ಭಕ್ತರ ಸಮ್ಮುಖದಲ್ಲಿ ಶ್ರೀ ಸಿದ್ದೇಶ್ವರಸ್ವಾಮಿ ದೇಗುಲ ಉದ್ಘಾಟನೆ

03ttnp01
Published on

ತಿ.ನರಸೀಪುರ: ತಾಲೂಕಿನ ಚಿದರವಳ್ಳಿ ಗ್ರಾಮದಲ್ಲಿ ಮರು ನಿರ್ಮಾಣಗೊಂಡಿರುವ ಶ್ರೀ ಸಿದ್ದೇಶ್ವರಸ್ವಾಮಿ ದೇವಾಲಯವನ್ನು ಭಾನುವಾರ ಉದ್ಘಾಟಿಸಲಾಯಿತು.


ದೇವಸ್ಥಾನ ಶಿಥಿಲಗೊಂಡಿದ್ದ ಹಿನ್ನೆಲೆಯಲ್ಲಿ ಹೆಬ್ಬಾಳು ಕೊಪ್ಪಲು ಗ್ರಾಮದ ಭಕ್ತಾದಿಗಳ ಕೋರಿಕೆ ಮೇರೆಗೆ ಸಾ.ರಾ.ಮಹೇಶ್ ಅವರು ಪ್ರವಾಸೋದ್ಯಮ ಸಚಿವರಾಗಿದ್ದಾಗ ದೇವಸ್ಥಾನದ ಅಭಿವೃದ್ಧಿಗೆ 1 ಕೋಟಿ ರೂ. ಅನುದಾನ ನೀಡಿದ್ದರು. ಇದರೊಂದಿಗೆ, ಭಕ್ತಾದಿಗಳಿಂದ 1 ಕೋಟಿ ರೂ. ದೇಣಿಗೆ ಸಂಗ್ರಹಿಸಿ, ಒಟ್ಟು 2 ಕೋಟಿ ರೂ. ವೆಚ್ಚದಲ್ಲಿ ದೇವಾಲಯ ಮರು ನಿರ್ಮಾಣ ಮಾಡಲಾಗಿದ್ದು, ಭಾನುವಾರ ಸಹಸ್ರಾರು ಭಕ್ತಾದಿಗಳ ಸಮ್ಮುಖದಲ್ಲಿ ಉದ್ಘಾಟಿಸಲಾಯಿತು.
ದೇವಾಲಯ ಉದ್ಘಾಟನೆ ಹಿನ್ನೆಲೆಯಲ್ಲಿ ಶುಕ್ರವಾರ ಯಾಗಶಾಲಾ ಪ್ರವೇಶ, ಗಣಪತಿ ಪೂಜೆ, ನವಗ್ರಹಪೂಜೆ, ಮಹಾಮಂಗಳಾರತಿ, ಅಷ್ಟದಿಗ್ಬಂಧನ ಸೇರಿದಂತೆ ಪೂಜಾಕೈಂಕರ್ಯ ಜರುಗಿದವು. ಶನಿವಾರ ಬೆಳಗ್ಗೆ ನವಗ್ರಹ ಹೋಮ ಮೃತ್ಯುಂಜಯ ಹೋಮ, ವಾಸ್ತು ಹೋಮ, ಗ್ರಾಮದೇವತಾ ಹೋಮ, ಅಭಿಷೇಕ ಜರುಗಿತು. ಭಾನುವಾರ ಬೆಳಗ್ಗೆ ಮಹಾಗಣಪತಿ ಹೋಮ, ಸಪ್ತಮಾತೃಕಾ ಹೋಮ, ಪಂಚಾಮೃತ ಅಭಿಷೇಕ, ಕುಂಭಾಭಿಷೇಕ ಕಾರ್ಯಕ್ರಮಗಳೊಂದಿಗೆ ದೇವಾಲಯ ಉದ್ಘಾಟಿಸಲಾಯಿತು. ತಾಲೂಕು, ಜಿಲ್ಲೆ ಸೇರಿದಂತೆ ಇತರ ಜಿಲ್ಲೆಗಳಿಂದಲೂ ಸಹಸ್ರಾರು ಭಕ್ತಾದಿಗಳು ಆಗಮಿಸಿದ್ದರು. ದೇವಸ್ಥಾನದ ಟ್ರಸ್ಟ್ ವತಿಯಿಂದ 10 ಸಾವಿರ ಮಂದಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.


ಗಣ್ಯರ ಗೈರು: ದೇಗುಲ ಉದ್ಘಾಟನಾ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಆಶ್ರಯ ಸಮಿತಿ ಅಧ್ಯಕ್ಷ ಯತೀಂದ್ರ ಸಿದ್ದರಾಮಯ್ಯ, ಕೆಡಿಪಿ ತಾಲೂಕು ಸದಸ್ಯ ಸುನೀಲ್ ಬೋಸ್ ಆಗಮಿಸುವ ನಿರೀಕ್ಷೆಯಿಂದ ಬೃಹತ್ ವೇದಿಕೆ ಸಿದ್ಧಪಡಿಸಲಾಗಿತ್ತು. ಆದರೆ ಕಾರ್ಯಕ್ರಮಕ್ಕೆ ಜನಪ್ರತಿನಿಧಿಯೂ ಬಾರದ್ದರಿಂದ ಆಯೋಜಕರು, ಅಭಿಮಾನಿಗಳು ನಿರಾಶರಾದರು.


ಗ್ರಾ.ಪಂ. ಮಾಜಿ ಅಧ್ಯಕ್ಷ ಚಂದ್ರಶೇಖರ್, ಸದಸ್ಯ ಮಹೇಶ್, ಮಾಜಿ ಸದಸ್ಯ ನಿಜಲಿಂಗಪ್ಪ(ನವೀನ್), ವಿವಿಧ ಸಮುದಾಯದ ಯಜಮಾನರಾದ ಶಂಕರ, ನಂಜುಂಡಯ್ಯ, ರಾಮಚಂದ್ರ, ಮಹದೇವ, ಶಿವಣ್ಣ, ಸುಬ್ಬಮಾಧು, ಮುಖಂಡರಾದ ಮಹೇಶ್, ಸಿ.ಆರ್.ಸಿದ್ದರಾಜು, ರೇವಣ್ಣ, ಶ್ರೀನಿವಾಸ್, ಪುಟ್ಟಸ್ವಾಮಿಗೌಡ, ಚೆನ್ನೇಗೌಡ ಇತರರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net