

ವಿಜಯವಾಣಿ ಸುದ್ದಿಜಾಲ ಶಿರಸಿ: ವಿವಿಧ ಬೇಡಿಕೆಗಳನ್ನು ಈಡೇರಿಸು ವಂತೆ ಆಗ್ರಹಿಸಿ ಉತ್ತರ ಕನ್ನಡ ವಿಭಾಗದ ಕೆಎಸ್ಆರ್ಟಿಸಿ ಸ್ಟಾಫ್ ಆಂಡ್ ವರ್ಕರ್ಸ್ ಯೂನಿಯನ್ ಸದಸ್ಯರು ಉಪವಿಭಾಗಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ಗುರುವಾರ ಇಲ್ಲಿನ ಉಪವಿಭಾಗಾಧಿಕಾರಿ ಆಕೃತಿ ಬನ್ಸಾಲ್ ಮೂಲಕ ಮನವಿ ನೀಡಿದ ಸಂಘಟನೆ ಪ್ರಮುಖರು, ಕೋವಿಡ್ ಲಾಕ್ ಡೌನ್ ಹಾಗೂ ಇತರ ಕಾರಣಕ್ಕೆ ಸಾರಿಗೆ ಸಂಸ್ಥೆ ನಷ್ಟದಲ್ಲಿದ್ದು, ಮಿತವ್ಯಯ ಸಾಧಿಸುವ ಸಲುವಾಗಿ ನಾಲ್ಕು ಸಾರಿಗೆ ನಿಗಮಗಳನ್ನು ಒಂದು ಗೂಡಿಸಬೇಕು. ಫೆಡರೇಷನ್ ಜತೆ ರ್ಚಚಿಸಿ 2020ರ ಜನವರಿ 1ರಿಂದ ಉತ್ತಮ ಕೈಗಾರಿಕಾ ಒಪ್ಪಂದ ಮಾಡಬೇಕು. ಸಾರಿಗೆ ನಿಗಮಗಳಿಗೆ ಮೋಟಾರ ವಾಹನ ತೆರಿಗೆ ವಿನಾಯಿತಿ ನೀಡಬೇಕು. ಸಾರಿಗೆ ನಿಗಮಗಳ ವಾಹನಗಳಿಗೆ ಟೋಲ್ ಫೀ ವಿನಾಯಿತಿ ನೀಡಬೇಕು. ಸಾರಿಗೆ ನೌಕರರ ತುಟ್ಟಿಭತ್ಯೆ ರದ್ದುಪಡಿಸಿದ ಸುತ್ತೋಲೆ ಹಿಂಪಡೆಯಬೇಕು. ಸಾರಿಗೆ ನೌಕರರನ್ನು ಕರೊನಾ ವಾರಿಯರ್ಸ್ ಎಂದು ಪರಿಗಣಿಸಿ ಕರೊನಾದಿಂದ ಮೃತಪಟ್ಟ ನೌಕರರ ಕುಟುಂಬಕ್ಕೆ ಪರಿಹಾರ ನೀಡಬೇಕು. ನಿಗಮಗಳು ಖರೀದಿಸುವ ಡಿಸೇಲ್ ಮೇಲಿನ ಸುಂಕವನ್ನು ಕಡಿಮೆಗೊಳಿಸಬೇಕು. ನೌಕರರಿಗೆ ರಾಜ್ಯ ಸರ್ಕಾರವೇ ವೇತನವನ್ನು ಹಾಗೂ ನಿವೃತ್ತ ನೌಕರರ ಬಾಕಿ ಹಣವನ್ನು ನೀಡಬೇಕು. ಸಾರಿಗೆ ಸಂಸ್ಥೆಯ ಖಾಸಗೀಕರಣ ನಿಲ್ಲಿ್ಲಬೇಕು. ಸಾರಿಗೆ ನೌಕರರ ಅಂತರ ನಿಗಮ ವರ್ಗಾವಣೆ ಪುನಃ ಚಾಲನೆ ನೀಡಬೇಕು. ಲಾಕ್ ಡೌನ್ ಅವಧಿಯನ್ನು ಕರ್ತವ್ಯದ ಮೇಲೆ ಎಂದು ಪರಿಗಣಿಸಿ ಖರ್ಚು ಹಾಕದ ರಜೆಯನ್ನು ಪುನಃ ನೌಕರರ ಖಾತೆಗೆ ಜಮಾ ಮಾಡಬೇಕು. ನಿಯಮ ಬದ್ಧ ಒಟಿ, ಇತರ ನ್ಯಾಯಯುತ ಸವಲತ್ತುಗಳನ್ನು ನೀಡಬೇಕು. ಪಿಂಚಣಿ ಹೆಚ್ಚಿಸಬೇಕು. ಬಾಕಿ ಇರುವ ಎಲ್ಐಸಿ ಹಣ ಕೂಡಲೆ ಜಮಾ ಮಾಡಬೇಕು. ಬೇಂದ್ರೆ ಸಾರಿಗೆಗೆ ಪರ್ಯಾಯ ಮಾರ್ಗ ನೀಡಬಾರದು ಎಂದು ಮನವಿ ನೀಡಿ ಒತ್ತಾಯಿಸಿದರು.
ಈ ವೇಳೆ ಸಂಘಟನೆ ಪ್ರಮುಖರಾದ ನಾರಾಯಣ ಶೆಟ್ಟಿ, ಪಿ.ಎಸ್. ನಾಯ್ಕ, ಆರ್.ಎಸ್.ನಾಯ್ಕ, ಎ.ಡಿ.ನಾಯ್ಕ ಹಾಗೂ ಇತರರು ಇದ್ದರು.