

ಬೆಳಗಾವಿ: ಗಡಿಭಾಗದ ಬಡವರ, ಕೂಲಿ ಕಾರ್ಮಿಕರ, ಮಧ್ಯಮ ವರ್ಗದ ಜನರಿಗೆ ಆರೋಗ್ಯಧಾಮವಾಗಿರುವ ಜಿಲ್ಲಾಸ್ಪತ್ರೆಯು ಅಭಿವೃದ್ಧಿ ಹೊಂದಿ ಹೈಟೆಕ್ ಸ್ಪರ್ಶ ಪಡೆದುಕೊಂಡಿದೆ. ಜಿಲ್ಲಾಸ್ಪತ್ರೆಗೆ ಬರುವ ಗರ್ಭಿಣಿಯರು, ಮಹಿಳೆಯರು, ಮಕ್ಕಳು ಸೇರಿ ವಿವಿಧ ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ , ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರವು ಸಮಗ್ರ ಅಭಿವೃದ್ಧಿ ಕಾಮಗಾರಿ ಕೈಗೊಂಡಿದೆ. ಇದೀಗ ಆಸ್ಪತ್ರೆಯಲ್ಲಿನ ಮಕ್ಕಳ ವಾರ್ಡ್ ಹೈಟೆಕ್ ಸ್ಪರ್ಶ ಪಡೆದುಕೊಂಡಿದ್ದು, ಖಾಸಗಿ ಆಸ್ಪತ್ರೆಗಳಿಗೂ ಸೆಡ್ಡು ಹೊಡೆಯುವಂತಿದೆ.
ಜಿಲ್ಲಾಸ್ಪತ್ರೆಯಲ್ಲಿ ಮಕ್ಕಳ ವಾರ್ಡ್ ಗಳಲ್ಲಿ ಕುಡಿಯುವ ನೀರು, ಬಿಸಿ ನೀರು, ವಿದ್ಯುತ್, ಶೌಚಗೃಹ, ಗುಣಮಟ್ಟದ ಬೆಡ್ ಒದಗಿಸಲಾಗಿದೆ. ಗೋಡೆಗಳಿಗೆ ಸುಣ್ಣ&ಬಣ್ಣ ಬಳಿದು ಪ್ರಾಣಿ, ಪಕ್ಷಿಗಳ ಚಿತ್ರ ಬಿಡಿಸಲಾಗಿದೆ. ಮಕ್ಕಳ ಜತೆಗೆ ಬರುವ ಪಾಲಕರಿಗೆ ವಿಶ್ರಾಂತಿ ಕೊಠಡಿಗಳನ್ನು ಪ್ರತ್ಯೇಕವಾಗಿ ನಿರ್ಮಿಸಲಾಗಿದೆ. ಆಸ್ಪತ್ರೆಗೆ ಬರುವ ಮಕ್ಕಳಿಗೆ ಮನೆ ಮಾದರಿ ವಾತಾವರಣ ಕಲ್ಪಿಸಲಾಗಿದೆ.
ಈಗಾಗಲೇ ಜಿಲ್ಲಾಸ್ಪತ್ರೆಯ ಮಕ್ಕಳ ವಾರ್ಡ್ಗಳಿಗೆ ಚಿಕಿತ್ಸೆಗಾಗಿ ಬರುವ ಮಕ್ಕಳು ಮತ್ತು ಪಾಲಕರೊಂದಿಗೆ ಹೇಗೆ ಮಾತನಾಡಬೇಕು. ಅವರ ಸಮಸ್ಯೆಗಳನ್ನು ಹೇಗೆ ಆಲಿಸಬೇಕು ಎಂಬುದರ ಕುರಿತು ನರ್ಸ್, ಸಿಬ್ಬಂದಿಗೆ ವಿಶೇಷ ತರಬೇತಿ ನೀಡಲಾಗಿದೆ. ಅಲ್ಲದೆ, ನುರಿತ ಮಕ್ಕಳು ತಜ್ಞರು, ವೈದ್ಯರನ್ನು ನಿಯೋಜನೆ ಮಾಡಲಾಗಿದೆ. ದಿನದ 24 ಗಂಟೆಯ ಚಿಕಿತ್ಸಾ ಸೌಲಭ್ಯ ಕಲ್ಪಿಸಲಾಗಿದೆ. ತುರ್ತು ಚಿಕಿತ್ಸೆಗೆ ಮೊದಲ ಆದ್ಯತೆ ನೀಡಲಾಗುತ್ತಿದೆ.
ಖಾಸಗಿ ಆಸ್ಪತ್ರೆಗಳಲ್ಲಿ ಸಿಗುವ ಎಲ್ಲ ರೀತಿಯ ಸೌಕರ್ಯ ಒದಗಿಸಲಾಗುತ್ತದೆ.
ನಾಲ್ಕೆದು ತಿಂಗಳ ಅವಧಿಯಲ್ಲಿ ಜಿಲ್ಲಾಸ್ಪತ್ರೆಗೆ ಬರುವ ರೋಗಿಗಳ ಸಂಖ್ಯೆ ಹೆಚ್ಚಾಗಿದೆ. ಅಲ್ಲದೆ, ನುರಿತ ವೈದ್ಯರು, ನರ್ಸ್ ಗಳು ದಿನದ 24 ಗಂಟೆ ಲಭ್ಯವಾಗುತ್ತಿರುವುದರಿಂದ ಆಸ್ಪತ್ರೆಯ ಹೆರಿಗೆ, ಮಕ್ಕಳ ವಾರ್ಡ್, ಜನರಲ್ ವಾರ್ಡ್ಗಳಲ್ಲಿ ರೋಗಿಗಳ ಸಂಖ್ಯೆ ಏರಿಕೆಯಾಗಿದೆ ಎಂದು ಬಿಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ.
ಜಿಲ್ಲಾಸ್ಪತ್ರೆಗೆ ಬರುವ ಗರ್ಭಿಣಿಯರು, ಮಕ್ಕಳು ಸೇರಿ ವಿವಿಧ ರೋಗಿಗಳಿಗೆ ಗುಣಮಟ್ಟ ಚಿಕಿತ್ಸೆ ಸೌಲಭ್ಯ ಸಿಗಬೇಕು. ಮಕ್ಕಳ ವಾರ್ಡ್ಗಳನ್ನು ಅಭಿವೃದ್ಧಿಪಡಿಸಲಾಗಿದೆ. ಇಲ್ಲಿಗೆ ಬರುವ ಮಕ್ಕಳಿಗೆ ಮತ್ತು ಪಾಲಕರಿಗೆ ಕುಟುಂಬದ ವಾತಾವರಣ ನಿರ್ಮಿಸಲಾಗುತ್ತಿದೆ. ಈ ವಾರ್ಡ್ಗಳನ್ನು ಜು.8ರಂದು ಉದ್ಘಾಟನೆ ಮಾಡಲಾಗುತ್ತಿದೆ.| ಆಮ್ಲಾನ್ ಆದಿತ್ಯ ಬಿಸ್ವಾಸ್, ಬಿಮ್ಸ್ ಆಡಳಿತಾಧಿಕಾರಿ