ಬೆಂಕಿ ನಂದಿಸಲು ವಿಳಂಬವಾಗಿದ್ದಕ್ಕೆ ತೋಟ ನಾಶ

15sor1 fire
ಸೊರಬ ಹಿರೇಶಕುನ ಗ್ರಾಮದ ಮಂಜುನಾಥ ಅವರ ತೋಟಕ್ಕೆ ಸಾಗರ ಪ್ರಾಂತ್ಯ ಅಡಕೆ ಬೆಳೆಗಾರ ಸಂಘದ ಅಧ್ಯಕ್ಷ ವ.ಶಂ.ರಾಮಚಂದ್ರ ಭಟ್, ವೆಂಕಟೇಶ್, ರಾಜೇಂದ್ರ, ಕೆ.ವಿ.ಗೌಡ, ಕೃಷ್ಣಪ್ಪ ಮತ್ತಿತರರು ಭೇಟಿ ನೀಡಿ ಪರಿಶೀಲಿಸಿದರು.
Published on

ಸೊರಬ: ಪಟ್ಟಣಕ್ಕೆ ಸಮೀಪದ ಹಿರೇಶಕುನ ಗ್ರಾಮದಲ್ಲಿ ಬೆಂಕಿಗಾಹುತಿಯಾದ ಮಂಜುನಾಥ ಎಂಬುವವರ ಅಡಕೆ ತೋಟಕ್ಕೆ ಸಾಗರ ಪ್ರಾಂತ್ಯ ಅಡಕೆ ಬೆಳೆಗಾರರ ಸಂಘದ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಕಾರ್ಯದರ್ಶಿ ಮಂಗಳವಾರ ಭೇಟಿ ನೀಡಿ ಪರಿಶೀಲಿಸಿದರು.

ಅಧ್ಯಕ್ಷ ವ.ಶಂ.ರಾಮಚಂದ್ರ ಭಟ್ ಮಾತನಾಡಿ, ಹಿರೇಶಕುನ ಗ್ರಾಮದ ಸರ್ವೇ ನಂ.111 ರಲ್ಲಿ ಮಂಜಪ್ಪ ಅವರ ಎರಡು ಎಕರೆ ಅಡಕೆ ತೋಟಕ್ಕೆ ಬೆಂಕಿ ಬಿದ್ದು ಅಡಕೆ, ಬಾಳೆ ಹಾಗೂ ತೋಟಕ್ಕೆ ಹಾಕಿದ ಪೈಪ್‌ಲೈನ್ ಹಾನಿಯಾಗಿದೆ. ಸೊರಬ ಅಗ್ನಿಶಾಮಕ ಠಾಣೆ ಸಮೀಪದಲ್ಲೇ ಇದ್ದರೂ ತೋಟವನ್ನು ಉಳಿಸಲು ಸಾಧ್ಯವಾಗಿಲ್ಲ. ಎರಡು ವಾಹನಗಳು ಇದ್ದು ಅವರು ಪ್ರಯತ್ನ ಮಾಡಿದ್ದರೆ ತೋಟವನ್ನು ಉಳಿಸಬಹುದಿತ್ತು. ಆದರೆ ಅಗ್ನಿಶಾಮಕ ಜಲವಾಹನಕ್ಕೆ 15 ವರ್ಷ ಪೂರ್ಣಗೊಂಡಿದ್ದು ಕೇಂದ್ರ ಸರ್ಕಾರದ ಆದೇಶದಂತೆ ವಾಹನ ಚಾಲನಾ ಪರವಾನಗಿ ರದ್ದಾಗಿದೆ. ಪಕ್ಕದ ಸಾಗರ ತಾಲೂಕಿನಿಂದ ಬಂದು ಬೆಂಕಿ ನಂದಿಸುವಷ್ಟರಲ್ಲಿ ತೋಟ ಸುಟ್ಟು ಕರಕಲಾಗಿದೆ. ಇದರಿಂದ ರೈತನಿಗೆ ತೀವ್ರ ನಷ್ಟವಾಗಿದೆ ಎಂದು ತಿಳಿಸಿದರು.

ಬೇಸಿಗೆ ಕಾಲದಲ್ಲಿ ಬೆಂಕಿ ಅವಘಡಗಳು ಸಂಭವಿಸುತ್ತವೆ. ಹೀಗಾಗಿ ತಾಲೂಕು ಅಡಳಿತ ಕೂಡಲೇ ಒಂದು ಖಾಸಗಿ ಇಲ್ಲವೇ ಸರ್ಕಾರಿ ವಾಹನವನ್ನು ಒದಗಿಸಬೇಕು ಹಾಗೂ ತೋಟದ ಮಾಲೀಕರಿಗೆ ಪರಿಹಾರ ನೀಡಬೇಕು ಎಂದು ತಹಸೀಲ್ದಾರ್ ಅವರನ್ನು ಒತ್ತಾಯಿಸಿದರು. ಅಲ್ಲದೆ ಅಗ್ನಿಶಾಮಕ ದಳದವರು ಈ ಬಗ್ಗೆ ಕ್ರಮವಹಿಸಬೇಕು ಎಂದು ತಿಳಿದರು.

ಸಾಗರ ಪ್ರಾಂತ್ಯ ಅಡಕೆ ಬೆಳೆಗಾರರ ಸಂಘದ ಉಪಾಧ್ಯಕ್ಷ ವೆಂಕಟೇಶ್ ಮೂಡಗೋಡು, ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಖಂಡಿಕಾ, ಕೆ.ವಿ.ಗೌಡ, ಕೃಷ್ಣಪ್ಪ ಓಟೂರು, ಮಂಜುನಾಥ, ಶಿವಾನಂದ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net