ಭಕ್ತರ ರಕ್ಷಕ ಶ್ರೀವೀರಾಂಜನೇಯಸ್ವಾಮಿ

31BTP01
ಬೆಟ್ಟದಪುರ ಸಮೀಪದ ಮನುಗನಹಳ್ಳಿ ಗ್ರಾಮದ ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನ
Published on

ಬೆಟ್ಟದಪುರ: ಶ್ರದ್ಧಾಭಕ್ತಿಯಿಂದ ಪೂಜಿಸುವ ಭಕ್ತರ ಬೇಡಿಕೆಗಳನ್ನು ಕರುಣಿಸುವ ದೈವ ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಸಮೀಪದ ಮನುಗನಹಳ್ಳಿ ಗ್ರಾಮದಲ್ಲಿ ನೆಲೆಸಿರುವ ಶ್ರೀ ವೀರಾಂಜನೇಯಸ್ವಾಮಿ.

ಪಿರಿಯಾಪಟ್ಟಣ ತಾಲೂಕಿನ ಗಡಿಗ್ರಾಮವಾದ ಮನುಗನಹಳ್ಳಿಯಲ್ಲಿ ನೆಲೆಸಿರುವ ಶ್ರೀ ವೀರಾಂಜನೇಯ ಸ್ವಾಮಿಯು ಭಕ್ತರ ಪಾಲಿನ ಆರಾಧ್ಯ ದೈವವಾಗಿದೆ. ಅಲ್ಲದೆ ಸ್ವಾಮಿಯ ಮೇಲೆ ಅಪಾರ ನಂಬಿಕೆ ಇಟ್ಟುಕೊಂಡು ನಿಷ್ಕಲ್ಮಶ ಮನಸ್ಸಿನಿಂದ ಮಂಡಿಯೂರಿ ಬೇಡಿಕೊಂಡರೆ ಅದನ್ನು ಕರುಣಿಸುವ ಮಹಾಶಕ್ತಿಯಾಗಿದೆ.

ಗುಡಿಯಲ್ಲಿ ವಿಶೇಷ ಪೂಜೆ: ದೇವಸ್ಥಾನದಲ್ಲಿ ವಾರದ ಪ್ರತಿ ದಿನವೂ ಪೂಜೆ, ಅರ್ಚನೆ ಮತ್ತು ಮಂಗಳಾರತಿ ನೆರವೇರುತ್ತದೆ. ಸಂಕ್ರಾಂತಿ, ಯುಗಾದಿ, ಶಿವರಾತ್ರಿ, ಗಣೇಶ ಚತುರ್ಥಿ, ದೀಪಾವಳಿ ಹಬ್ಬ ಮತ್ತು ಹನುಮ ಜಯಂತಿ ಸಂದರ್ಭಗಳಲ್ಲಿ ಭಕ್ತರು ಆಗಮಿಸಿ ಪೂಜೆ ಸಲ್ಲಿಸುತ್ತಾರೆ. ಹನುಮ ಜಯಂತಿ ದಿನದಂದೂ ಗ್ರಾಮದಲ್ಲಿ ಅದ್ದೂರಿಯಾಗಿ ಹಬ್ಬದ ರೀತಿಯಲ್ಲಿ ಆಚರಣೆ ಮಾಡುತ್ತಾರೆ. ಸಂತಾನ ಭಾಗ್ಯ, ಉದ್ಯೋಗ ಕೋರಿಕೆ, ಮನೆಯಲ್ಲಿ ಕಷ್ಟ, ಕಲ್ಯಾಣ ಭಾಗ್ಯ ಕೂಡದಿರುವುದು ಮತ್ತು ಕುಟುಂಬದಲ್ಲಿ ನೆಮ್ಮದಿ ಇಲ್ಲದಿರುವುದು ಸೇರಿದಂತೆ ಅನೇಕ ಸಮಸ್ಯೆಗಳನ್ನು ಹೊತ್ತು ತಂದು ಸ್ವಾಮಿಗೆ ಮುಂದೆ ಇಟ್ಟು ನಿವಾರಣೆಗೆ ಆರಾಧಿಸಿ ಹರಕೆ ಮಾಡಿಕೊಳ್ಳುತ್ತಾರೆ. ಅಂದುಕೊಂಡಂತೆ ಈಡೇರಿದ ಬಳಿಕ ಬೆಳ್ಳಿ ರೂಪದಲ್ಲಿ ಒಡವೆ, ಪಿಂಗಾಣಿ, ಗಂಟೆ ಮತ್ತು ಮಂಗಳಾರತಿ ತಟ್ಟೆ ಅಂತಹ ವಸ್ತುಗಳನ್ನು ಕಾಣಿಕೆಯಾಗಿ ಕೊಡುವುದು ಹಾಗೂ ಹಣ್ಣು ತುಪ್ಪ ಮಾಡಿಸುವುದು ಹೀಗೆ ಹತ್ತು ಹಲವು ರೀತಿಯಲ್ಲಿ ಹರಕೆಯನ್ನು ತಿರಿಸುವುದು ನಡೆದುಕೊಂಡು ಬಂದಿದೆ.

ಮನಗನಹಳ್ಳಿಯ ಗ್ರಾಮ ದೇವತೆಯಾಗಿರುವ ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನಕ್ಕೆ ಸಮೀಪದ ಕಣಗಾಲು, ಕೊಟಯ್ಯನಕೊಪ್ಪಲು, ರಾಜನಬಿಳಗೂಲಿ, ಐಚನಹಳ್ಳಿ, ಚಪ್ಪರದಹಳ್ಳಿ, ಅಂಬಲಾರೆ, ಹೊನ್ನಾಪುರ, ಹಾರನಹಳ್ಳಿ ಮಾತ್ರವಲ್ಲದೆ ಹಾಸನ, ಚಾಮರಾಜನಗರ, ಮೈಸೂರು ನಗರ, ಬೆಂಗಳೂರು ಸೇರಿದಂತೆ ಕೊಡಗು ಜಿಲ್ಲೆಗಳಿಂದಲೂ ಭಕ್ತಾದಿಗಳು ಆಗಮಿಸಿ ಸ್ವಾಮಿಯ ದರ್ಶನ ಪಡೆದು ಆರಾಧಿಸುತ್ತಾರೆ.

ಪ್ರಾಚೀನ ದೇವಸ್ಥಾನ
ಸುಮಾರು ಎರಡು ನೂರು ವರ್ಷಗಳ ಹಿಂದೆ ಮನುಗನಹಳ್ಳಿ ಗ್ರಾಮದ ಹೊರವಲಯದಲ್ಲಿ ಶ್ರೀ ವೀರಾಂಜನೇಯ ಮೂರ್ತಿಯನ್ನು ಚಿಕ್ಕ ಗುಡಿಯಲ್ಲಿ ಪ್ರತಿಷ್ಠಾಪನೆಯಾಗಿತ್ತು. ಅಂದಿನ ಕಾಲದಲ್ಲಿ ಗ್ರಾಮದ ಹಿರಿಯರು ಊರಿನ ಕಲ್ಯಾಣಕ್ಕಾಗಿ ಮತ್ತು ಯಾವುದೇ ದುಷ್ಟ ಶಕ್ತಿಗಳು ಪ್ರವೇಶಿಸಬಾರದು ಎಂಬ ಅಪಾರ ದೈವನಂಬಿಕೆಯಿಂದ ಹೊರವಲಯದಲ್ಲಿರುವ ದೇವರ ಮೂರ್ತಿಯನ್ನು ಗ್ರಾಮದ ಒಳ ಭಾಗಕ್ಕೆ ತಂದು, ವಿಶೇಷ ಪೂಜೆ ಸಲ್ಲಿಸಿ ಪ್ರತಿಷ್ಠಾಪನೆ ಮಾಡಿದ್ದರು. 2020ರ ನವೆಂಬರ್‌ನಲ್ಲಿ ಸಮಿತಿ ರಚನೆ ಮಾಡಿಕೊಂಡು ಗ್ರಾಮಸ್ಥರು ಮತ್ತು ದಾನಿಗಳ ಸಹಕಾರದಿಂದ ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡುವ ಮೂಲಕ ನೂತನ ದೇವಸ್ಥಾನವನ್ನು ಉದ್ಘಾಟನೆ ಮಾಡಲಾಗಿದೆ.

ನೂತನವಾಗಿ ನಿರ್ಮಾಣ ಮಾಡಿರುವ ದೇವಸ್ಥಾನದ ಮೇಲ್ಭಾಗದಲ್ಲಿ ಶ್ರೀ ಮಾರುತಿಯು ಗದೆಯನ್ನು ಹಿಡಿದು ನಿಂತಿರುವಂತೆ ಮೂರ್ತಿಯನ್ನು ಕೆತ್ತಲಾಗಿದ್ದು, ಇದು ವಿಶೇಷವಾಗಿ ಆಕರ್ಷಣೀಯವಾಗಿದೆ.

ಗುಡಿಗೆ ತಲುಪುವ ದಾರಿ
ಪಿರಿಯಾಪಟ್ಟಣ ತಾಲೂಕು ಕೇಂದ್ರದಿಂದ ಹಲಗನಹಳ್ಳಿ ಗ್ರಾಮದ ಮಾರ್ಗವಾಗಿ ಮನುಗನಹಳ್ಳಿ ಗ್ರಾಮವನ್ನು ತಲುಪಬಹುದು. ತಾಲೂಕು ಕೇಂದ್ರದಿಂದ ಸುಮಾರು 30 ಕಿಮೀ ದೂರದಲ್ಲಿ ಇರುವ ಗಡಿ ಗ್ರಾಮವಾಗಿದ್ದು, ಕಣಗಾಲು ಗ್ರಾಮಕ್ಕೆ ಹೊಂದಿಕೊಂಡಂತೆ ಇದೆ. ಇಲ್ಲಿಗೆ ಸರ್ಕಾರಿ ಹಾಗೂ ಖಾಸಗಿ ವಾಹನಗಳ ಸಂಚಾರ ಬಹಳ ಕಡಿಮೆ. ಹಾಗಾಗಿ ಭಕ್ತರ ಸ್ವಂತ ವಾಹನದಲ್ಲಿ ಬಂದರೆ ಸೂಕ್ತವಾಗಲಿದೆ. ಹೆಚ್ಚಿನ ಮಾಹಿತಿಗೆ ದೇವಸ್ಥಾನದ ಅರ್ಚಕ ಕುಮಾರಸ್ವಾಮಿ ಮೊ.7259851403 ಸಂಪರ್ಕಿಸಬಹುದು.

ಒಂದು ತಲೆಮಾರಿನಿಂದ ನಾನು ದೇವಸ್ಥಾನದ ಅರ್ಚಕನಾಗಿ ಸೇವೆ ಮಾಡುತ್ತಿದ್ದೇನೆ. ದೇವಸ್ಥಾನಕ್ಕೆ ಕೇವಲ ಸ್ಥಳೀಯ ಭಕ್ತಾದಿಗಳಲ್ಲದೇ ಹೊರ ಜಿಲ್ಲೆಗಳಿಂದಲೂ ಹಲವಾರು ಮಂದಿ ಆಗಮಿಸಿ ದೇವರ ಬಳಿ ತಮ್ಮ ಬೇಡಿಕೆಗಳನ್ನು ಇಟ್ಟು ಹರಕೆ ಮಾಡಿಕೊಳ್ಳುತ್ತಾರೆ. ಅದರಲ್ಲೂ ಹೆಚ್ಚಾಗಿ ಸಂತಾನ ಭಾಗ್ಯ, ಮದುವೆ ಭಾಗ್ಯ ಸಮಸ್ಯೆ ಹೊತ್ತು ಹಲವಾರು ಮಂದಿ ಬರುತ್ತಾರೆ. ಸ್ವಾಮಿಯನ್ನು ನಂಬಿ ಒಮ್ಮೆ ಹರಕೆ ಮಾಡಿಕೊಂಡವರಿಗೆ ಒಂದು ವರ್ಷದಲ್ಲಿ ಅದರ ಪ್ರತಿಫಲ ದೊರೆತಿದೆ. ಹಾಗಾಗಿ ಭಕ್ತಾದಿಗಳು ಶ್ರೀ ವೀರಾಂಜನೇಯ ಸ್ವಾಮಿ ಮೇಲೆ ಅಪಾರ ಭಕ್ತಿಯ ನಂಬಿಕೆ ಇಟ್ಟುಕೊಂಡಿದ್ದಾರೆ.
ಕುಮಾರಸ್ವಾಮಿ, ದೇವಸ್ಥಾನದ ಅರ್ಚಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net