

ಬೆಳಗಾವಿ: ಬೆಂಗಳೂರಿನ ಗವಿಪುರಂದಲ್ಲಿರುವ ಮರಾಠಾ ಸಮಾಜದ ಜಗದ್ಗುರು ಪೀಠ ಗೋಸಾಯಿ ಮಹಾ ಸಂಸ್ಥಾನ ಭವಾನಿ ದತ್ತ ಪೀಠದ ಮಂಜುನಾಥ ಸ್ವಾಮೀಜಿ ಪಟ್ಟಾಧಿಕಾರ ಮಹೋತ್ಸವ ಫೆ. 10ರಿಂದ 14ರ ವರೆಗೆ ಜರುಗಲಿದೆ. ಈ ಕಾರ್ಯಕ್ರಮಕ್ಕೆ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರನ್ನು ವಿಶೇಷ ಅತಿಥಿಯನ್ನಾಗಿ ಆಹ್ವಾನಿಸಲಾಗಿದೆ ಎಂದು ವೇದಾಂತಾಚಾರ್ಯ ಮಂಜುನಾಥ ಸ್ವಾಮೀಜಿ ಹೇಳಿದರು.
ಬೆಳಗಾವಿಯಲ್ಲಿರುವ ಹುಕ್ಕೇರಿ ಹಿರೇಮಠದ ಶಾಖೆಗೆ ಗುರುವಾರ ಭೇಟಿ ನೀಡಿ ಮಾತನಾಡಿದ ಅವರು, ಹುಕ್ಕೇರಿ ಸ್ವಾಮೀಜಿ ಅವರು ಸಮುದಾಯದ ಎಲ್ಲ ಸ್ವಾಮೀಜಿಗಳೊಂದಿಗೆ ಅವಿನಾಭಾವ ಸಂಬಂಧ ಇಟ್ಟುಕೊಂಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಇಂಚಲ ಶಿವಾನಂದ ಭಾರತೀ ಸ್ವಾಮೀಜಿ, ಕಾಶೀ ಪೀಠದ ಜಗದ್ಗುರು, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ಸದ್ಗುರು ವಿನಯ ಗುರೂಜಿ ಸೇರಿದಂತೆ ಹಲವಾರು ಸ್ವಾಮೀಜಿ ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.
ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಮಂಜುನಾಥ ಸ್ವಾಮೀಜಿ ಅವರು ನಮ್ಮ ಜಿಲ್ಲೆಯವರೇ ಆಗಿದ್ದಾರೆ. ವೇದಾಂತಾಚಾರ್ಯ ಪದವೀಧರರು, ಕನ್ನಡ, ಮರಾಠಿ, ಸಂಸ್ಕೃತ ಹಾಗೂ ಹಿಂದಿ ಭಾಷೆಯಲ್ಲಿ ಅದ್ಭುತವಾಗಿ ಪ್ರವಚನ ನೀಡುವ ಶ್ರೀಗಳು, ಕಾಶಿಯ ಗಂಗಾತೀರದಲ್ಲಿ ನಡೆದ ಗಂಗಾರತಿ ಕಾರ್ಯಕ್ರಮ ಸಂದರ್ಭದಲ್ಲಿ ಇವರೇ ನೇತೃತ್ವ ವಹಿಸಿಕೊಂಡಿದ್ದರು ಎಂದು ಹೇಳಿದರು.
ಬುಡಾ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಎಂ.ವಿ. ಹಿರೇಮಠ, ವಿರೂಪಾಕ್ಷಯ್ಯ ನೀರಲಗಿಮಠ, ಬಿಜೆಪಿ ಬೆಳಗಾವಿ ಗ್ರಾಮೀಣ ಜಿಲ್ಲಾ ಮಹಿಳಾ ಘಟಕ ಉಪಾಧ್ಯಕ್ಷೆ ಡಾ.ಸೋನಾಲಿ ಸರ್ನೋಬತ್, ಸಮೀರ ಸರ್ನೋಬತ್, ಶ್ರೀಜೋತ ಸರ್ನೋಬತ್, ಸದಾನಂದ ಸರ್ನೋಬತ್, ರಾಹುಲ್ ಪವಾರ, ಸಂಜು ಭೋಸಲೆ ಇತರರಿದ್ದರು.