ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆಯಿಂದ 19725 ಕೋಟಿ ರೂ. ಆರ್ಥಿಕ ನಷ್ಟ

BNG Traffic
Published on

ತೀವ್ರವಾದ ಸಂಚಾರ ದಟ್ಟಣೆಯಿಂದ ಉತ್ಪಾದನೆ ಕುಂಠಿತ

ಬೆಂಗಳೂರು: ಹೆಚ್ಚುತ್ತಿರುವ ತ್ರೀವ್ರ ಟ್ರಾಫಿಕ್ ಸಮಸ್ಯೆಯಿಂದ ಬೆಂಗಳೂರಿನ ಆರ್ಥಿಕತೆಗೆ 19725ಕೋಟಿ ರೂ.ಗಳಷ್ಟು ಆರ್ಥಿಕ ನಷ್ಟ ಉಂಟಾಗುತ್ತಿದೆ ಎಂಬ ಆಘಾತಕಾರಿ ಮಾಹಿತಿಯು ಇತ್ತೀಚಿನ ಅಧ್ಯಯನದಿಂದ ಬೆಳಕಿಗೆ ಬಂದಿದೆ. ನಗರದಲ್ಲಿ ನಿರ್ಮಾಣವಾಗಿರುವ 60 ಪ್ಲೈಓವರ್ ಮೂಲಕ ಸಂಚಾರ ದಟ್ಟಣೆ ಹೆಚ್ಚಾಗಿದ್ದು, ಇದರಿಂದ ನಗರದ ಉತ್ಪಾದಕತೆ (ಪ್ರೊಡಕ್ಟಿವಿಟಿ)ಮತ್ತು ಒಟ್ಟಾರೆ ಆರ್ಥಿಕ ಬೆಳವಣಿಗೆಯು ತೀವ್ರವಾಗಿ ಕುಂಠಿತಗೊಳ್ಳುತ್ತಿದೆ.
ಸಂಚಾರ ವಿಳಂಬ, ಅತಿಯಾದ ದಟ್ಟಣೆ, ಸಿಗ್ನಲ್‌ಗಳ ನಿಲುಗಡೆ, ಸಮಯ ನಷ್ಟ, ಇಂಧನ ನಷ್ಟ ಮತ್ತು ಸಂಬಂಧಿತ ಅಂಶಗಳಿಂದಾಗಿ ಬೆಂಗಳೂರು ವರ್ಷಕ್ಕೆ ₹19,725 ಕೋಟಿ ನಷ್ಟವನ್ನು ಅನುಭವಿಸುತ್ತಿದೆ ಎಂದು ಖ್ಯಾತ ಟ್ರಾಫಿಕ್ ಮತ್ತು ಮೊಬಿಲಿಟಿ ತಜ್ಞ ಎಂಎನ್ ಶ್ರೀಹರಿ ಮತ್ತು ಅವರ ತಂಡ ನಡೆಸಿದ ಅಧ್ಯಯಯನದಿಂದು ಇದು ಬಹಿರಂಗಗೊಂಡಿದೆ.
ರಾಜ್ಯದ ಉತ್ಪಾದಕತೆಯಲ್ಲಿ ನಷ್ಟ ಉಂಟಾಗಿ, ಸಣ್ಣ ಮತ್ತು ಮಧ್ಯಮ ಉದ್ಯಮಗಳಲ್ಲಿ ಕಾರ್ಯನಿರ್ವಹಿಸುವವರಿಗೆ ಸಾಗಾಣೆ ವ್ಯವಸ್ಥೆ ವಿಳಂಬವಾಗಿದೆ, ಜೊತೆಗೆ ಅತಿಯಾದ ವಾಯು ಮಾಲಿನ್ಯದಿಂದಲೂ ಸಾರ್ವಜನಿಕರ ಆರೋಗ್ಯ ಹದಗೆಡುತ್ತಿದೆ. ಕ್ರಿಯಾತ್ಮಕ ಮೂಲಸೌಕರ್ಯ ಮತ್ತು ನಗರ ಯೋಜನೆಗಳನ್ನು ರೂಪಿಸಿದ್ದರೂ, ಸಾವಿರಾರೂ ಕೋಟಿ ರೂ. ನಷ್ಟವಾಗುತ್ತಿದೆ ಎಂದು ರಸ್ತೆ ಯೋಜನೆ, ಮೇಲ್ಸೇತುವೆಗಳು, ಟ್ರಾಫಿಕ್ ನಿರ್ವಹಣೆ ಮತ್ತು ಮೂಲಸೌಕರ್ಯದಲ್ಲಿನ ಕೊರತೆಗಳನ್ನು ವೀಕ್ಷಿಸಿರುವ ಸಂಚಾರ ತಜ್ಞರು ಮತ್ತು ತಂಡವು ಇದನ್ನು ಪತ್ತೆ ಹಚ್ಚಿದೆ.

ಐಟಿ ಕ್ಷೇತ್ರವೊಂದರಲ್ಲೇ 7,000 ಕೋಟಿ ರೂ.ನಷ್ಟ

ಬೆಂಗಳೂರಿನ ಆರ್ಥಿಕತೆಯ ಮೇಲೆ ಸಂಚಾರ-ಸಂಬಂಧಿತ ಅಡಚಣೆಗಳ ಪರಿಣಾಮವನ್ನು ಅಧ್ಯಯನವು ವಿಶ್ಲೇಷಿಸಿದೆ. ಅಂತ್ಯವಿಲ್ಲದ ಸಂಚಾರ ದಟ್ಟಣೆಯಿಂದಾಗಿ ನಗರದ ಉತ್ಪಾದಕತೆ ಮತ್ತು ಒಟ್ಟಾರೆ ಆರ್ಥಿಕ ಬೆಳವಣಿಗೆಗೆ ಅಡ್ಡಿಯಾಗಿದೆ ಎಂದು ವರದಿ ಹೇಳಿದೆ. ಬೆಂಗಳೂರಿನ ಆರ್ಥಿಕತೆಯ ಬೆನ್ನೆಲುಬಾಗಿರುವ ಐಟಿ ಉದ್ಯಮವು ಈ ಅಗ್ನಿಪರೀಕ್ಷೆಯ ಭಾರವನ್ನು ಹೊತ್ತುಕೊಂಡಿದೆ. ಉದ್ಯೋಗಿಗಳು ಟ್ರಾಫಿಕ್‌ನಲ್ಲಿ ಸಾಕಷ್ಟು ಸಮಯವನ್ನು ಕಳೆಯುತ್ತಿದ್ದಾರೆ.ಇದು ಉತ್ಪಾದಕತೆಯಲ್ಲಿ ಗಮನಾರ್ಹ ನಷ್ಟಕ್ಕೆ ಕಾರಣವಾಗುತ್ತಿದೆೆ ಎಂದು ಅಧ್ಯಯನವು ಬಹಿರಂಗಪಡಿಸಿದೆ. ಟ್ರಾಫಿಕ್ ಸಮಸ್ಯೆಯಿಂದಾಗಿಯೇ ಐಟಿ ಕ್ಷೇತ್ರವೊಂದರಲ್ಲೇ ವಾರ್ಷಿಕ 7,000 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಅಂದಾಜು ಮಾಡಲಾಗಿದೆ.

ಸಂಚಾರ ದಟ್ಟಣೆ ಸಮಸ್ಯೆ
ಸಣ್ಣ ಮತ್ತು ಮಧ್ಯಮ ಉದ್ಯಮಗಳ ಮೇಲೆ ಸಂಚಾರ ದಟ್ಟಣೆಯ ಪ್ರತಿಕೂಲ ಪರಿಣಾಮ ಬೀರುತ್ತಿದೆ ಎಂದು ಅಧ್ಯಯನವು ಹೇಳಿದೆ. ಇದು ಪ್ರತಿಯಾಗಿ, ನಗರದ ಆರ್ಥಿಕತೆಯ ಮೇಲೆ ಭಾರೀ ಪರಿಣಾಮವನ್ನು ಬೀರುತ್ತ್ತಿದ್ದು, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಾಗಾಣೆ ವಿಳಂಬದಿಂದಾಗಿ ಸುಮಾರು 3,500 ಕೋಟಿ ರೂ. ನಷ್ಟವನ್ನು ಉಂಟಾಗುತ್ತಿದೆ.

ಆರ್ಥಿಕ ನಷ್ಟದ ಜತೆಗೆ ವಾಹನಗಳಿಂದ ಹೊರ ಸೂಸುವ ಹೊಗೆಯಿಂದಾಗಿ ಬೆಂಗಳೂರು ನಗರದಲ್ಲಿ ಮಾಲಿನ್ಯ ಸಮಸ್ಯೆಯನ್ನು ಮತ್ತಷ್ಟು ಉಲ್ಬಣಗೊಳಿಸಿದೆ. ನಗರವು ತನ್ನ ಟ್ರಾಫಿಕ್ ತೊಂದರೆಗಳನ್ನು ನಿಭಾಯಿಸಲು ದೃಢವಾದ ಮತ್ತು ನಿಖರವಾದ ಪರಿಹಾರಗಳ ಮೂಲಕ ಸಮಸ್ಯೆ ನಿವಾರಿಸಬಹುದು. ಏಕೆಂದರೆ ಇದು ಆರ್ಥಿಕತೆಯ ಮೇಲೆ ದುಷ್ಪರಿಣಾಮ ಬೀರುವುದಲ್ಲದೆ ನಾಗರಿಕರ ಒಟ್ಟಾರೆ ಜೀವನದ ಗುಣಮಟ್ಟದ ಮೇಲೆಯೂ ಕೆಟ್ಟ ಪರಿಣಾಮ ಬೀರುತ್ತಲಿದೆ.

ಸಮಸ್ಯೆ ನಿವಾರಣೆಗೆ ಪರಿಹಾರಗಳು
ಸಾರ್ವಜನಿಕ ಸಾರಿಗೆಯನ್ನು ಅಪ್‌ಗ್ರೇಡ್ ಮಾಡುವುದು, ಸಂಚಾರ ದಟ್ಟಣೆಯ ಕಡಿಮೆಗೊಳಿಸುವುದಕ್ಕಾಗಿ ಕಾರ್‌ಪೂಲಿಂಗ್ ಕ್ರಮಗಳನ್ನು ಕೈಗೊಳ್ಳವುದು ಸೇರಿದಂತೆ ಬಹು-ಹಂತದ ವಿಧಾನಗಳನ್ನು ತಜ್ಞರು ಶಿಫಾರಸು ಮಾಡಿದ್ದಾರೆ. ಬೆಂಗಳೂರಿನ ರಸ್ತೆಗಳ ಮೇಲಿನ ಹೊರೆಯನ್ನು ಕಡಿಮೆ ಮಾಡಲು ಸರ್ಕಾರ, ನಾಗರಿಕ ಸಂಸ್ಥೆಗಳು ಮತ್ತು ನಾಗರಿಕರ ಸಂಘಟಿತ ಪ್ರಯತ್ನಗಳ ಅಗತ್ಯವಿದೆ ಎಂದು ಶ್ರೀಹರಿ ಹೇಳಿದ್ದಾರೆ. ಈ ಸಮಸ್ಯೆಯನ್ನು ನಿವಾರಿಸಲು ಮತ್ತು ಸುಗಮ ಸಂಚಾರದ ಹರಿವನ್ನು ಪುನಃಸ್ಥಾಪಿಸಲು ತುರ್ತು ಕ್ರಮಗಳ ಅಗತ್ಯವಿದೆ, ಬೆಂಗಳೂರಿನ ನಿವಾಸಿಗಳಿಗೆ ಸುಸ್ಥಿರ ಬೆಳವಣಿಗೆ ಮತ್ತು ಉತ್ತಮ ಗುಣಮಟ್ಟದ ಜೀವನವನ್ನು ಖಚಿತಪಡಿಸುತ್ತದೆ ಎಂದು ಅಧ್ಯಯನವು ಹೇಳುತ್ತದೆ. ಅಂಡರ್‌ಗ್ರೌಂಡ್ ಸಾರಿಗೆ ವ್ಯವಸ್ಥೆ, ಸಂಚಾರಿ ನಿಮಯ ಉಲ್ಲಂಸುವವರ ಮೇಲೆ ಹದ್ದಿನಕಣ್ಣಿಡುವುದಕ್ಕಾಗಿ ಮತ್ತಷ್ಟು ಕ್ಯಾಮೆರಾ ಅಳವಡಿ, ಸೆನ್ಸಾರ್, ಮೆಟ್ರೋಗಳು, ಸರ್ಕಾರಿ ಬಸ್ ಗಳಿಗೆ 1-2 ಕಿ.ಮೀ ಪರ್ಯಾಯ ಮಾರ್ಗಗಳನ್ನು ನಿರ್ಮಿಸಬೇಕಿದೆ.
ಮುಂದಿನ 25 ವರ್ಷಗಳಲ್ಲಿ ಬೆಂಗಳೂರಿಗೆ ಅಗತ್ಯವಿರುವ ಮೂಲಸೌಕರ್ಯ ಅಭಿವೃದ್ಧಿಪಡಿಸುವುದು ಇಂದಿನ ಅಗತ್ಯವಾಗಿದೆ. ಟ್ರಾಫಿಕ್ ಸರಳ ಮತ್ತು ಸರಾಗಗೊಳಿಸುವ ಸಲುವಾಗಿ ಶ್ರೀಹರಿ ಅವರ ತಂಡವು ಮೆಟ್ರೋ, ಮೊನೊರೈಲ್, ಹೆಚ್ಚಿನ ಸಾಮರ್ಥ್ಯದ ಬಸ್‌ಗಳಂತಹ ಸಮೂಹ ಸಾರಿಗೆಯನ್ನು ಹೆಚ್ಚಿಸಲು ಆದ್ಯತೆ ನೀಡಬೇಕು ಎಂದು ಹೇಳಿದೆ. ಜತೆಗೆ ಖಾಸಗಿ ಸಾರಿಗೆ ವ್ಯವಸ್ಥೆಯನ್ನು ಕಡಿಮೆಗೊಳಿಸಬೇಕು ಎಂಬುದು ಗಮನಾರ್ಹವಾಗಿದೆ. ವೇರಿಯಬಲ್ ಮೆಸೇಜ್ ಸಿಸ್ಟಮ್, ಕೃತಕ ಬುದ್ಧಿಮತ್ತೆ(ಎಐ) ಮತ್ತು ರೊಬೊಟಿಕ್ಸ್ ಪರಿಚಯದ ಬಳಕೆಯನ್ನು ಸಹ ವರದಿಯಲ್ಲಿ ಶಿಫಾರಸು ಮಾಡಲಾಗಿದೆ. 2023ರ ಪ್ರಕಾರ ಬೆಂಗಳೂರ ನಗರ 88 ಚದರ ಕಿಲೋಮೀಟರ್‌ನಿಂದ 985 ಚದರ ಕಿಲೋಮೀಟರ್‌ಗೆ ವಿಸ್ತರಿಸಿದೆ. ಇದನ್ನು 1,100 ಚದರ ಕಿಲೋಮೀಟರ್‌ಗಳಿಗೆ ವಿಸ್ತರಿಸಲು ಪ್ರಸ್ತಾಪಿಸಲಾಗಿದೆ. ಮತ್ತೊಂದೆಡೆ, ರಸ್ತೆಯ ಅಗಲೀಕರಣವಾಗಿಲ್ಲ. ಹೆಚ್ಚುತ್ತಿರುವ ಜನಸಂಖ್ಯೆ ಮತ್ತು ವಾಹನಗಳು ಹೆಚ್ಚಾದಂತೆ, ವಾಹನಗಳ ಸಂಖ್ಯೆಗೆ ತಕ್ಕಂತೆ ಮಾರ್ಗಗಳ ಸುಧಾರಣೆಯಾಗಿಲ್ಲ. ರಸ್ತೆಯ ಒಟ್ಟು ಉದ್ದವು ಸುಮಾರು 11,00 ಕಿಲೋಮೀಟರ್‌ಗಳಾಗಿದ್ದು, ಇದು ನಮ್ಮ ವಾಹನ ಸವಾರರ ಬೇಡಿಕೆಗಳನ್ನು ಪೂರೈಸಲು ಸಾಧ್ಯವಾಗುವುದಿಲ್ಲ ಎಂದು ವರದಿ ಹೇಳಿದೆ.

16 ಕೋಟಿ ರೂ.ವೆಚ್ಚದಲ್ಲಿ ಸೇತುವೆಗಳ ನಿರ್ಮಾಣ
ಇನ್‌ಸ್ಟಿಟ್ಯೂಟ್ ಫಾರ್ ಸೋಶಿಯಲ್ ಅಂಡ್ ಎಕನಾಮಿಕ್ ಚೇಂಜ್ (ಐಎಸ್‌ಇಸಿ) ಸಂಸ್ಥೆಯ ಇತ್ತೀಚಿನ ಅಧ್ಯಯನವು ಸಂಚಾರ ದಟ್ಟಣೆಯನ್ನು ನಿಭಾಯಿಸಲು ದೀರ್ಘಾವಧಿಯ ಪರಿಹಾರವಾಗಿ ಭಾರೀ ದಟ್ಟಣೆಯನ್ನು ಎದುರಿಸುತ್ತಿರುವ ನಗರದಲ್ಲಿ ಹತ್ತರಲ್ಲಿ ಐದು ಜಂಕ್ಷನ್‌ಗಳಲ್ಲಿ ಫ್ಲೈಓವರ್ ಅಥವಾ ಅಂಡರ್‌ಪಾಸ್ ನಿರ್ಮಾಣ ಮಾಡಬೇಕು ಎಂದು ಹೇಳಿದೆ. ಐಎಸ್‌ಇಸಿ ವರದಿ ಪ್ರಕಾರ ಈ ಜಂಕ್ಷನ್‌ಗಳಲ್ಲಿ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಅಲ್ಪಾವಧಿಯ ಮತ್ತು ದೀರ್ಘಾವಧಿಯ ಕ್ರಮ ಕೈಗೊಳ್ಳಬೇಕು ಎಂದು ಹೇಳಿದೆ. ಸಿಲ್ಕ್ ಬೋರ್ಡ, ಇಬ್ಬಳ್ಳೂರು, ಕಾಡುಬೀಸನಹಳ್ಳಿ, ಡೈರಿ ಸರ್ಕಲ್, ಟಿನ್ ಫ್ಯಾಕ್ಟರಿ, ಹೆಬ್ಬಾಳ, ಗೊರಗುಂಟೆಪಾಳ್ಯ, ಸಾರಕ್ಕಿ, ಬನಶಂಕರಿ ಮತ್ತು ಕುಮಾರಸ್ವಾಮಿ ಲೇಔಟ್ ಸೇರಿದಂತೆ ಹತ್ತು ಪ್ರಮುಖ ಜಂಕ್ಷನ್‌ಗಳಲ್ಲಿ ಮೇಲ್ಸೇತುವೆ ಅಥವಾ ಕೆಳಸೇತುವೆಗಳ ನಿರ್ಮಾಣಕ್ಕೆ ಒಟ್ಟು ₹16 ಕೋಟಿ ರೂ.ವೆಚ್ಚವಾಗಬಹುದು ಎಂದು ಅಂದಾಜು ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net