ಬೇಸಿಗೆಯಲ್ಲಿ ನೀರಿನ ಅಭಾವವಾಗದಂತೆ ಎಚ್ಚರ ವಹಿಸಿ

9HDK1
Published on

ಎಚ್.ಡಿ.ಕೋಟೆ: ತಾಲೂಕಿನ ತಾರಕ ಜಲಾಶಯದಲ್ಲಿ 42 ಕೋಟಿ ರೂ. ವೆಚ್ಚದ ಜಲಾಶಯ ಪುನಶ್ಚೇತನ ಮತ್ತು ಅಭಿವೃದ್ಧಿ ಕಾಮಗಾರಿಗೆ ಶಾಸಕ ಅನಿಲ್ ಚಿಕ್ಕಮಾದು ಚಾಲನೆ ನೀಡಿದರು.


ತಾಲೂಕಿನಲ್ಲಿ ಕಬಿನಿ, ನುಗು, ತಾರಕ ಮೂರು ಜಲಾಶಯಗಳಿದ್ದರೂ ತಾಲೂಕಿನ ರೈತರು ಅವಲಂಬಿತರಾಗಿರುವುದು ತಾರಕ ಜಲಾಶಯವನ್ನು. ನೀರಾವರಿ ಇಲಾಖೆ ಅಧಿಕಾರಿಗಳು ರೈತರಿಗೆ ತೊಂದರೆಯಾಗದಂತೆ ಜಲಾಶಯದಿಂದ ಬೆಳೆಗೆ ನೀರು ಹರಿಸಬೇಕು. ಇನ್ನು ಮೂರು ತಿಂಗಳ ಕಾಲ ಬೇಸಿಗೆ ಬರಲಿದ್ದು ಜಾನುವಾರುಗಳಿಗೆ ನೀರಿನ ಅಭಾವ ಆಗದಂತೆ ಕ್ರಮ ವಹಿಸುವಂತೆ ಅವರು ಸೂಚಿಸಿದರು.
ಕ್ಷೇತ್ರದ ಅಭಿವೃದ್ಧಿಗೆ ಕೋಟ್ಯಂತರ ರೂ. ಅನುದಾನವನ್ನು ತಂದಿದ್ದೇನೆ. ಆದರೆ, ನನ್ನ ಗಮನಕ್ಕೆ ಬಾರದೆ ಗುತ್ತಿಗೆದಾರರ ಜತೆ ಅಧಿಕಾರಿಗಳು ಶಾಮೀಲಾಗಿ ಕಾಮಗಾರಿ ನಡೆಸುತ್ತಿರುವುದು ಇದೆಂಥ ಶಿಷ್ಟಾಚಾರ ಎಂದು ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡರು.


ತಾರಕ ಜಲಾಶಯದ ಅಭಿವೃದ್ಧಿಗೆ ಈಗಾಗಲೇ 20 ಕೋಟಿ ರೂ. ಬಿಡುಗಡೆ ಆಗಿದೆ. ಆದರೆ, ಗುತ್ತಿಗೆದಾರರ ಜತೆ ಅಧಿಕಾರಿಗಳು ಸೇರಿಕೊಂಡು ಈ ಭಾಗದ ಜನಪ್ರತಿನಿಧಿಗಳ ಹಾಗೂ ನನ್ನ ಗಮನಕ್ಕೆ ತಾರದೆ ಶಿಷ್ಟಾಚಾರ ಉಲ್ಲಂಘನೆ ಮಾಡಿದ್ದೀರಾ. ಈ ಬಗ್ಗೆ ಅಧಿವೇಶನದಲ್ಲಿ ಚರ್ಚೆ ಮಾಡಿದ್ದರೆ ಅಧಿಕಾರಿಗಳು ಅಮಾನತು ಆಗುತ್ತಿದ್ದರು. ಆದರೆ, ಯಾರಿಗೂ ತೊಂದರೆ ಕೊಡುವ ಮನಸ್ಸು ನನಗಿಲ್ಲ. 40 ವರ್ಷಗಳ ಹಿಂದೆ ನಿರ್ಮಾಣಗೊಂಡ ತಾರಕ ಜಲಾಶಯ ಮತ್ತಷ್ಟು ಅಭಿವೃದ್ಧಿ ಆಗಬೇಕಾಗಿದೆ. ಅದಕ್ಕಾಗಿ ನನ್ನ ಹೋರಾಟ ನಿರಂತರವಾಗಿದೆ ಎಂದರು.


7 ವರ್ಷಗಳ ಹಿಂದೆ 14 ಕೋಟಿ ರೂ. ವೆಚ್ಚದಲ್ಲಿ ತಾರಕ ನಾಲಾ ಅಭಿವೃದ್ಧಿಗೆ ಟೆಂಡರ್ ಪಡೆದ ಗುತ್ತಿಗೆದಾರನಿಂದ ಕೆಲಸವನ್ನು ಇನ್ನು ಪೂರ್ಣಗೊಳಿಸುವಲ್ಲಿ ಅಧಿಕಾರಿಗಳು ಸಂಪೂರ್ಣ ವಿಫಲರಾಗಿದ್ದಾರೆ. ವಿಳಂಬ ಮಾಡಿದ ಗುತ್ತಿಗೆದಾರನಿಗೆ ಕೆಲಸ ಮಾಡಲು ಅವಕಾಶ ನೀಡುತ್ತಿರುವುದು ಅನೇಕ ಅನುಮಾನಕ್ಕೆ ಕಾರಣವಾಗಿದೆ. ಈ ಬಗ್ಗೆ ತನಿಖೆ ನಡೆಸಲು ಸೂಚಿಸುತ್ತೇನೆ. ತಾರಕ, ಕಬಿನಿ ಜಲಾಶಯದ ಮುಂಭಾಗ ಗಾರ್ಡನ್ ನಿರ್ಮಾಣ ಮಾಡಲು ಮುಂದಿನ ಬಜೆಟ್‌ನಲ್ಲಿ ಅನುದಾನ ನೀಡುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದ್ದು ಅಧಿಕಾರಿಗಳು ವರದಿ ತಯಾರಿಸುವಂತೆ ಸೂಚಿಸಿದರು.


ಕಬಿನಿ ಕಾರ್ಯಪಾಲಕ ಇಂಜಿನಿಯರ್ ಚಂದ್ರಶೇಖರ್, ಮಂಜುನಾಥ್, ಬೋರೇಗೌಡ, ಗುತ್ತಿಗೆದಾರ ನಾರಾಯಣರೆಡ್ಡಿ, ಮುಖಂಡರಾದ ಎಚ್.ಸಿ.ನರಸಿಂಹಮೂರ್ತಿ, ಹಿರೇಹಳ್ಳಿ ಸೋಮೇಶ್, ಸತೀಶ್‌ಗೌಡ, ನಾಗನಹಳ್ಳಿ ಪ್ರದೀಪ್, ಸಂತೋಷ್, ಬಾಲಯ್ಯ, ನವೀನ್ ದಾಸ್, ಮೌಲನ್, ರಾಜು ಉಪಕಾರಿ, ನಾಗೇಂದ್ರ, ಸಿದ್ದರಾಮ, ಸುರೇಶ್, ಉಮೇಶ್, ಜಯರಾಮ್, ಅಶೋಕ, ನಾಗನಾಯಕ, ಜಯರಾಜ್, ಕಾಂತ ನಾಯಕ, ಬಸವರಾಜು, ಸುಬ್ರಮಣ್ಯ, ಸೌಮ್ಯಾ, ಮೋಹನ, ನಟರಾಜ್, ಮಲ್ಲಿಕಾರ್ಜುನ್, ಸೋಮೇಗೌಡ, ಮಂಜುನಾಥ, ಪಿಡಿಒ ಸಂತೋಷ್ ನಾಗ್, ರವಿಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net