ಬೆಂಗಳೂರು ನಗರ ಜಿಲ್ಲಾ ವಿದ್ಯಾರ್ಥಿಗಳಿಗೆ ‘ಬಾಪೂಜಿ ಪ್ರಬಂಧ ಸ್ಪರ್ಧೆ’

Published on

ಬೆಂಗಳೂರು: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವತಿಯಿಂದ ಅ.2ರಂದು ಮಹಾತ್ಮ ಗಾಂಧೀಜಿಯವರ 155ನೇ ಜಯಂತಿ ಆಚರಿಸುತ್ತಿದ್ದು, ಯುವಜನರಲ್ಲಿ ಮಹಾತ್ಮರ ಬದುಕು, ಅಹಿಂಸಾ ಮಾರ್ಗ, ಅಸ್ಪೃಶ್ಯತೆ ನಿವಾರಣೆಗಾಗಿ ನಡೆಸಿದ ಪ್ರಯೋಗಗಳು ಇತ್ಯಾದಿ ವಿಚಾರಗಳ ಬಗ್ಗೆ ಅರಿವು ಮೂಡಿಸಲು ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ‘ಬಾಪೂಜಿ ಪ್ರಬಂಧ ಸ್ಪರ್ಧೆ’ ಹಮ್ಮಿಕೊಳ್ಳಲಾಗಿದೆ.

ಬೆಂಗಳೂರು ನಗರ ಜಿಲ್ಲಾ ಮಟ್ಟದ ವಿದ್ಯಾರ್ಥಿಗಳಿಗೆ ಸೀಮಿತವಾದಂತೆ ವಿವಿಧ ವಿಷಯಗಳ ಕುರಿತು ಪ್ರೌಢಶಾಲೆ, ಪದವಿ ಪೂರ್ವ ಶಿಕ್ಷಣ ಹಾಗೂ ಪದವಿ-ಸ್ನಾತಕೋತ್ತರ ಪದವಿಗಳ 3 ಪ್ರತ್ಯೇಕ ವಿಭಾಗಗಳಲ್ಲಿ ಪ್ರಬಂಧ ಸ್ಪರ್ಧೆ ನಡೆಯಲಿದೆ. ವಿಜೇತರಿಗೆ ಪ್ರಥಮ ಬಹುಮಾನ 3,000 ರೂ., ದ್ವಿತೀಯ ಬಹುಮಾನ 2,000 ರೂ. ಹಾಗೂ ತೃತೀಯ ಬಹುಮಾನ 1,000 ರೂ. ನಗದು ಹಾಗೂ ಪ್ರಮಾಣಪತ್ರವನ್ನು ಅ.2ರಂದು ನಡೆಯುವ ಗಾಂಧೀ ಜಯಂತಿ ವೇಳೆ ವಿತರಿಸಲಾಗುತ್ತದೆ. ವಿದ್ಯಾರ್ಥಿಗಳು ಸೆ.10ರೊಳಗಾಗಿ ತಮ ಶಾಲಾ-ಕಾಲೇಜುಗಳಲ್ಲಿ ನಡೆಸಲಾಗುವ ಪ್ರಬಂಧ ಸ್ಪರ್ಧೆಯಲ್ಲಿ ಪಾಲ್ಗೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಶಾಲಾ-ಕಾಲೇಜು ಮುಖ್ಯಸ್ಥರನ್ನು ಸಂಪರ್ಕಿಸಬಹುದು ಎಂದು ನಗರ ಜಿಲ್ಲೆಯ ವಾರ್ತಾ ಇಲಾಖೆಯ ಉಪನಿರ್ದೇಶಕಿ ಪಲ್ಲವಿ ಹೊನ್ನಾಪುರ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net