

ಕೃಷಿ ವಿವಿ, ವಿದ್ಯಾರ್ಥಿಗಳು, ಬೆಳೆಗಳು, ಸಂಸ್ಕರಣೆ, ಕಾರ್ಯಾನುಭವ, ಆಲೆಮನೆ, ಕಬ್ಬು ಅರೆಯುವುದು, ಬೆಲ್ಲ ತಯಾರಿಕೆ
ಆನಂದಪುರ: ಇರುವಕ್ಕಿ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಕೃಷಿ ಬೆಳೆಗಳ ಸಂಸ್ಕರಣಾ ಕಾರ್ಯಾನುಭವ ಹಮ್ಮಿಕೊಳ್ಳಲಾಗಿತ್ತು. ಇದರ ಅಂಗವಾಗಿ ನರಸೀಪುರ ಗ್ರಾಮದ ಆಲೆಮನೆ ಘಟಕಕ್ಕೆ ವಿದ್ಯಾರ್ಥಿಗಳ ತಂಡ ಭೇಟಿ ನೀಡಿತು. ಕಬ್ಬು ಕಟಾವು, ಹೊರೆ ಕಟ್ಟುವುದು, ಕಬ್ಬಿನ ಸಾಗಣೆ, ಗಾಣದ ಮೂಲಕ ಕಬ್ಬು ಅರೆದು ಹಾಲು ಹಿಂಡುವುದನ್ನು ವೀಕ್ಷಿಸಿದರು.
ಕಬ್ಬಿನ ಸಿಪ್ಪೆಯಿಂದ ಉರಿ ತಯಾರಿಸಿ ದೊಡ್ಡ ಕೊಪ್ಪರಿಗೆಯಲ್ಲಿ ಕಬ್ಬಿನ ಹಾಲು ಕುದಿಸಿ ಜೋನಿ ಬೆಲ್ಲ ತಯಾರಿಸುವ ವಿವಿಧ ಹಂತಗಳ ಬಗ್ಗೆ ರೈತರೊಂದಿಗೆ ಚರ್ಚಿಸಿದರು. ಕಬ್ಬಿನ ಹಾಲಿನ ಸಮರ್ಪಕ ಬಳಕೆ ಮತ್ತು ಉತ್ತಮ ದರ್ಜೆಯ ಜೋನಿ ಬೆಲ್ಲ ತಯಾರಿಸುವ ಪಾರಂಪರಿಕ ವಿಧಾನ ಮತ್ತು ಆಧುನಿಕತೆಯ ತಂತ್ರಗಳ ಬಗ್ಗೆ ಮಾಹಿತಿ ಸಂಗ್ರಹಿಸಿದರು.
ಬೆಲ್ಲ ಮತ್ತು ನವಣೆ ಬಳಸಿ ಔಗು ಎಂಬ ಪೌಷ್ಟಿಕ ಆಹಾರ ತಯಾರಿಸುವ ಪ್ರಾತ್ಯಕ್ಷಿಕೆಯನ್ನು ವಿದ್ಯಾರ್ಥಿಗಳು ರೈತರಿಗೆ ತೋರಿಸಿಕೊಟ್ಟರು. ಕೃಷಿ ವಿವಿ ವಿಶೇಷಾಧಿಕಾರಿ ಕೆ.ಸಿ.ಶಶಿಧರ್ ಕಾರ್ಯನುಭವ ಶಿಬಿರದ ಮಾರ್ಗದರ್ಶಕರಾಗಿ ಕಾರ್ಯ ನಿರ್ವಹಿಸಿದರು.