ಬೆಳೆ ಹಾಳು ಮಾಡಿದ್ದ ಸ್ಥಳಕ್ಕೆ ಅಧಿಕಾರಿಗಳ ಭೇಟಿ

ಕೆಲ ದಿನಗಳ ಹಿಂದೆ ಕಾಡಾನೆಗಳು ಬೇಲೂರು ತಾಲೂಕಿನ ಹೆಗ್ಗದ್ದೆ-ನಾರ್ವೆ ಗ್ರಾಮಗಳ ಜಮೀನಿಗೆ ನುಗ್ಗಿ ಬೆಳೆ ಹಾಳು ಮಾಡಿದ್ದ ಸ್ಥಳ ಪರಿಶೀಲಿಸುತ್ತಿರುವ ಅರಣ್ಯ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿ. ಉಪ ವಲಯ ಅರಣ್ಯಾಧಿಕಾರಿ ಗುರುರಾಜ್ ಇತರರಿದ್ದರು.
12blrp4
Published on


ಬೇಲೂರು:
ತಾಲೂಕಿನ ಮಲೆನಾಡು ಭಾಗದಲ್ಲಿ ಬಿಡು ಬಿಟ್ಟಿರುವ ಕಾಡಾನೆಗಳ ಹಿಂಡು ಕೆಲ ದಿನಗಳ ಹಿಂದೆ ಹೆಗ್ಗದ್ದೆ-ನಾರ್ವೆ ಗ್ರಾಮಗಳ ಜಮೀನಿಗೆ ನುಗ್ಗಿ ಬೆಳೆ ಹಾಳು ಮಾಡಿದ್ದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದರು.


ಬೇಲೂರು ತಾಲೂಕಿನ ಮಲೆನಾಡು ಭಾಗದ ಸಾಕಷ್ಟು ಗ್ರಾಮಗಳಲ್ಲಿ ಆಗಿಂದ್ದಾಗ್ಗೆ ಕಾಡಾನೆಗಳ ಹಿಂಡು ಸ್ಥಳ ಬದಲಾಯಿಸುತ್ತಿವೆ. ಅಲ್ಲದೆ ಆನೆಗಳು ಓಡಾಡುವ ಸ್ಥಳದಲ್ಲಿನ ಜಮೀನು ತೋಟಗಳಲೆಲ್ಲ ಓಡಾಡುವುದರಿಂದ ಸಾಕಷ್ಟು ಬೆಳೆ ನಷ್ಟ ಸಂಭವಿಸುತ್ತಿದೆ. ಹಾಗೂ ಕಳೆದ ಕೆಲ ದಿನಗಳ ಹಿಂದೆ ಹೆಗ್ಗದ್ದೆ ಹಾಗೂ ನಾರ್ವೆ ಗ್ರಾಮಗಳಲ್ಲಿ ರೈತರು ಜಮೀನುಗಳಲ್ಲಿ ನಾಟಿ ಮಾಡಿದ್ದ ಭತ್ತದ ಸಸಿಗಳನ್ನು ತುಳಿದು ನಾಶ ಮಾಡಿದ್ದಲ್ಲದೆ, ಅಡಕೆ, ಬಾಳೆ ತೋಟಗಳಿಗೆ ನುಗ್ಗಿ ತಿಂದಿದ್ದಲ್ಲದೆ ಅಲ್ಲಿಯೂ ಬೆಳೆ ನಾಶ ಮಾಡಿದ್ದವು. ಈ ಹಿನ್ನೆಲೆಯಲ್ಲಿ ರೈತರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದರಿಂದ ಅಧಿಕಾರಿಗಳು ಮತ್ತು ಸಿಬ್ಬಂದಿ ಜಮೀನುಗಳಿಗೆ ತೆರಳಿ ರೈತರ ಸಮ್ಮುಖದಲ್ಲಿ ಬೆಳೆ ನಷ್ಟವಾಗಿರುವ ಬಗ್ಗೆ ಪರಿಶೀಲಿಸಿ ಮಾಹಿತಿ ಪಡೆದರು. ಈ ಸಂದರ್ಭ ರೈತರು ತಮ್ಮ ಸಂಕಷ್ಟಗಳನ್ನು ಅಧಿಕಾರಿ ಮತ್ತು ಸಿಬ್ಬಂದಿಗೆ ತಿಳಿಸಿ, ಆನೆಗಳನ್ನು ಶಾಶ್ವತವಾಗಿ ಓಡಿಸಿ ಹಾಗೂ ಬೆಳೆ ನಷ್ಟಕ್ಕೆ ತಕ್ಷಣವೇ ಪರಿಹಾರ ಒದಗಿಸಬೇಕು ಎಂದರು.


ನಾರ್ವೆ ಗ್ರಾಮದ ರೈತ ಸಂಪತ್ ಮಾತನಾಡಿ, ನಮ್ಮ ಭಾಗದಲ್ಲಿ ಪ್ರತಿನಿತ್ಯ ಕಾಡಾನೆಗಳ ಉಪಟಳ ಹೆಚ್ಚಾಗಿದೆ. ಮಳೆಗಾಲದಲ್ಲೂ ನಾವು ಜಮೀನಿನಲ್ಲಿ ಬೆಳೆ ಬೆಳೆಯದಂತಹ ಸ್ಥಿತಿ ನಿರ್ಮಾಣವಾಗಿದೆ. ಕಾಡಾನೆಗಳನ್ನು ಶಾಶ್ವತವಾಗಿ ಇಲ್ಲಿಂದ ಓಡಿಸಿ ಎಂದು ಹೇಳಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಇದರಿಂದ ಜಮೀನಿನಲ್ಲಿ ಬೆಳೆದಿದ್ದ ಬೆಳೆ ತಿನ್ನುವ ಆನೆಗಳು ಓಡಾಡಿ ಬೆಳೆ ನಷ್ಟ ಮಾಡುತ್ತಿವೆ. ನಮಗೆ ನಷ್ಟವಾಗಿರುವ ಬೆಳೆಗೆ ಪರಿಹಾರದೊಂದಿಗೆ ಇಲ್ಲಿಯೇ ಬೀಡುಬಿಟ್ಟಿರುವ ಕಾಡಾನೆಗಳನ್ನು ಶಾಶ್ವತವಾಗಿ ಓಡಿಸಿ ಈ ಭಾಗದ ರೈತರು, ಬೆಳೆಗಾರರು ನೆಮ್ಮದಿಯಾಗಿ ಬದುಕುವುದಕ್ಕೆ ಸರ್ಕಾರ ಮತ್ತು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.


ಉಪ ವಲಯ ಅರಣ್ಯಾಧಿಕಾರಿ ಗುರುರಾಜ್ ಮಾತನಾಡಿ, ಕಾಡಾನೆಗಳ ಹಾವಳಿಯಿಂದ ಈ ಭಾಗದ ಸಾಕಷ್ಟು ಗ್ರಾಮಗಳಲ್ಲಿ ಬೆಳೆ ನಷ್ಟವಾಗಿರುವುದು ಕಂಡುಬರುತ್ತಿದೆ. ಈಗಾಗಲೇ ಆನೆಗಳಿಂದ ನಷ್ಟವಾಗಿರುವ ಜಮೀನುಗಳನ್ನು ಪರಿಶೀಲಿಸಿದ್ದು, ಎಲ್ಲ ಮಾಹಿತಿಯನ್ನು ಇಲಾಖೆ ಮೇಲಧಿಕಾರಿಗಳಿಗೆ ನೀಡಿದ್ದೇವೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net