

ಉತ್ತಮ ಪ್ರದರ್ಶನ ನೀಡಿದ ಮೈಸೂರು ವಿಭಾಗ ತಂಡವು ದಸರಾ ಕ್ರೀಡಾಕೂಟ ಬಾಲ್ ಬ್ಯಾಡ್ಮಿಂಟನ್ ಸ್ಪರ್ಧೆಯ ಪುರುಷರ ಹಾಗೂ ಮಹಿಳೆಯರ ಎರಡೂ ವಿಭಾಗದಲ್ಲೂ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಎರಡು ವಿಭಾಗದಲ್ಲೂ ಆಡಿದ ನಾಲ್ಕು ಲೀಗ್ ಪಂದ್ಯಗಳಲ್ಲೂ ಜಯ ಸಾಧಿಸುವ ಮೂಲಕ ಈ ಸಾಧನೆ ಮಾಡಿದೆ. ಪುರುಷರ ಮತ್ತು ಮಹಿಳೆಯರ ಎರಡೂ ವಿಭಾಗದಲ್ಲಿ ಬೆಂಗಳೂರು ನಗರ ವಿಭಾಗ ದ್ವಿತೀಯ ಹಾಗೂ ಬೆಂಗಳೂರು ಗ್ರಾಮಾಂತರ ತಂಡ ತೃತೀಯ ಸ್ಥಾನ ಪಡೆದವು.
ಶನಿವಾರ ನಡೆದ ಪುರುಷರ ವಿಭಾಗದ ಲೀಗ್ ಪಂದ್ಯದಲ್ಲಿ ಮೈಸೂರು ತಂಡ ಕಲಬುರಗಿ ಹಾಗೂ ಬೆಳಗಾವಿ ತಂಡಗಳ ವಿರುದ್ಧ ಜಯ ಸಾಧಿಸಿತು. ಮಹಿಳಾ ವಿಭಾಗದಲ್ಲಿ ಮೈಸೂರು ತಂಡ ಬೆಂಗಳೂರು ನಗರ ಹಾಗೂ ಬೆಂಗಳೂರು ಗ್ರಾಮಾಂತರ ತಂಡವನ್ನು ಸೋಲಿಸಿತು.