ಬೆಲೆ ಏರಿಕೆ ಮಾಡಿದ್ದೇ ಕಾಂಗ್ರೆಸ್ ಸರ್ಕಾರದ ಸಾಧನೆ

7 ckm 7 c.t.ravi
ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ
Published on

ಎಲ್ಲ ವಸ್ತುಗಳ ಬೆಲೆ ಏರಿಕೆ ಮಾಡಿದ ಕೀರ್ತಿ ರಾಜ್ಯ ಸರ್ಕಾರಕ್ಕೆ ಸಲ್ಲುತ್ತದೆ. ಬೆಲೆ ಏರಿಕೆ ಮಾಡಿದ್ದೇ ಇವರ ಸಾಧನೆಯಾ? ಸಾಧನಾ ಸಮಾವೇಶದಲ್ಲಿ ಬೆಲೆ ಏರಿಕೆ, ಸಾಲ ಮಾಡಿದ ಪಟ್ಟಿಯನ್ನೂ ಬಿಡುಗಡೆ ಮಾಡಬೇಕಿತ್ತು ಎಂದು ಮಾಜಿ ಸಚಿವ ಸಿ.ಟಿ.ರವಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ನಗರದ ಬಿಜೆಪಿ ಕಚೇರಿಯಲ್ಲಿ ಗುರುವಾರ ‘ಕರ್ನಾಟಕ ಕಾಂಗ್ರೆಸ್ ಸರ್ಕಾರದ ವೈಫಲ್ಯಗಳ ಚಾರ್ಜ್‌ಶೀಟ್’ ಬಿಡುಗಡೆ ಮಾಡಿ ಮಾತನಾಡಿದರು.

ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧೀಕ್ಷಕ ಆತ್ಮಹತ್ಯೆ ಮಾಡಿಕೊಂಡರು, 2 ವರ್ಷದಲ್ಲಿ 736 ಬಾಣಂತಿಯರು ಮೃತಪಟ್ಟಿದ್ದಾರೆ. 1100ಕ್ಕೂ ನವಜಾತ ಶಿಶುಗಳು ಮೃತಪಟ್ಟಿವೆ. 3 ಸಾವಿರ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಎಲ್ಲ ಇಲಾಖೆಯಲ್ಲಿಯೂ ಭ್ರಷ್ಟಾಚಾರ ಮಿತಿ ಮೀರಿದೆ. ಪೊಲೀಸರ ಮೇಲೆ ದಾಳಿಯಾಗುತ್ತಿದೆ. ಕೊಲೆ, ದರೋಡೆ ಹೆಚ್ಚಾಗುತ್ತಿವೆ. ಇದೆಲ್ಲವೂ ಸಂಭ್ರಮಪಡುವ ಸಂಗತಿಯೇ ಎಂದು ಪ್ರಶ್ನಿಸಿದರು.

ಎರಡು ವರ್ಷದಲ್ಲಿ ಒಂದೆಡೆ ಸಿದ್ದರಾಮಯ್ಯ ಮನೆತನದ ಆದಾಯ ಹೆಚ್ಚಾಗಿದೆ, ರಾಜ್ಯದ ಸಾಲವೂ ಹೆಚ್ಚಾಗಿದೆ. ಅತಿ ಹೆಚ್ಚು ಬಾರಿ ಬಜೆಟ್ ಮಂಡಿಸಿದ ಕೀರ್ತಿಯೂ ಸಿದ್ದರಾಮಯ್ಯಗೆ ಸಲ್ಲಬೇಕು, ಅತಿ ಹೆಚ್ಚು ಸಾಲ ಮಾಡಿದ ಕೀರ್ತಿಯೂ ಸಿದ್ದರಾಮಯ್ಯಗೆ ಸಲ್ಲಬೇಕು. ಸಾವಿರಾರು ಸಾವಿರ ಕೋಟಿ ರೂ.ಸಾಲ ಇದೆ. ಈ ಪೈಕಿ ಸಿದ್ದರಾಮಯ್ಯ ಸಾವಿರಾರು ಕೋಟಿ ರೂ.ಸಾಲ ಮಾಡಿದ್ದಾರೆ. 2024-25ನೇ ಸಾಲಿನಲ್ಲಿಯೂ ಸಾವಿರಾರು ಕೋಟಿ ರೂ.ಸಾಲ ಮಾಡಲಾಗಿದೆ ಎಂದು ಕಿಡಿಕಾರಿದರು.

ಚುನಾವಣೆ ವೇಳೆ ಕೊಟ್ಟ ಎಲ್ಲ ಭರವಸೆ ಈಡೇರಿಸಿದ್ದೇವೆ ಎನ್ನುವ ಸಿದ್ದರಾಮಯ್ಯನವರೇ ಭ್ರಷ್ಟಾಚಾರ, ಬೆಲೆ ಏರಿಕೆ, ರಾಜ್ಯದ ಸಾಲ ಏರಿಕೆ ನಿಮ್ಮ ಭರವಸೆ ಆಗಿತ್ತಾ ಎಂಬುದನ್ನು ಹೇಳಬೇಕು. ನಿಮ್ಮ ಅವಧಿಯಲ್ಲಿ ಯಾವುದಕ್ಕೆ ಎಷ್ಟು ಸಾಲ ಮಾಡಿದ್ದೀರಿ, ಎಷ್ಟು ಬೆಲೆ ಏರಿಸಿದ್ದೀರಿ ಎಂಬುದನ್ನೂ ತಿಳಿಸಿ ಎಂದು ಸವಾಲು ಹಾಕಿದರು.

ಅದು ಕಾಂಗ್ರೆಸ್ ಸಮಾವೇಶವಾ?: ಬೆಂಗಳೂರು ಮಳೆ ಬಂದು ಮುಳುಗಿರುವಾಗ, ಕಾಂಗ್ರೆಸಿಗರು ವಿಜಯನಗರದಲ್ಲಿ ತೇಲುತ್ತಿದ್ದರು. 64 ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗಿದೆ. ಇದರ ನಡುವೆಯೂ ಜನರ ತೆರಿಗೆ ಹಣದಲ್ಲಿ ಸಮಾವೇಶ ನಡೆದಿದೆ. ಅದು ಸರ್ಕಾರದ ಸಮಾವೇಶವೋ ಅಥವಾ ಕಾಂಗ್ರೆಸ್ ಸಮಾವೇಶವೋ ಎಂಬುದನ್ನು ಅಧಿಕಾರಿಗಳು ಸ್ಪಷ್ಟಪಡಿಸಬೇಕು ಎಂದು ಸಿ.ಟಿ.ರವಿ ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net