ಬ್ರಾಹ್ಮಣ ಸಮುದಾಯ ಪ್ರತಿಭಟನೆ

17HDK5
Published on

ಎಚ್.ಡಿ.ಕೋಟೆ: ಬ್ರಾಹ್ಮಣರ ಮತ್ತು ಬ್ರಾಹ್ಮಣ್ಯದ ವಿಚಾರವಾಗಿ ಅವಹೇಳನಕಾರಿಯಾಗಿ ಮಾತನಾಡಿರುವ ವಿಚಾರವಾದಿ ಪ. ಮಲ್ಲೇಶ್ ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿ ಪಟ್ಟಣದ ಬ್ರಾಹ್ಮಣ ಸಮಾಜದ ವತಿಯಿಂದ ಗುರುವಾರ ಪ್ರತಿಭಟನೆ ನಡೆಯಿತು.


ಪಟ್ಟಣದ ಶ್ರೀರಾಮ ಮಂದಿರದಿಂದ ಹೊರಟ ಪ್ರತಿಭಟನಾಕಾರರು ಮಿನಿ ವಿಧಾನಸೌಧ ಮುಂಭಾಗದಲ್ಲಿ ಜಮಾಯಿಸಿ ಪ್ರತಿಭಟಿಸಿದರು. ಇತ್ತೀಚೆಗೆ ಮೈಸೂರಿನಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಪ.ಮಲ್ಲೇಶ್ ಅವರು ಬ್ರಾಹ್ಮಣ ಮತ್ತು ಬ್ರಾಹ್ಮಣ್ಯ ವಿಚಾರಕ್ಕೆ ಸಂಬಂಧಿಸಿದಂತೆ ಕೀಳಾಗಿ ಮಾತನಾಡಿರುವುದನ್ನು ಬ್ರಾಹ್ಮಣ ಸಮುದಾಯ ಸಹಿಸುವುದಿಲ್ಲ. ಸಮಾಜ ಇದುವರೆಗೆ ಸ್ವಾಭಿಮಾನ ವಿಚಾರದಲ್ಲಿ ಯಾರ ವಿರುದ್ಧವೂ ತಲೆತಗ್ಗಿಸುವ ರೀತಿಯಲ್ಲಿ ನಡೆದುಕೊಂಡು ಬಂದಿಲ್ಲ. ಆದರೆ, ಬ್ರಾಹ್ಮಣರ ಸ್ವಾಭಿಮಾನ ಕೆಣಕುವ ಮತ್ತು ಸಮಾಜದಲ್ಲಿ ಅಶಾಂತಿ, ಸೌಹಾರ್ದತೆ ಹಾಳು ಮಾಡುವ ಇಂತಹ ಹೇಳಿಕೆಯನ್ನು ನಾವು ಸಹಿಸುವುದಿಲ್ಲ ಎಂದು ಮುಖಂಡರು ಅಸಮಾಧಾನ ವ್ಯಕ್ತಪಡಿಸಿದರು.


ಮಲ್ಲೇಶ್ ತಮ್ಮ ಭಾಷಣದಲ್ಲಿ ವೇದ, ಉಪನಿಷತ್ತುಗಳು ಮತ್ತು ಬ್ರಾಹ್ಮಣರನ್ನು ನಂಬಬೇಡಿ. ಬ್ರಾಹ್ಮಣರು ಈ ದೇಶವನ್ನು ಹಾಳು ಮಾಡುತ್ತಿದ್ದಾರೆ ಎಂದು ನಮ್ಮ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ್ದಾರೆ. ತಮ್ಮ ಹೇಳಿಕೆಯನ್ನು ಹಿಂಪಡೆಯಬೇಕು. ಸಮಾಜದಲ್ಲಿ ಆಶಾಂತಿ ಉಂಟು ಮಾಡುವ ವ್ಯಕ್ತಿಗಳ ವಿರುದ್ಧ ಸರ್ಕಾರ ಸ್ವಯಂ ದೂರು ದಾಖಲಿಸಿಕೊಂಡು ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ತಹಸೀಲ್ದಾರ್ ಸಣ್ಣ ರಾಮಪ್ಪ ಅವರಿಗೆ ಮನವಿ ಪತ್ರ ಸಲ್ಲಿಸಿದರು.


ಮುಖಂಡರಾದ ಎಂ.ವಿ.ಗೋಪಿನಾಥ್, ಎಚ್.ವಿ.ಭುಜಂಗರಾವ್, ರಾಜ್‌ಗೋಪಾಲ್, ಅನಂತರಾಮು, ಎನ್.ಚಂದ್ರಮೌಳಿ, ಜಿ.ನಂದೀಶ್, ಮಂಜುನಾಥ್, ಸೋಮಣ್ಣ, ವೇಣುಗೋಪಾಲ್, ಶ್ರೀಕಂಠ, ರಘುನಾಥ್, ನಾಗರಾಜು, ಸೋಮ ಸುಂದರ, ಎಚ್.ಆರ್. ವೈದ್ಯನಾಥ್, ರಾಜಣ್ಣ, ಪುರಸಭೆ ಮಾಜಿ ಸದಸ್ಯ ಎಚ್.ಎಸ್.ನಾಗೇಂದ್ರ, ಮಂಜುನಾಥ್, ಸುನಿಲ್ ಕುಮಾರ್, ತೇಜಸ್ವಿ, ಮಣಿಕಾಂತ್, ಚಂದ್ರಶೇಖರ್, ಶ್ರೀನಾಥ್, ಶ್ರೀನಿವಾಸ್, ಸತ್ಯನಾರಾಯಣ, ರಘು, ಫಣೀಶ್, ವಾಸುದೇವ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net