ಬೆಳೆ ವಿಮಾ ಯೋಜನೆ‌‌ ಬಗ್ಗೆ ಮಾಹಿತಿ ಬೇಕೇ? - ಇಲ್ಲಿದೆ ಅಪ್‌‌ಡೇಟ್

Published on

ಬೆಂಗಳೂರು: ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆಯಡಿಯಲ್ಲಿ 2020-21ರ ಹಿಂಗಾರು ಹಂಗಾಮಿನಲ್ಲಿ ರಾಜ್ಯದ 27 ಜಿಲ್ಲೆಗಳಲ್ಲಿ ಒಟ್ಟು 22 ಆಹಾರ, ಎಣ್ಣೆಕಾಳು, ವಾರ್ಷಿಕ ವಾಣಿಜ್ಯ ಮತ್ತು ತೋಟಗಾರಿಕಾ ಬೆಳೆಗಳನ್ನು ಹಾಗೂ ಹಿಂಗಾರು ಹಂಗಾಮಿನಲ್ಲಿ 25 ಜಿಲ್ಲೆಗಳಲ್ಲಿ ಒಟ್ಟು 6 ಆಹಾರ, ಎಣ್ಣೆಕಾಳು, ವಾರ್ಷಿಕ ವಾಣಿಜ್ಯ ಮತ್ತು ತೋಟಗಾರಿಕಾ ಬೆಳೆಗಳನ್ನು ಸೇರಿಸಲಾಗಿದ್ದು, ತಾಲ್ಲೂಕಿನ ಮುಖ್ಯ ಬೆಳೆಗಳನ್ನು ಗ್ರಾಮ ಪಂಚಾಯಿತಿ ಮಟ್ಟಕ್ಕೆ ಹಾಗೂ ಉಳಿದ ಬೆಳೆಗಳನ್ನು ಹೋಬಳಿ ಮಟ್ಟಕ್ಕೆ ಸೇರಿಸಲಾಗಿದೆ.
ರೈತರು ಆಹಾರ ಮತ್ತು ಎಣ್ಣೆ ಕಾಳು ಬೆಳೆಗಳಿಗೆ ಶೇ.1.5ರಷ್ಟು ವಿಮಾಕಂತಿನ ಮೊತ್ತವನ್ನು ಆಹಾರ ಬೆಳೆಗಳಿಗೆ ಹಾಗೂ ವಾರ್ಷಿಕ ವಾಣಿಜ್ಯ ಮತ್ತು ತೋಟಗಾರಿಕಾ ಬೆಳೆಗಳಿಗೆ ಶೇ. 5 ರಷ್ಟು ವಿಮಾ ಕಂತನ್ನು ಪಾವತಿಸಬೇಕು. ಬೆಳೆ ಸಾಲ ಪಡೆದ ಹಾಗೂ ಬೆಳೆ ಸಾಲ ಪಡೆಯದ ರೈತರು ಬೆಳೆ ವಿಮೆಯಡಿ ಒಳಪಡುವುದು ಐಚ್ಚಿಕವಾಗಿರುತ್ತದೆ.
ಬೆಳೆ ಸಾಲ ಪಡೆಯದ ರೈತರು ಯೋಜನೆಯಲ್ಲಿ ಪಾಲ್ಗೊಳ್ಳಲು ಹತ್ತಿರದ ಬ್ಯಾಂಕುಗಳು ಅಥವಾ ಸಾಮಾನ್ಯ ಸೇವಾ ಕೇಂದ್ರಗಳನ್ನು ಸಂಪರ್ಕಿಸಿ ಅರ್ಜಿಯೊಂದಿಗೆ ಭೂಮಿ ಹೊಂದಿರುವುದಕ್ಕೆ ದಾಖಲಾತಿಗಳಾದ ಪಹಣಿ, ಖಾತೆ ಪತ್ರ, ಕಂದಾಯ ರಸೀದಿ ನೀಡಬೇಕು. ಈಗಾಗಲೇ ಖಾತೆ ಹೊಂದಿರುವ ಬ್ಯಾಂಕ್ ಶಾಖೆಯಲ್ಲಿ ವಿಮಾ ಕಂತನ್ನು ಕಟ್ಟಬೇಕು. ಕಡ್ಡಾಯವಾಗಿ ಆಧಾರ್ ಸಂಖ್ಯೆಯನ್ನು ಅರ್ಜಿ ನಮೂನೆಯಲ್ಲಿ ನಮೂದಿಸಬೇಕು.
ಬೆಳೆ ಸಾಲ ಪಡೆಯದ ರೈತರು ಅಂದಾಜು ಬೆಳೆÉ ಬಿತ್ತನೆ ಆಧಾರದ ಮೇಲೆ ಬಿತ್ತನೆ ಪೂರ್ವದಲ್ಲಿ ಪಾಲ್ಗೊಳ್ಳಬಹುದು. ಬೆಳೆ ಸಾಲ ಪಡೆದ ರೈತರು ಈ ಯೋಜನೆಯಲ್ಲಿ ಭಾಗವಹಿಸಲು ಇಚ್ಚೆ ಪಡದೇ ಇದ್ದಲ್ಲಿ, ಈ ಕುರಿತು ಬ್ಯಾಂಕಿನ ವ್ಯವಸ್ಥಾಪಕರಿಗೆ ಬೆಳೆ ನೋಂದಣಿ ಅಂತಿಮ ದಿನಾಂಕಕ್ಕಿಂತ 7 ದಿನಗಳು ಮುಂಚಿತವಾಗಿ ಲಿಖಿತವಾಗಿ ಮುಚ್ಚಳಿಕೆ ಪತ್ರವನ್ನು ನೀಡಿದಲ್ಲಿ ಅಂತಹ ರೈತರನ್ನು ಬೆಳೆ ವಿಮೆ ಯೋಜನೆಯಿಂದ ಕೈಬಿಡಲು ಅವಕಾಶವಿರುತ್ತದೆ.
ಬೆಳೆ ವಿಮೆಗೆ ನೋಂದಾಯಿಸಿದ ನಂತರ ಬೇರೆ ಬೆಳೆ ಬಿತ್ತನೆ ಮಾಡಿದಲ್ಲಿ ಯೋಜನೆಯಲ್ಲಿ ಭಾಗವಹಿಸಲು ನಿಗದಿಪಡಿಸಿದ ಕೊನೆಯ ದಿನಾಂಕಕ್ಕಿಂತ ಎರಡು ದಿವಸ ಮುಂಚಿತವಾಗಿ ನೊಂದಾಯಿಸಿದ ಆರ್ಥಿಕ ಸಂಸ್ಥೆಗಳಲ್ಲಿ ಬಿತ್ತನೆ ದೃಢೀಕರಣ ಪತ್ರ ನೀಡಿ ವಿಮೆ ಮಾಡಿಸಿದ ಬೆಳೆಯನ್ನು ಬದಲಾಯಿಸಲು ಅವಕಾಶವಿರುತ್ತದೆ. ಅಂತಹ ಸಂದರ್ಭದಲ್ಲಿ ಹೆಚ್ಚುವರಿ ವಿಮಾ ಕಂತಿನ ವ್ಯತ್ಯಾಸದ ಮೊತ್ತವನ್ನು ರೈತರು ಭರಿಸತಕ್ಕದ್ದು ಅಥವಾ ಹೆಚ್ಚುವರಿ ವಿಮಾ ಕಂತನ್ನು ರೈತರಿಗೆ ಮರುಪಾವತಿಸಲಾಗುತ್ತದೆ.
2020-21 ರ ಹಿಂಗಾರು ಮತ್ತು ಬೇಸಿಗೆ ಹಂಗಾಮಿನಲ್ಲಿ ಪ್ರಕೃತಿ ವಿಕೋಪ ಅಂದರೆ, ಆಲೀಕಲ್ಲು ಮಳೆ, ಭೂ ಕುಸಿತ ಮತ್ತು ಬೆಳೆ ಮುಳುಗಡೆ, ಮೇಘಸ್ಫೋಟ ಮತ್ತು ಗುಡುಗು ಮಿಂಚಿನಿಂದ ಉಂಟಾಗುವ ಬೆಂಕಿ ಅವಘಡಗಳಿಂದ ಬೆಳೆ ನಷ್ಟ ಸಂಭವಿಸಿದಲ್ಲಿ ಪ್ರತ್ಯೇಕವಾಗಿ ಬೆಳೆ ನಷ್ಟ ನಿರ್ಧರಿಸಿ ಬೆಳೆ ವಿಮಾ ನಷ್ಟ ಪರಿಹಾರವನ್ನು ನೀಡಲಾಗುವುದು.
ಎಲ್ಲಾ ಜಿಲ್ಲೆಗಳಲ್ಲಿ ಕಟಾವಿನ ನಂತರ ಬೆಳೆಯನ್ನು ಜಮೀನಿನಲ್ಲೆ ಒಣಗಲು ಬಿಟ್ಟಂತಹ ಸಂದರ್ಭದಲ್ಲಿ ಎರಡು ವಾರಗಳೊಳಗೆ ಚಂಡಮಾರುತ, ಚಂಡಮಾರುತ ಸಹಿತ ಮಳೆ ಮತ್ತು ಅಕಾಲಿಕ ಮಳೆಯಿಂದಾಗಿ ಬೆಳೆ ನಾಶವಾದರೆ ಪ್ರತ್ಯೇಕವಾಗಿ ನಷ್ಟ ನಿರ್ಧಾರ ಮಾಡಿ ಬೆಳೆ ನಷ್ಟ ಪರಿಹಾರವನ್ನು ಇತ್ಯರ್ಥಪಡಿಸಲಾಗುತ್ತದೆ.
ಈ ಯೋಜನೆಯಡಿ ರೈತರು ಪಾಲ್ಗೊಳ್ಳಲು ಕೊನೆ ದಿನಾಂಕಗಳನ್ನು ಐದು ಹಂತಗಳಲ್ಲಿ ನಿಗದಿಪಡಿಸಲಾಗಿದ್ದು, ಜಿಲ್ಲಾವಾರು ಬೆಳೆಯ ಕೊನೆಯ ದಿನಾಂಕದ ವಿವರಗಳನ್ನು ತಮ್ಮ ಜಿಲ್ಲೆಗಳಲ್ಲಿ ಪಡೆಯಬಹುದು.
ಹೆಚ್ಚಿನ ಮಾಹಿತಿಗಾಗಿ ಸಮೀಪದ ಹೋಬಳಿ ರೈತ ಸಂಪರ್ಕ ಕೇಂದ್ರ, ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿ, ಜಿಲ್ಲಾ ಜಂಟಿ ಕೃಷಿ ನಿರ್ದೇಶಕರ ಕಚೇರಿ ಅಥವಾ ಬ್ಯಾಂಕುಗಳನ್ನು ಸಂಪರ್ಕಿಸಬಹುದು.
ರೈತರು ಈ ಯೋಜನೆಯ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net