ಬೇಡಿಕೆಗಳ ಈಡೇರಿಸದಿದ್ದರೆ ಚುನಾವಣೆ ಬಹಿಷ್ಕಾರ

ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಎಚ್.ಡಿ. ಕೋಟೆ ಮತ್ತು ಸರಗೂರು ತಾಲೂಕಿನ ಯರವ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಶುಕ್ರವಾರ ನಡೆದ ಪ್ರತಿಭಟನೆಯಲ್ಲಿ ಸಮುದಾಯದ ಮುಖಂಡ ಶೈಲೇಂದ್ರ ಮಾತನಾಡಿದರು.
10HDK02
Published on

ಎಚ್.ಡಿ. ಕೋಟೆ: ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಎಚ್.ಡಿ. ಕೋಟೆ ಮತ್ತು ಸರಗೂರು ತಾಲೂಕಿನ ಯರವ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಶುಕ್ರವಾರ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.


ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ಸಮುದಾಯ ಭವನದಿಂದ ಹೊರಟ ಪ್ರತಿಭಟನಾಕಾರರು ಹುಣಸೂರು-ಬೇಗೂರು ರಸ್ತೆಯಲ್ಲಿ ಸಾಗಿ ಜೇನುಕುರುಬ, ಯರವ, ಕಾಡುಕುರುಬ (ಬೆಟ್ಟಕುರುಬ), ಸೋಲಿಗ ಸಮುದಾಯಗಳು ತಲತಲಾಂತದಿಂದ ಅರಣ್ಯದ ಒಳಗೆ ಹಾಗೂ ಆರಣ್ಯದ ಅಂಚಿನಲ್ಲಿ ವಾಸ ಮಾಡುತ್ತಿದ್ದ ನಮ್ಮನ್ನು 1972ರ ವನ್ಯಜೀವಿ ಸಂರಕ್ಷಣೆ ಕಾಯ್ದೆಯಡಿ ಕಬಿನಿ, ತಾರಕ, ಹೆಬ್ಬಾಳ ಹಾಗೂ ನುಗು ಅಣೆಕಟ್ಟುಗಳನ್ನು ಕಟ್ಟುವಾಗ ಆದಿವಾಸಿಗಳಿಗೆ ಯಾವುದೇ ಪುನರ್ವಸತಿ ಕಲ್ಪಿಸದೆ ಏಕಾಏಕಿ ಸರ್ಕಾರ ಅರಣ್ಯದಿಂದ ಹೊರತಂದು ಅತಂತ್ರ ಮಾಡಿದರು ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.


ನಂತರ ತಾಲೂಕು ಆಡಳಿತ ಸೌಧದ ಎದುರು ಸಮಾವೇಶಗೊಂಡ ಪ್ರತಿಭಟನಾಕಾರರು ಬೇಡಿಕೆಗಳನ್ನು ಈಡೇರಿಸದೇ ಇದ್ದರೆ ಮುಂಬರುವ ವಿಧಾನಸಭಾ ಚುನಾವಣೆ ಬಹಿಷ್ಕಾರ ಮಾಡುವುದಾಗಿ ಎಚ್ಚರಿಕೆ ನೀಡಿದರು.


ಆದಿವಾಸಿ ಮುಖಂಡ ಶೈಲೇಂದ್ರ ಮಾತನಾಡಿ, ಅರಣ್ಯ ಹಕ್ಕು ಕಾಯ್ದೆ 2006ರ ನಿಯಮ 2008ರ ತಿದ್ದುಪಡಿ 2012ರ ಪ್ರಕಾರ ನೊಂದ ಸಮುದಾಯಗಳಿಗೆ ನೈಸರ್ಗಿಕ ನ್ಯಾಯ ಒದಗಿಸಬೇಕೆಂದು ಕಾನೂನಿನಲ್ಲಿ ಅವಕಾಶವಿದೆ. ಆದರೂ ಜನಪ್ರತಿನಿಧಿಗಳು ಹಾಗೂ ಆಡಳಿತ ನಡೆಸುವ ಅಧಿಕಾರಿಗಳು ಸಮರ್ಪಕವಾಗಿ ಕಾನೂನುಗಳನ್ನು ಅನುಷ್ಠಾನಗೊಳಿಸದೆ ಆದಿವಾಸಿಗಳನ್ನು ಅತಂತ್ರ ಸ್ಥಿತಿಗೆ ತಂದಿಟ್ಟಿದ್ದಾರೆ ಎಂದು ದೂರಿದ ಅವರು ಈ ಆದಿವಾಸಿಗಳ ನ್ಯಾಯಯುತ ಬೇಡಿಕೆ ಈಡೇರಿಸದೆ ಇದ್ದರೆ ಮುಂದಿನ ದಿನಗಳಲ್ಲಿ ತಕ್ಕ ಉತ್ತರ ನೀಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.


ಪ್ರತಿಭಟನೆಯಲ್ಲಿ ಸಮುದಾಯದ ಕಾಳಮ್ಮ, ಮಂಜುನಾಥ್, ಜಯರಾಜು, ಸಿದ್ದರಾಜು, ಸಿದ್ದಮಲ್ಲು, ಸುರೇಶ್, ಲೋಹಿತ್, ಮಹಾದೇವು, ಸುನೀತಾ, ಭಾಗ್ಯಮ್ಮ, ಚಿಕ್ಕಮಣಿ, ಮಾದೇವಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net