ಬೆಂಬಲ ಬೆಲೆಯಲ್ಲಿ ಭತ್ತ ಖರೀದಿ

11sor3 PADDY
ಸೊರಬ ಎಪಿಎಂಸಿಯಲ್ಲಿ ಭತ್ತ ಖರೀದಿ ಕೇಂದ್ರಕ್ಕೆ ಕಾರ್ಯದರ್ಶಿ ಎಚ್.ಆಶಾ ಚಾಲನೆ ನೀಡಿದರು. ಸಂತೋಷ್, ಕೆ.ಮಹೇಶಪ್ಪ, ಸರ್ವಜ್ಞಮೂರ್ತಿ, ವೈ.ಕಲ್ಪನಾ. ಸೈಯದ್ ಪಾಷಾ ಇತರರಿದ್ದರು.
Published on

ಸೊರಬ; ನೋಂದಾಯಿತ ರೈತರಿಂದ ಗುಣಮಟ್ಟದ ಭತ್ತವನ್ನು ಸರ್ಕಾರ ನಿಗದಿಪಡಿಸಿದ ಬೆಂಬಲ ಬೆಲೆಯಲ್ಲಿ ಖರೀದಿ ಮಾಡಲಾಗುತ್ತದೆ. ಎಪಿಎಂಸಿಯ ಖರೀದಿ ಕೇಂದ್ರದಲ್ಲೇ ಮಾರಾಟ ಮಾಡಬೇಕು ಎಂದು ಸೊರಬ ಎಪಿಎಂಸಿ ಕಾರ್ಯದರ್ಶಿ ಎಚ್.ಆಶಾ ತಿಳಿಸಿದರು.

ಪಟ್ಟಣದ ಎಪಿಎಂಸಿಯಲ್ಲಿ ಮಂಗಳವಾರ ಭತ್ತ ಖರೀದಿ ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸರ್ಕಾರದ ಆದೇಶದಂತೆ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಗುಣಮಟ್ಟದ ಭತ್ತವನ್ನು ರೈತರಿಂದ ನೇರವಾಗಿ ಖರೀದಿಸಲು ಮುಂದಾಗಿದ್ದೇವೆ ಎಂದರು.

ಖರೀದಿಗೆ ರಾಜ್ಯ ಸಹಕಾರ ಮಾರಾಟ ಮಹಾಮಂಡಳವನ್ನು ಖರೀದಿ ಏಜೆನ್ಸಿಯನ್ನಾಗಿ ನೇಮಿಸಲಾಗಿದೆ. ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಜಿಲ್ಲಾ ಟಾಸ್ಕ್‌ಫೋರ್ಸ್ ಸಮಿತಿ ತೀರ್ಮಾನದಂತೆ ಖರೀದಿ ಕೇಂದ್ರ ತೆರೆಯಲಾಗಿದೆ. ಸರ್ಕಾರದ ಆದೇಶದಂತೆ ಡಿಸೆಂಬರ್‌ನಿಂದ ನೋಂದಣಿ ಪ್ರಕ್ರಿಯೆ ಆರಂಭವಾಗಿದೆ. ತಾಲೂಕಿನಲ್ಲಿ ಈಗಾಗಲೆ 39 ರೈತರು ನೋಂದಣಿ ಮಾಡಿಸಿದ್ದು, ಇವರಿಂದ 1503 ಕ್ವಿಂಟಾಲ್ ಭತ್ತ ಆವಕವಾಗುವ ನಿರೀಕ್ಷೆಯಿದೆ ಎಂದರು.

ರೈತರು ಉತ್ಪನ್ನದ ಗುಣಮಟ್ಟ ಕಾಪಾಡಿಕೊಂಡಲ್ಲಿ ಖರೀದಿ ಕೇಂದ್ರದಲ್ಲಿ ದಾಸ್ತಾನು ಮಾಡಲು ಸಾಧ್ಯವಿದೆ. ಅಂತಹ ಭತ್ತವನ್ನು ಖರೀದಿ ಮಾಡಲಾಗುತ್ತದೆ. ಪ್ರತಿ ರೈತರಿಂದ ಎಕರೆಗೆ 25 ಕ್ವಿಂಟಾಲ್‌ನಂತೆ ಗರಿಷ್ಠ 50 ಕ್ವಿಂಟಾಲ್ ಭತ್ತ ಖರೀದಿಸಲಾಗುವುದು. ಸಾಮಾನ್ಯ ಭತ್ತಕ್ಕೆ 2,300 ರೂ. ಹಾಗೂ ಎ ಗ್ರೇಡ್ ಭತ್ತಕ್ಕೆ 2,320 ರೂ. ಜತೆಗೆ ಸರ್ಕಾರದ ಬೆಂಬಲ ಬೆಲೆ ಇರುತ್ತದೆ ಎಂದು ಮಾಹಿತಿ ನೀಡಿದರು.

ಜಿಲ್ಲಾ ಮಾರಾಟ ಮಂಡಳಿ ಕಾರ್ಯದರ್ಶಿ ಸಂತೋಷ್, ಮ್ಯಾಮ್ಕೋಸ್ ಸೊರಬ ವ್ಯವಸ್ಥಾಪಕ ಕೆ.ಮಹೇಶಪ್ಪ, ಆಹಾರ ಇಲಾಖೆ ಶಿರಸ್ತೇದಾರ್ ಸರ್ವಜ್ಞಮೂರ್ತಿ, ವೈ.ಕಲ್ಪನಾ. ಸೈಯದ್ ಪಾಷಾ, ನೀಲಕಂಠಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net