

ಕೆ.ಆರ್.ನಗರ: ಆದಿವಾಸಿಗಳು, ಯರವ, ಅಲೆಮಾರಿ, ಅರೆಅಲೆಮಾರಿ ಹಾಗೂ ಬುಡಕಟ್ಟು ಜನಾಂಗದವರಿಗೆ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ನಿರ್ಲಕ್ಷೃ ವಹಿಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಬಜೆಟ್‌ನಲ್ಲಿ ನ್ಯಾಯ ಒದಗಿಸಬೇಕು ಎಂದು ಕರ್ನಾಟಕ ರಾಜ್ಯ ಕಾಯಕ ಸಮಾಜಗಳ ಒಕ್ಕೂಟದ ಅಧ್ಯಕ್ಷ ಕೆ.ಸಿ.ಪುಟ್ಟಸಿದ್ದಶೆಟ್ಟಿ ಒತ್ತಾಯಿಸಿದರು.
ಕೊಡಗು ಜಿಲ್ಲೆಯ ಕುಂದಗ್ರಾಮದಲ್ಲಿ ವಾಸವಾಗಿರುವ 116 ಯರವ ಕುಟುಂಬಕ್ಕೆ ಮನೆ ನಿರ್ಮಿಸಿಕೊಡಲು ನೀಡಬೇಕಾಗಿದ್ದ 3.50 ಲಕ್ಷ ರೂ. ಅನುದಾನ ಬಿಡುಗಡೆಯಾಗಿಲ್ಲ. ಅರಣ್ಯಾಧಿಕಾರಿಗಳು ನಿರ್ದಾಕ್ಷಿಣ್ಯವಾಗಿ ಬುಡಕಟ್ಟು ಜನಾಂಗದವರನ್ನು ಒಕ್ಕಲೆಬ್ಬಿಸುತ್ತಿದ್ದಾರೆ. ಎಚ್.ಡಿ.ಕೋಟೆ ತಾಲೂಕಿನ ಮಾಳದವಾಡಿ, ಕೆರೆವಾಡಿಯಲ್ಲಿ 65ಕ್ಕೂ ಹೆಚ್ಚು ಕುಟುಂಬಕ್ಕೆ ಕೃಷಿಗೆಂದು ಅರ್ಧ ಗುಂಟೆ, 1ಗುಂಟೆ, 2ಗುಂಟೆ, ಎಂದು ವಿಂಗಡಿಸಿ ಅವರನ್ನು ಬೀದಿಪಾಲು ಮಾಡಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ದೂರಿದರು.
ಪಂಚಮಸಾಲಿ ಸಮುದಾಯವನ್ನು 2ಎ ಗೆ ಪ್ರವರ್ಗಕ್ಕೆ ಸೇರಿಸಬಾರದು. 2ಎ ಪ್ರವರ್ಗದಲ್ಲಿರುವ 102 ಜಾತಿಗಳ ಜನಸಂಖ್ಯೆ ಆಧಾರದ ಮೇಲೆ ಮೀಸಲಾತಿ ಸೌಲಭ್ಯ ಪಡೆಯಲು ಒಳ ಮೀಸಲಾತಿ ಕಲ್ಪಿಸಬೇಕು. ಕುರುಬ ಜನಾಂಗವನ್ನು ಎಸ್‌ಟಿ ಗೆ ಸೇರಿಸಬೇಕು. 2ಎ ಪ್ರವರ್ಗದವರಿಗೆ ಈಗಿರುವ ಶೇ.15 ರಷ್ಟು ಮೀಸಲಾತಿ ಪ್ರಮಾಣವನ್ನು ಶೇ.27 ರಷ್ಟಕ್ಕೆ ಹೆಚ್ಚಿಸುವುದರ ಜತೆಗೆ ಕಾಯಕ ಸಮಾಜಗಳ ಅಭಿವೃದ್ಧಿಗೆ ಪ್ರಾಧಿಕಾರ ರಚನೆ ಮಾಡಿ 1 ಸಾವಿರ ಕೋಟಿ ರೂ.ಅನುದಾನ ಒದಗಿಸಬೇಕೆಂದು ಆಗ್ರಹಿಸಿದರು.
ಬುಡಕಟ್ಟು ಜನಾಂಗದ ಬವಣೆ ಸೇರಿದಂತೆ ನಮ್ಮ ಸಂಘಟನೆಯ ಪ್ರಮುಖ ಬೇಡಿಕೆಗಳನ್ನೊಳಗೊಂಡ ಮನವಿ ಪತ್ರವನ್ನು ಅಧಿವೇಶನ ಸಂದರ್ಭದಲ್ಲಿ ಸಿಎಂಗೆ ಸಲ್ಲಿಸಲಾಗುವುದು. ಬಜೆಟ್ ಅಧಿವೇಶನದಲ್ಲಿ ಮೇಲಿನ ಬೇಡಿಕೆಗಳ ಕುರಿತು ಚರ್ಚೆಮಾಡಿ, ಪರಿಹಾರ ಒದಗಿಸಬೇಕು. ಇಲ್ಲವಾದಲ್ಲಿ ರಾಜ್ಯವ್ಯಾಪಿ ಹೋರಾಟ ಸಂಘಟಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಮುಖಂಡರಾದ ಮೋಹನ್‌ರಾವ್, ಪ್ರಕಾಶ್ ಸುದ್ದಿಗೋಷ್ಠಿಯಲ್ಲಿ ಇದ್ದರು.