

ಕೋಲಾರ: ಸಾಮಾನ್ಯವಾಗಿ ಬಹುತೇಕ ದೇವಾಲಯಗಳನ್ನು ಶ್ರದ್ಧಾ ಕೇಂದ್ರಗಳೆಂದು ಬಿಂಬಿಸಲಾಗಿದೆ. ಆದರೆ ಐತಿಹಾಸಿಕ ಹಿನ್ನೆಲೆ ಪಡೆದುಕೊಂಡಿರುವ ಕೋಲಾರ ನಗರದ ಶ್ರೀ ಕೋಲಾರಮ್ಮ ದೇವಾಲಯ ಭಕ್ತರಿಗೆ ಆಲಯ, ಇತಿಹಾಸಕಾರರು ಹಾಗೂ ಸಂಶೋಧಕರಿಗೆ ಜ್ಞಾನ ಭಂಡಾರವಾಗಿರುವುದರಿಂದ ಈ ದೇವಾಲಯ ವಿಶೇಷ ಆಕರ್ಷಣೆ ಹೊಂದಿದೆ.
ಬೆಂಗಳೂರಿನಿಂದ ಚೆನ್ನೈ ಹೆದ್ದಾರಿಯಲ್ಲಿ ಸಿಗುವ ಜಿಲ್ಲಾ ಕೇಂದ್ರ ಕೋಲಾರದ ಹೃದಯಭಾಗದ ಕೋಟೆ ಪ್ರದೇಶದಲ್ಲಿರುವ ಕೋಲಾರಮ್ಮ ದೇವಾಲಯ ಪ್ರವಾಸಿಗರ ಅಚ್ಚುಮೆಚ್ಚಿನ ತಾಣ. ಹೊನ್ನಿನ ನಾಡೆಂದು ಕೀರ್ತಿ ಪಡೆದಿರುವ ಕೋಲಾರ ಇತಿಹಾಸದ ಪುಟಗಳಲ್ಲಿ ತನ್ನದೇ ಛಾಪು ಮೂಡಿಸಿರುವುದಕ್ಕೆ ಈ ದೇವಾಲಯದ ಸೊಬಗು ಕಾರಣವೆಂದರೆ ತಪ್ಪಾಗಲಾರದು.
ಕುವಳಾಲ ಪುರವರಾಧೀಶ್ವರ ಎಂಬ ಬಿರುದು, ಗಂಗರಿಂದ ಮೊದಲ್ಗೊಂಡು ಪೂರ್ವ ಚಾಲುಕ್ಯ ಮನೆತನದ ಅರಸುಗಳವರೆಗೂ, ಆನಂತರ ಹೊಯ್ಸಳರ ಕಾಲದ ಗಂಗಾ-ಚೋಳ ರಾಜರ ಕಾಲದವರೆಗೂ ಉಳಿದುಕೊಂಡಿರುವುದು ಕೋಲಾರಮ್ಮ ದೇವಾಲಯದಲ್ಲಿ ಕಾಣುವ ಶಾಸನಗಳಿಂದ ತಿಳಿದು ಬರುತ್ತದೆ.
1004ರಲ್ಲಿ ಅಡಿಪಾಯ: 1004ರಲ್ಲಿದ್ದ ರಾಜೇಂದ್ರಚೋಳನು ಕೋಲಾರಮ್ಮ ದೇವಸ್ಥಾನವನ್ನು ಶಿಲಾಮಯವನ್ನಾಗಿಸಿದ್ದರು ಎಂಬುದು ಇತಿಹಾಸಕಾರರ ಸಂಶೋಧನೆಯ ಪ್ರಮುಖ ಘಟ್ಟವಾಗಿದೆ. ದೇವಾಲಯವನ್ನು ಲಂಬಕೋನಾಕೃತಿಯ ವಾಸ್ತುಶಿಲ್ಪದ ಆಧಾರದ ಮೇಲೆ ಕಟ್ಟಲಾಗಿದೆ. ಮಹಾದ್ವಾರವು ಅತ್ಯಂತ ಎತ್ತರವಾಗಿದೆ, ಇದನ್ನು 11ನೇ ಶತಮಾನದಲ್ಲಿ ಗಂಗರ ಕಾಲದಲ್ಲಿ ಕಟ್ಟಿರಬಹು. ದೇಗುಲದ ಗೋಡೆಗಳ ಮೇಲೆ ಇರುವ ಶಾಸನಗಳನ್ನು ಉಲ್ಲೇಖಿಸಿ ಇತಿಹಾಸಕಾರರರು ಸಾಕ್ಷೀಕರಿಸಿದ್ದಾರೆ. ಮತ್ತೊಂದು ವೈಶಿಷ್ಟ್ಯವೆಂದರೆ ಮಹಾದ್ವಾರ ಇದ್ದರೂ ಗೋಪುರ ನಿರ್ಮಿಸದಿರುವುದು ಹಾಗೂ ತಾಯಿ ಕೋಲಾರಮ್ಮ ದಕ್ಷಿಣಾಭಿಮುಖವಾಗಿರುವುದು ಸೊಜಿಗವನ್ನುಂಟು ಮಾಡಿದೆ.
ಚಾಮುಂಡಿಯ ಸಹೋದರಿ: ಕೋಲಾರಮ್ಮಮೈಸೂರಿನ ಚಾಮುಂಡಿಬೆಟ್ಟದಲ್ಲಿ ನೆಲೆಸಿರುವ ಚಾಮುಂಡೇಶ್ವರಿಯ ಸಹೋದರಿ ಎನ್ನಲಾಗಿದ್ದು, ಸುಮಾರು 4 ಅಡಿ ಎತ್ತರದ ಶಿಲೆಯಲ್ಲಿ ಅರಳಿದ್ದಾಳೆ. ಕೈಯಲ್ಲಿ ತ್ರಿಶೂಲ, ವಿಗ್ರಹದ ಅಡಿಯಲ್ಲಿ ರಾಕ್ಷಸನನ್ನು ಸಂಹಾರ ಮಾಡುತ್ತಿರುವ ಭಂಗಿ ಭಕ್ತರನ್ನು ಮಂತ್ರಮುಗ್ಧರನ್ನಾಗಿಸುತ್ತದೆ. ದೇವರ ಗರ್ಭಗುಡಿಯ ಹೊರಗೆ ಸಪ್ತಮಾತೃಕೆಯರಾದ ವೀರಭದ್ರ, ಬ್ರಾಹ್ಮಿ, ಮಾಹೇಶ್ವರಿ, ವೈಷ್ಣವಿ, ಕೌಮಾರಿ, ವಾರಾಗಿ, ಇಂದ್ರಾಣಿ, ಗಣೇಶ ವಿಗ್ರಹಗಳು ಸುಂದರವಾಗಿದೆ. ಕೋಲಾರಮ್ಮ ದೇವಾಲಯದ ಮತ್ತೊಂದು ದೇವ ಮಂದಿರ ಉತ್ತರಾಭಿಮುಖವಾಗಿದೆ, ಇಲ್ಲಿ ಅಪರೂಪದ ಹಾಗೂ ಕೌತುಕವನ್ನುಂಟು ಮಾಡುವ ಮಣ್ಣಿನ ಶಿಲೆಯ ಹಾಗೂ ಲೋಹದ ವಿಗ್ರಹಗಳನ್ನು ಕಾಣಬಹುದು. ಗೋಡೆಯ ಅಂಚಿನಲ್ಲಿರುವ ಗಾರೆಯ ವರ್ಣರಂಜಿತ ಸಪ್ತಮಾತೃಕೆಯರ ವಿಗ್ರಹಗಳಿದ್ದು ಇದನ್ನು ಜೀರ್ಣೋದ್ಧಾರ ಮಾಡಬೇಕಿದೆ. ಇಡಿ ದೇವಾಲಯವನ್ನು ಸೂಕ್ಷ್ಮವಾಗಿ ಗಮಿಸಿದಲ್ಲಿ ಇತಿಹಾಸ, ಚರಿತ್ರೆ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ಒಂದು ವಿಶ್ವವಿದ್ಯಾಲಯವಾಗಿ ಕಾಣುತ್ತದೆ.
ಚೇಳೂರಮ್ಮನಿಗೆ ಹರಕೆ: ಕೋಲಾರಮ್ಮ ದೇವಾಲಯದಲ್ಲಿ 5 ಅಡಿ ಎತ್ತರದ ಚೇಳೂರಮ್ಮ ದೇವಿ ಇದೆ. ಇದು ರಾಜ್ಯದಲ್ಲೇ ಅಪರೂಪದ ವಿಗ್ರಹವಾಗಿದೆ. ಮನೆಗಳಲ್ಲಿ ಕಾಣಿಸುವ ಚೇಳು, ಜರಿಗಳಂತಹ ವಿಷ ಜಂತುಗಳು ಅಪಾಯದಿಂದ ಪಾರಾಗಲು ಜನರು ಈ ದೇವಾಲಯಕ್ಕೆ ಬಂದು ಚೇಳೂರಮ್ಮನಿಗೆ ಹರಕೆ ಹೊತ್ತುಕೊಳ್ಳುವುದು ವಿಶೇಷ.
ಗಮನ ಸೆಳೆಯುವ ಶಾಸನ: ಚೇಲೂರಮ್ಮಇರುವ ಜಾಗದಲ್ಲಿ ದೊಡ್ಡದೊಂದು ನಿಧಿಪೆಟ್ಟಿಗೆ ಇದ್ದು, ಈ ಪೆಟ್ಟಿಗೆ ಈವರೆಗೂ ಭರ್ತಿಯಾಗದಿರುವುದು ಅಚ್ಚರಿಯನ್ನುಂಟು ಮಾಡಿದೆ. ದೇವಾಲಯದ ಒಳಭಾಗದ ಗೋಡೆಗಳ ಮೇಲೆ ತಮಿಳು-ಕನ್ನಡದ ಶಾಸನಗಳನ್ನು ಕಾಣಬಹುದು. ಕ್ರಿ.ಶ.1910ರಲ್ಲಿ ನಡೆದ ಕ್ಷಾಮ ಪರಿಹಾರ ಕಾರ್ಯಗಳನ್ನು ಶಾಸನರೂಪದಲ್ಲಿ ಕೆತ್ತನೆ ಮಾಡಲಾಗಿದೆ. ದೇವಾಲಯದ ಎದುರುಗಡೆ ಇರುವ ಅಮಾನಿಕೆರೆ ಕೋಲಾರಮ್ಮ ಕೆರೆಯೆಂದು ಹೆಸರಿಸಲಾಗಿದೆ.
ದೇವಾಲಯ ಪ್ರಸ್ತುತ ಪುರಾತತ್ವ ಇಲಾಖೆಗೆ ಒಳಪಟ್ಟಿದ್ದು ದೂರದ ಊರುಗಳಿಂದ ಬರುವ ಯಾತ್ರಿಕರಿಗಾಗಿ ಶೌಚ, ವಿಶ್ರಾಂತಿ ಭವನ ನಿರ್ಮಿಸಿದಲ್ಲಿ ದೇವಾಲಯ ಇನ್ನಷ್ಟು ಖ್ಯಾತಿ ಗಳಿಸುವುದರಲ್ಲಿ ಅನುಮಾನವಿಲ್ಲ.
ಬ್ರಹ್ಮರಥೋತ್ಸವ: ಪ್ರತಿವರ್ಷ ಮಾರ್ಚ್‌ನಲ್ಲಿ ಕೋಲಾರಮ್ಮ ದೇವಿಯ ಬ್ರಹ್ಮರಥೋತ್ಸವ ನಡೆಯುತ್ತದೆ. ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಮಾತ್ರವಲ್ಲದೆ ಆಂಧ್ರ, ತಮಿಳುನಾಡು, ಕೇರಳ, ಉತ್ತರಪ್ರದೇಶ ಹಾಗೂ ವಿದೇಶಗಳಿಂದ ಭಕ್ತರು ಬರುತ್ತಾರೆ. ಆಷಾಢ ಮಾಸದಲ್ಲಿ ಕೋಲಾರಮ್ಮ ಜನ್ಮದಿನೋತ್ಸವ ಆಚರಿಸಲಾಗುತ್ತದೆ, ಪ್ರತಿ ಮಂಗಳವಾರ, ಶುಕ್ರವಾರ ಭಕ್ತರು ನಿಂಬೆಹಣ್ಣಿನಿಂದ ಸಿದ್ಧಪಡಿಸಿದ ಹಣತೆಗಳಿಂದ ದೇವರಿಗೆ ಆರತಿ ಬೆಳಗುವುದು ವಾಡಿಕೆ. ಅಮಾವಾಸ್ಯೆಯಂದು ತಾಯಿಗೆ ವಿಶೇಷ ಪೂಜೆ ನೆರವೇರುತ್ತದೆ. ಕೋವಿಡ್‌ನಿಂದ ಭಕ್ತರ ಸಂಖ್ಯೆ ಕಡಿಮೆಯಿದ್ದರೂ ಪೂಜೆ ಪುನಸ್ಕಾರಗಳನ್ನು ಎಂದಿನಂತೆ ಮುಂದುವರಿಸಿಕೊಂಡು ಹೋಗಲಾಗುತ್ತಿದೆ.
ಕೋಲಾರ ಜಿಲ್ಲೆಯವರೇ ಆದ ಸಾಹಿತಿ, ಸಂಶೋಧಕ ಕೆ.ಎಸ್.ನರಸಿಂಹನ್, ಗಣಿತ ಸಂವಹನಕಾರ, ಉರಿಗಾಮಿ ತಜ್ಞ ವಿ.ಎಸ್.ಎಸ್ ಶಾಸೀ, ಇತಿಹಾಸ ಪ್ರಾಧ್ಯಾಪಕ ಡಾ.ಶಿವಪ್ಪ ಅರಿವು, ಸಾಹಿತಿ ಕೋಟಗಾನಹಳ್ಳಿ ಗಣೇಶಯ್ಯ, ಲಕ್ಷ್ಮೀಪತಿ ಕೋಲಾರ ಸೇರಿ ದೇವಾಲಯದಲ್ಲಿನ ಶಾಸನಗಳ ಕುರಿತು ವಿಶೇಷ ಅಧ್ಯಯನ ನಡೆಸಿ ಪ್ರಬಂಧ ಮಂಡಿಸಿ ಜನತೆಯಲ್ಲಿ ಅರಿವು ಮೂಡಿಸುವ ಕೆಲಸ ಮಾಡಿದ್ದಾರೆ.
ದೇವಾಲಯದಲ್ಲಿ ಸಿಗುವ ಸೇವೆ, ಮಾಹಿತಿಗಾಗಿ ಆರ್ಚಕರಾದ ವಿನಯ್ ದೀಕ್ಷಿತ್- 9980320021, ಕಾರ್ತಿಕ್ ದೀಕ್ಷಿತ್-8971770102 ಸಂಪರ್ಕಿಸಬಹುದು.