ಬ್ರಿಟಿಷರಿಗೆ ಸಿಂಹ ಸ್ವಪ್ನವಾಗಿದ್ದ ಸಂಗೊಳ್ಳಿ ರಾಯಣ್ಣ

Sangolli Rayanna
ನಂದಗಡದಲ್ಲಿರುವ ಸಂಗೊಳ್ಳಿ ರಾಯಣ್ಣ ಸಮಾಧಿ
Published on

| ರಾಯಣ್ಣ ಆರ್.ಸಿ.

ಬೆಳಗಾವಿ: ಗೆರಿಲ್ಲಾ ಯುದ್ಧದ ಮೂಲಕ ಬ್ರಿಟಿಷರ ನಿದ್ದೆಗೆಡಿಸಿದ್ದ ಸಂಗೊಳ್ಳಿ ರಾಯಣ್ಣ ಸ್ವತಂತ್ರ ನಾಡಿನ ಕನಸು ಕಟ್ಟಿಕೊಂಡೇ ಹುತಾತ್ಮನಾದ. ಜನತೆಯ ಕಣ್ಮಣಿಯಾಗಿದ್ದ ರಾಯಣ್ಣ ಬ್ರಿಟಿಷರ ವಿರುದ್ಧ ಸಾರಿದ ಸಮರ ಅವಿಸ್ಮರಣೀಯ. ಬೆಳಗಾವಿ, ಧಾರವಾಡ, ಉತ್ತರ ಕನ್ನಡ ಜಿಲ್ಲೆಗಳನ್ನು ವ್ಯಾಪಿಸಿದ ಕಿತ್ತೂರ ಭೂ ಪ್ರದೇಶವನ್ನು ರಾಯಣ್ಣ ಗೆರಿಲ್ಲಾ ಯುದ್ಧಕ್ಕೆ ಸಮರ್ಥವಾಗಿ ಬಳಸಿಕೊಂಡ. ಮಲೆನಾಡಿನ ದಟ್ಟ ಕಾಡುಗಳು ರಾಯಣ್ಣನ ಸೈನ್ಯಕ್ಕೆ ಭದ್ರಕೋಟೆಯಂತಾಗಿದ್ದವು.

ಬ್ರಿಟಿಷ್ ಅಧಿಕಾರಿಗಳು ರಾಯಣ್ಣನ ಹೆಸರು ಕೇಳಿದರೆ ನಡುಗುತ್ತಿದ್ದರು. ವಸಾಹತುಶಾಹಿ ಸೈನ್ಯದ ವಿರುದ್ಧ ಸಿಡಿದೆದ್ದ ಸಂಗೊಳ್ಳಿ ರಾಯಣ್ಣನಿಗೆ ಅಪಾರ ಜನಬೆಂಬಲ ದೊರಕಿತ್ತು. ಕಿತ್ತೂರ ಸಂಸ್ಥಾನಕ್ಕೆ ಸೇರಿದ್ದ ಈಗಿನ ಬೈಲಹೊಂಗಲ ತಾಲೂಕಿನ ಸಂಗೊಳ್ಳಿ ಗ್ರಾಮದಲ್ಲಿ ಜನಿಸಿದ್ದ ರಾಯಣ್ಣ ಕಿತ್ತೂರ ದೇಸಾಯಿಗಳ ಸಶಸ್ತ್ರ ಅನುಚರನಾಗಿದ್ದ. ಹಲವಾರು ಎಕರೆ ಜಮೀನನ್ನು ಗುತ್ತಿಗೆ ಮೇಲೆ ಪಡೆದು ರೈತನಾಗಿದ್ದ. ಹಿಂದುಳಿದ ಕುರುಬ ಜನಾಂಗಕ್ಕೆ ಸೇರಿದ್ದ ಈತ ಹಳ್ಳಿ ಕಾವಲುಗಾರನಾಗಿದ್ದ. ಬ್ರಿಟಿಷ್ ಸಾಮ್ರಾಜ್ಯಶಾಹಿಗಳ ವಿರುದ್ಧ ವೀರರಾಣಿ ಕಿತ್ತೂರ ಚನ್ನಮ್ಮ ಸಿಡಿದೆದ್ದು ಯುದ್ಧ ಸಾರಿದಾಗ ಅದರಲ್ಲಿ ಭಾಗವಹಿಸಿದ್ದ ರಾಯಣ್ಣಗೆ ಆಗಿನ್ನೂ 29 ವರ್ಷ. ಕಿತ್ತೂರ ಸಂಗ್ರಾಮದ ಬಳಿಕ 1826ರಲ್ಲಿ ಎಲ್ಲ ಬಂಧಿತರಿಗೂ ಸಾರ್ವತ್ರಿಕ ಕ್ಷಮೆ ನೀಡಿ, ಎಚ್ಚರಿಕೆಯೊಂದಿಗೆ ಬಿಡುಗಡೆ ಮಾಡಿದಾಗ ರಾಯಣ್ಣನು ಕೂಡ ಜೈಲಿನಿಂದ ಹೊರಬಂದಿದ್ದ.

ಗೆರಿಲ್ಲಾ ಯುದ್ಧ: 1830ರ ಜನವರಿ 5ರಂದು ಬಿಡಿ ಗ್ರಾಮದಲ್ಲಿದ್ದ ಬ್ರಿಟಿಷರ ಕಚೇರಿಗೆ ಬೆಂಕಿ ಹಚ್ಚುವ ಮೂಲಕ ಗೆರಿಲ್ಲಾ ಯುದ್ಧ ಸಾರಿದಾಗ ಆತನೊಂದಿಗೆ ಜೊತೆಗಿದ್ದವರ ಸಂಖ್ಯೆ ನೂರು. ಗೆರಿಲ್ಲಾ ಹೋರಾಟ ಪ್ರಾರಂಭವಾದ ನಾಲ್ಕೇ ತಿಂಗಳಲ್ಲಿ ಏಪ್ರಿಲ್ 8 ರಂದು ಬಂಧನವಾದಾಗ 1000 ಸಾವಿರ ಜನ ಹೋರಾಟಗಾರರಿದ್ದರು ಎಂದು ಧಾರವಾಡ ಕಲೆಕ್ಟರ್ ಆಗಿದ್ದ ನಿಸ್ಟಟ್ ತನ್ನ ಪತ್ರದಲ್ಲಿ ದಾಖಲಿಸಿದ್ದಾನೆ.

1830ರ ಜ. 14ರಂದು ನಿಸ್ಟಟ್ ಬರೆದ ಮತ್ತೊಂದು ಪತ್ರದಲ್ಲಿ, ‘ರಾಯಣ್ಣನ ಗೆರಿಲ್ಲಾ ಯುದ್ಧಕ್ಕೆ ಕಿತ್ತೂರ ನಾಡಿನ ಸರ್ವ ಜನತೆ ಕೈಜೋಡಿಸಿದ್ದಾರೆ. ಬಂಡುಕೋರರ ವಿರುದ್ಧ ನಮಗೆ ಯಾರೂ ಸರಿಯಾದ ಮಾಹಿತಿ ನೀಡುತ್ತಿಲ್ಲ. ಬದಲಾಗಿ ತಪ್ಪು ಮಾಹಿತಿ ನೀಡಿ, ದಾರಿ ತಪ್ಪಿಸುತ್ತಿದ್ದಾರೆ. ನಮ್ಮ ಚಲನವಲನಗಳ ಬಗ್ಗೆ ಬಂಡುಕೋರರಿಗೆ ಮಾಹಿತಿ ನೀಡುತ್ತಿದ್ದು, ಅವರನ್ನು ಪತ್ತೆ ಹಚ್ಚಲು ಸಾಧ್ಯವಾಗುತ್ತಿಲ್ಲ. ಹೋರಾಟ ಪ್ರಬಲವಾಗಿದೆ’ ಎಂದು ದಾಖಲಿಸಿದ್ದಾನೆ.

ನೇರ ಹೋರಾಟದ ಮೂಲಕ ಸಂಗೊಳ್ಳಿ ರಾಯಣ್ಣನನ್ನು ಸೆರೆ ಹಿಡಿಯಲು ಅಸಾಧ್ಯವಾದ ಕಾರಣ ಸಂಚು ಮಾಡಿ, ಸೆರೆ ಹಿಡಿಯಲು ಬ್ರಿಟಿಷ್ ಅಧಿಕಾರಿಗಳು ತೀರ್ವನಿಸಿದರು. ರಾಯಣ್ಣನನ್ನು ಮೋಸದಿಂದ ಹಿಡಿಯಲು ನೆರವಾದವರಿಗೆ ಜಮೀನು, ನಗದು ಬಹುಮಾನ ನೀಡುವ ಆಮಿಷ ಒಡ್ಡಲಾಯಿತು. ವೆಂಕನಗೌಡ, ಲಿಂಗನಗೌಡ, ಖುದ್ದಾಪುರದ ಪಟೇಲ ಮೊದಲಾದವರು ಹೋರಾಟದ ನೆಪದಲ್ಲಿ ಸಂಗೊಳ್ಳಿ ರಾಯಣ್ಣನ ಗೆರಿಲ್ಲಾ ಸೇನೆಯಲ್ಲಿ ಸೇರಿಕೊಂಡರು.

ನಾನು ಸತ್ತರೂ ನನ್ನಂತಹ ಸಹಸ್ರಾರು ಜನ ದೇಶಭಕ್ತರು ಹುಟ್ಟಿಕೊಳ್ಳುತ್ತಾರೆ. ಮುಂದೊಂದು ದಿನ ನೀವು ಭಾರತ ಬಿಟ್ಟು ತೊಲಗಬೇಕಾಗುತ್ತದೆ. | ಸಂಗೊಳ್ಳಿ ರಾಯಣ್ಣ

ಸ್ಟೋಕ್ಸ್ ಬರೆದ ದಾಖಲೆಯಲ್ಲಿ ಏನಿದೆ?

ಸಂಗೊಳ್ಳಿ ರಾಯಣ್ಣ ತನ್ನ ಶಸ್ತ್ರಾಸ್ತ್ರಗಳನ್ನು ಬದಿಗಿಟ್ಟು ಬೈಲಹೊಂಗಲ ತಾಲೂಕಿನ ನೇಗಿನಹಾಳ ಗ್ರಾಮದ ಹೊರವಲಯದಲ್ಲಿರುವ ಬಾವಿಯಲ್ಲಿ ಸ್ನಾನ ಮಾಡುತ್ತಿದ್ದಾಗ, ನೇಗಿನಹಾಳದ ಸನಾಡೆ ಲಕ್ಕಪ್ಪ ಎಂಬಾತ ಏಕಾಏಕಿಯಾಗಿ ರಾಯಣ್ಣನ ಮೇಲೆರಗಿದ. 10-12 ಜನ ಆತನನ್ನು ಸುತ್ತುವರಿದು ಹಗ್ಗದಿಂದ ಕಟ್ಟಿಹಾಕಿ ಧಾರವಾಡಕ್ಕೆ ಕರೆತಂದರು. ರಾಯಣ್ಣನ ಜೊತೆ 12 ಜನರು ಸಿಕ್ಕಿಬಿದ್ದರು. 12 ಮಂದಿಯಲ್ಲಿ ಐವರು ಬೇಡ ಜನಾಂಗದವರು, ಇಬ್ಬರು ಲಿಂಗಾಯತರು, ತಲಾ ಒಬ್ಬೊಬ್ಬ ಪಂಚಮಸಾಲಿ, ಮುಸ್ಲಿಂ, ಜೈನ, ನಾರ್ವೆಕರ ಸೇರಿದ್ದರು. ರಾಯಣ್ಣ ಸ್ವತಃ ಕುರುಬ ಜಾತಿಗೆ ಸೇರಿದವನಾಗಿದ್ದ. ಅವನೊಂದಿಗೆ ಭೋವಿ ಜಾತಿಯವರಲ್ಲದೆ, ಸಿದ್ದಿ ಜನಾಂಗದವರು ಇದ್ದರು. ಕಿತ್ತೂರಿನ ಪಶ್ಚಿಮ ಭಾಗದಲ್ಲಿ ವಾಸಿಸುತ್ತಿದ್ದ ಈ ಸಿದ್ದಿಗಳು ರಾಯಣ್ಣನ ಅಂಗರಕ್ಷಕರಾಗಿದ್ದರು. ಗಜವೀರಾ ಎಂಬ ಸಿದ್ದಿಯಂತೂ ರಾಯಣ್ಣನ ಸಾವಿನ ಸುದ್ದಿಕೇಳಿ ಆತ್ಮಹತ್ಯೆ ಮಾಡಿಕೊಂಡ ಎಂಬುದು ಇತಿಹಾಸ ಪುಟಗಳಿಂದ ತಿಳಿದು ಬರುತ್ತಿದೆ. ನ್ಯಾಯಾಲಯದಲ್ಲಿ ನಿರಪರಾಧಿ ಎಂದು ತೀರ್ವನವಾದರೂ, ಆತನನ್ನು ಗಲ್ಲಿಗೇರಿಸದಿದ್ದರೆ ತಮಗೆ ಉಳಿಗಾಲವಿಲ್ಲ ಎಂದು ಕಿತ್ತೂರ ಪ್ರಾಂತ್ಯದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಬ್ರಿಟಿಷ್ ಅಧಿಕಾರಿಗಳ ಭಾವನೆ ಹಾಗೂ ರಾಯಣ್ಣನನ್ನು ಮೋಸದಿಂದ ಹಿಡಿದುಕೊಟ್ಟವರ ಒತ್ತಾಯದಿಂದಾಗಿ ಬ್ರಿಟಿಷ್ ಉನ್ನತ ಅಧಿಕಾರಿಗಳು ಆತನನ್ನು ಗಲ್ಲಿಗೇರಿಸಲು ತೀರ್ವನಿಸಿದರು.

224ನೇ ಜಯಂತಿ ಇಂದು: ಕಾಕತಾಳಿಯವೆಂದರೆ, ರಾಯಣ್ಣನ ಜನ್ಮದಿನವು ಸ್ವಾತಂತ್ರ್ಯ ದಿನದಂದು ಹಾಗೂ ಪುಣ್ಯತಿಥಿಯು ಗಣರಾಜ್ಯೋತ್ಸವ ದಿನದಂದು ಬರುತ್ತದೆ. ಬೈಲಹೊಂಗಲ ತಾಲೂಕಿನ ಸಂಗೊಳ್ಳಿ ಗ್ರಾಮದಲ್ಲಿ 1798ರ ಆಗಸ್ಟ್ 15ರಂದು ರಾಯಣ್ಣ ಜನಿಸಿದ್ದ. 1831ರ ಜನವರಿ 26ರಂದು ಆತನನ್ನು ಖಾನಾಪುರ ತಾಲೂಕಿನ ನಂದಗಡದಲ್ಲಿ ಗಲ್ಲಿಗೇರಿಸಲಾಯಿತು. ಈಗ ಸಂಗೊಳ್ಳಿ ರಾಯಣ್ಣನ 224ನೇ ಜಯಂತಿ ಆಚರಿಸಲಾಗುತ್ತಿದೆ.

ನಂದಗಡದ ರಸ್ತೆಯಲ್ಲಿದೆ ರಾಯಣ್ಣ ಸಮಾಧಿ: ಬ್ರಿಟಿಷ ಅಧಿಕಾರಿ ಸ್ಟೋಕ್ಸ್ ಹೇಳುವಂತೆ ಖಾನಾಪುರದ ನಂದಗಡದ ರಸ್ತೆಯಲ್ಲಿ ರಾಯಣ್ಣ ನೇಣುಗಂಬದತ್ತ ಹಾದು ಹೋಗುತ್ತಿದ್ದಾಗ ಒಂದು ಸ್ಥಳವನ್ನು ತೋರಿಸಿ, ಇಲ್ಲಿ ತನ್ನ ಹೆಣವನ್ನು ಹೂಳಬೇಕೆಂದು ಹೇಳಿದ. ಹಾಗೆಯೇ ಆಲದ ಮರವನ್ನು ನೆಡಬೇಕೆಂದು ಹೇಳಿದ. ಈಗ ನಂದಗಡದಲ್ಲಿರುವ ಬೃಹದಾಕಾರದ ಆಲದ ಮರವು ರಾಯಣ್ಣನ ಸಮಾಧಿ ಮೇಲೆ ಬೆಳೆದಿದೆ. ಸಂಗೊಳ್ಳಿ ರಾಯಣ್ಣನನ್ನು 1831, ಜ. 26 ರಂದು ನೇಣುಗಂಬಕ್ಕೆ ಏರಿಸಲಾಯಿತು. ಸ್ವಾತಂತ್ರ್ಯ ಹೋರಾಟದ ಬೀಜ ಚಿಗುರೊಡೆಯುವ ಮುನ್ನವೇ ಕಿತ್ತೂರ ನಾಡಿನಾದ್ಯಂತ ಗೆರಿಲ್ಲಾ ಯುದ್ಧ ಪ್ರಾರಂಭವಾಯಿತು. ಆ ಗಿಡದ ರೆಂಬೆ, ಕೊಂಬೆಗಳು ರೂಪುಗೊಳ್ಳುವ ಮುನ್ನವೇ ಸಂಗೊಳ್ಳಿ ರಾಯಣ್ಣನ ತ್ಯಾಗ ಬಲಿದಾನ ರೈತಾಪಿ ಜನರನ್ನು ಬಡಿದೆಬ್ಬಿಸಿತು. ಎಲ್ಲೆಡೆ ಸ್ವಾತಂತ್ಯ ಹೋರಾಟದ ಕಿಚ್ಚು ಹೊತ್ತಿಕೊಂಡಿತು ಎಂದು ಬ್ರಿಟಿಷರ ದಾಖಲೆಗಳೇ ಸಂಗೊಳ್ಳಿ ರಾಯಣ್ಣನ ಇತಿಹಾಸವನ್ನು ಸಾರಿ ಹೇಳುತ್ತವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net