂಗಳೂರಿನ ಜ್ಞಾನೋದಯ ಶಾಲೆ ವಿದ್ಯಾರ್ಥಿಗಳಿಂದ ಹಾಡುಗಾರಿಕೆ ನೆರವೇರಿತು.
ಮಠದ ಸಂಪ್ರದಾಯಕ್ಕೆ ಅನುಗುಣವಾಗಿ ಜಗದ್ಗುರು ಶ್ರೀ ವಿಧುಶೇಖರಭಾರತೀ ಸ್ವಾಮೀಜಿ ಅವರು ಕಿರೀಟ, ಆಭರಣಗಳನ್ನು ಧರಿಸಿ ಶ್ರೀ ಶಾರದಾ ದೇವಾಲಯಕ್ಕೆ ಉತ್ಸವದಲ್ಲಿ ಚಿತ್ತೈಸಿದರು. ಯತಿವರ್ಯರು ದೇವಾಲಯ ಪ್ರವೇಶಿಸಿದ ಬಳಿಕ ಬಂಗಾರದ ರಥದಲ್ಲಿ ಶ್ರೀ ಶಾರದೆ ಉತ್ಸವಮೂರ್ತಿಯನ್ನು ಕುಳ್ಳಿರಿಸಿ ದೇವಾಲಯದ ಒಳಪ್ರಕಾರದಲ್ಲಿ ಮೂರು ಸುತ್ತು ವೇದ, ವಾದ್ಯ ಘೋಷಗಳೊಂದಿಗೆ ರಥೋತ್ಸವ ನೆರವೇರಿತು. ಶ್ರೀ ಶಾರದೆಗೆ ಅಭಿಮುಖವಾಗಿ ಇರಿಸಿದ ಸಿಂಹಾಸನದಲ್ಲಿ ಯತಿಗಳು ಆಸೀನರಾದ ಬಳಿಕ ಸಪ್ತಶತಿ ಪಾರಾಯಣ, ಜಗನ್ಮಾತೆಗೆ ಮಹಾಮಂಗಳಾರತಿ, ವೇದಗಳ ಪಾರಾಯಣ, ಸರ್ವಸಂಗೀತ ಹಾಗೂ ವಾದ್ಯ ಸೇವೆ, ಪ್ರಸಾದ ವಿನಿಯೋಗ ಮುಂತಾದ ಧಾರ್ಮಿಕ ವಿಧಿಗಳು ನೆರವೇರಿದವು. ದರ್ಬಾರು ಮುಕ್ತಾಯದ ಬಳಿಕ ಯತಿವರ್ಯರು ಆಸೀನರಾದ ಸಿಂಹಾಸನಕ್ಕೆ ವಿಶೇಷ ಪೂಜೆ ಸಲ್ಲಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net