

ರಾಮನಗರ: ಬೆಲೆ ಏರಿಕೆ ನಿರೀಕ್ಷೆಯಲ್ಲಿದ್ದ ತೆಂಗು ಬೆಳೆಗಾರರು ಇದೀಗ ಬೆಲೆ ಕುಸಿತದಿಂದ ಕಂಗಾಲಾಗಿದ್ದಾರೆ.
ಪ್ರತಿ ಕೆಜಿ ತೆಂಗಿನ ಬೆಲೆ 25-26 ರೂ.ಗೆ ಇಳಿಕೆ ಕಂಡಿದ್ದು, 40 ರೂ. ಆಸುಪಾಸು ಬೆಲೆ ನಿರೀಕ್ಷೆಯಲ್ಲಿದ್ದ ರೈತರನ್ನು ಆತಂಕಗೊಳ್ಳುವಂತೆ ಮಾಡಿದೆ.
ಜಿಲ್ಲೆಯಲ್ಲಿ ಸುಮಾರು 30 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ತೆಂಗು ಬೆಳೆಯಲಾಗುತ್ತದೆ. ಚನ್ನಪಟ್ಟಣ ತಾಲೂಕು ಒಂದರಲ್ಲಿಯೇ ಸುಮಾರು 11 ಸಾವಿರ ಹೆಕ್ಟೇರ್ ತೆಂಗು ಬೆಳೆಯುವ ಪ್ರದೇಶವಿದೆ. ಕಳೆದ ಕೆಲವು ವರ್ಷಗಳಿಂದ ಮಳೆಯ ಕೊರತೆಯಿಂದಾಗಿ ಹೊಡೆತ ತಿಂದಿದ್ದ ರೈತರು, ಬೆಂಕಿ ರೋಗ, ನುಸಿ ಪೀಡೆಯಂತಹ ಸವಾಲುಗಳನ್ನು ಎದುರಿಸಿದ್ದಾರೆ. ಜತೆಗೆ ಬೆಲೆ ಕುಸಿತವೂ ರೈತರನ್ನು ನಿತ್ರಾಣಗೊಳಿಸಿದೆ. ಈ ಎಲ್ಲ ಬೆಳವಣಿಗೆ ನಡುವೆಯೇ ಈ ಬಾರಿ ಉತ್ತಮ ಮಳೆಯಾಗಿದ್ದರಿಂದ ರಾಜ್ಯದ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗುತ್ತದೆ ಎನ್ನುವ ಆಶಯವೂ ಇತ್ತು. ಆದರೆ ಬೆಲೆ ಕುಸಿತ ನಿರಾಸೆ ಮೂಡಿಸಿದೆ.
40 ರೂ. ನಿರೀಕ್ಷೆ ಇತ್ತು: ಕರೊನಾದಿಂದ ತೆಂಗು ಮಾರುಕಟ್ಟೆಯಲ್ಲಿಯೂ ಭಾರೀ ಕುಸಿತ ಕಂಡಿತ್ತು, ಇದೀಗ ಬೆಲೆ ಏರಿಕೆ ಆಗಬಹುದು, ಅದರಲ್ಲೂ ಪ್ರತಿ ಕೆಜಿ ತೆಂಗಿಗೆ 37-40 ರೂ.ವರೆಗೂ ಮಾರಾಟವಾಗಬಹುದು ಎನ್ನುವ ನಿರೀಕ್ಷೆಯಲ್ಲಿ ರೈತರಿದ್ದರು. ಡಿಸೆಂಬರ್ ಕೊನೆಯ ವಾರದವರೆಗೂ 30 ರೂ.ವರೆಗೂ ಮಾರಾಟವಾಗುತ್ತಿತ್ತು. ಆದರೆ ಇದೀಗ 24-26 ರೂ.ಗಳಿಗೆ ಇಳಿಕೆ ಕಂಡಿದೆ. ಅಲ್ಲದೆ, ಮಳೆ ಹಿನ್ನೆಲೆಯಲ್ಲಿ ಬಹುತೇಕ ರೈತರು ತೆಂಗಿನ ಕೊಯ್ಲು ಮಾಡಿಸಿರಲಿಲ್ಲ. ಖರೀದಿಯೂ ಕಡಿಮೆ ಇದ್ದ ಕಾರಣ ಈಗ ಎಲ್ಲರೂ ಒಟ್ಟಿಗೆ ಕೊಯ್ಲು ಮಾಡಿಸುತ್ತಿದ್ದಾರೆ. ಇದರಿಂದಾಗಿಯೂ ಬೆಲೆ ಕುಸಿತ ಕಂಡಿದೆ ಎನ್ನಲಾಗುತ್ತಿದೆ. ಆದರೆ ಹೊರ ರಾಜ್ಯಗಳ ಮಾರುಕಟ್ಟೆಯಲ್ಲಿ ಬೇಡಿಕೆ ಕುಸಿತವಾಗಿರುವುದು ದರ ಕಡಿಮೆ ಆಗಲು ಕಾರಣ ಎನ್ನಲಾಗುತ್ತಿದೆ.
ಜಿಲ್ಲೆಯ ತೆಂಗಿಗೆ ಮುಂಬೈ ಮತ್ತು ಹೈದರಾಬಾದ್ ಪ್ರಮುಖ ಮಾರುಕಟ್ಟೆಗಳಾಗಿವೆ. ರಾಮನಗರ ಮತ್ತು ಚನ್ನಪಟ್ಟಣ ಎಪಿಎಂಸಿ ಮಾರುಕಟ್ಟೆಯಲ್ಲಿರುವ ಪರವಾನಗಿ ಹೊಂದಿರುವ ಸುಮಾರು 45 ಮಾರಾಟಗಾರರು ರೈತರಿಂದ ತೆಂಗು ಖರೀದಿಸಿ ಹೊರ ರಾಜ್ಯಗಳಿಗೆ ಮಾರಾಟ ಮಾಡುತ್ತಾರೆ. ಆದರೆ ಮುಂಬೈ ಮತ್ತು ಹೈದರಾಬಾದ್ ಮಾರುಕಟ್ಟೆಗಳ ಮೇಲೆ ತಮಿಳುನಾಡು ತೆಂಗು ಲಗ್ಗೆ ಇಟ್ಟಿದ್ದು, ಕಡಿಮೆ ಬೆಲೆಗೆ ದೊರೆಯುತ್ತಿರುವುದರಿಂದ ರಾಜ್ಯದ ತೆಂಗಿನ ಬೆಲೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ ಎನ್ನುವುದು ಸ್ಥಳೀಯ ಖರೀದಿದಾರರ ಅಭಿಪ್ರಾಯ.
ಬೆಲೆ ಏರಿಕೆ ಆಗುತ್ತದೆ ಎನ್ನಲಾಗುತ್ತಿತ್ತು. ಈ ಸಮಯಕ್ಕೆ ಕೆ.ಜಿ.ಗೆ ಕನಿಷ್ಠ 40 ರೂ.ವರೆಗೂ ತೆಂಗು ಮಾರಾಟವಾಗಬೇಕಿತ್ತು. ಆದರೆ 25-26 ರೂ.ಗೆ ಇಳಿಕೆ ಕಂಡಿದೆ. ಸಂಕ್ರಾಂತಿ ನಂತರವೂ ಬೆಲೆ ಏರಿಕೆ ಆಗುತ್ತದೆ ಎನ್ನುವ ನಿರೀಕ್ಷೆ ಇಲ್ಲ. ತಮಿಳುನಾಡಿನ ಕಾಯಿ ರಾಜ್ಯಕ್ಕೆ ಬರುತ್ತಿರುವುದು ಬೆಲೆ ಕುಸಿತಕ್ಕೆ ಕಾರಣವಾಗಿದೆ. ಶಿವರಾಜ್, ತೆಂಗು ವ್ಯಾಪಾರಿ ಕಳೆದ 5 ತಿಂಗಳು ಮಳೆ ಕಾರಣದಿಂದ ತೆಂಗು ಕೊಯ್ಲು ಮಾಡಿಸಲು ಸಾಧ್ಯವಾಗಲಿಲ್ಲ. ಈಗ ಕೊಯ್ಲು ಮಾರಾಟ ಮಾಡಲು ಹೋದರೆ ಬೆಲೆ ಪ್ರತಿ ಕೆಜಿಗೆ 25 ರೂ.ಗೆ ಇಳಿಕೆ ಕಂಡಿದೆ. ಹೀಗಾದರೆ ರೈತರು ಮಾಡುವುದಾದರೂ ಏನು. ಸಿದ್ದರಾಜು, ತೆಂಗು ಬೆಳೆಗಾರ, ಚನ್ನಪಟ್ಟಣ