ಬಿಸಿ ಏರಿದ ಒಕ್ಕಲಿಗ ವಿದ್ಯಾಸಂಸ್ಥೆ ಚುನಾವಣೆ : 15 ನಿರ್ದೇಶಕರ ಆಡಳಿತ ಮಂಡಳಿಗೆ ಅಂತಿಮ ಕಣದಲ್ಲಿ 47 ಮಂದಿ ,ಭಾನುವಾರ ಮತದಾನ

18 rama okkaliga sangha election news
Published on

ರಾಮನಗರ : ಬೊಂಬೆ ನಗರಿ ಚನ್ನಪಟ್ಟಣದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ನಂತರ ಈಗ ಪ್ರತಿಷ್ಠಿತ ಒಕ್ಕಲಿಗ ವಿದ್ಯಾ ಸಂಸ್ಥೆ ಚುನಾವಣೆ ಬಿಸಿ ಏರಿದೆ.

1964ರಲ್ಲಿ ಆರಂಭಗೊಂಡ ಸಂಸ್ಥೆಗೆ ಇದೇ ಭಾನುವಾರ ಚುನಾವಣೆ ನಡೆಯಲಿದ್ದು, ಸ್ಪರ್ಧಾ ಕಣದಲ್ಲಿರುವ ಅಭ್ಯರ್ಥಿಗಳ ಬಿರುಸಿನ ಪ್ರಚಾರ ನಡೆಯುತ್ತಿದೆ. ಒಂದು ತಿಂಗಳ ಹಿಂದೆಯೇ ಚುನಾವಣೆ ನಿಗದಿಯಾಗಿತ್ತಾದರೂ, ಚಿಹ್ನೆ ಹಂಚಿಕೆ ಗೊಂದಲದ ಹಿನ್ನೆಲೆಯಲ್ಲಿ ಮುಂದೂಡಲಾಗಿತ್ತು. ಈಗ ಮತ್ತೆ ಚುನಾವಣೆ ಪ್ರಕ್ರಿಯೆ ಆರಂಭಗೊಂಡಿದ್ದು, ಮತದಾನಕ್ಕೆ ಕ್ಷಣಗಣನೆ ಆರಂಭಗೊಂಡಿದೆ.

ತಾಲೂಕಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಎನಿಸಿರುವ ಒಕ್ಕಲಿಗರ ಸಾರ್ವಜನಿಕ ವಿದ್ಯಾರ್ಥಿ ನಿಲಯ ತನ್ನದೇ ಆದ ಮಹತ್ವ ಪಡೆದುಕೊಂಡಿದೆ. 1964ರಲ್ಲಿ ಸ್ಥಾಪನೆಗೊಂಡ ಈ ಸಂಸ್ಥೆಯನ್ನು ಉದ್ಘಾಟಿಸಿದ್ದು ಅಂದು ಎಐಸಿಸಿ ಅಧ್ಯಕ್ಷರಾಗಿದ್ದ ಕೆ.ಕಾಮರಾಜ್. ಅಂದಿನಿಂದ ತಾಲೂಕಿನ ಬಡ ವಿದ್ಯಾರ್ಥಿಗಳಿಗೆ ಅಕ್ಷರ ದಾಸೋಹವನ್ನು ಸಂಸ್ಥೆ ಮಾಡುತ್ತಲೇ ಬಂದಿದ್ದು, ಸಾವಿರಾರು ವಿದ್ಯಾರ್ಥಿಗಳಿಗೆ ಬದುಕು ಕಟ್ಟಿಕೊಟ್ಟಿದೆ.

ವಿದ್ಯಾರ್ಥಿ ನಿಲಯದ ಸಂಸ್ಥಾಪಕ ಅಧ್ಯಕ್ಷರು, ಮಾಜಿ ಶಿಕ್ಷಣ ಸಚಿವರಾಗಿದ್ದ ವಿ.ವೆಂಕಟಪ್ಪ. ಅಂದಿನ ಮಾಜಿ ಶಾಸಕ ಬಿ.ಜೆ.ಲಿಂಗೇಗೌಡರು ಸಂಸ್ಥಾಪಕ ಕಾರ್ಯದರ್ಶಿಗಳು, ಸಂಸ್ಥಾಪಕ ಆಡಳಿತ ಮಂಡಳಿಯಲ್ಲಿ ಅಬ್ಬೂರು ಗ್ರಾಮದ ಎ.ಗೋಪಣ್ಣ, ಡಿ.ಆರ್.ಲಿಂಗಯ್ಯ, ಅಕ್ಕೂರು ಗುಂಡಪ್ಪ, ಮಂಗಳವಾರಪೇಟೆಯ ಎಂ.ಡಿ.ಕೆಂಪಣ್ಣ, ನಾಗವಾರದ ಎನ್.ತಿಮ್ಮಯ್ಯ, ಸೈಯ್ಯದ್ ಕರೀಂ, ಪಟ್ಲು ಜವರಯ್ಯ ಇದ್ದರು. ಇವರ ಪರಿಶ್ರಮದಿಂದ ಆರಂಭಗೊಂಡ ಶಿಕ್ಷಣ ಸಂಸ್ಥೆ ಆರಂಭದಲ್ಲಿ ಸಣ್ಣಪುಟ್ಟ ಹೆಜ್ಜೆಯನ್ನಿರಿಸುತ್ತಾ ಸಾಗಿ ವಿಸ್ತಾರವಾಗಿ ಬೆಳೆದು ನಿಂತಿದೆ.

ಒಂದು ಕಾಲದಲ್ಲಿ ಸಾರ್ವಜನಿಕ ಶಾಲೆಯಲ್ಲಿ ಪ್ರವೇಶ ಪಡೆಯುವುದೇ ದೊಡ್ಡ ಸಾಧನೆ ಆಗಿತ್ತು. ಉತ್ತಮ ಶಿಕ್ಷಣಕ್ಕೆ ಹೆಸರುವಾಸಿಯಾಗಿದ್ದ ಈ ಶಿಕ್ಷಣ ಸಂಸ್ಥೆ ತಾಲೂಕಿನ ನಾಗವಾರ, ಮತ್ತೀಕೆರೆ ಹಾಗೂ ಚನ್ನಪಟ್ಟಣದಲ್ಲಿ ಶಾಲೆಯನ್ನು ಹೊಂದಿದೆ. ಒಂದು ಕಾಲಕ್ಕೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಹೈಸ್ಕೂಲ್ ಮತ್ತು ಪಿಯು ತರಗತಿಗಳು ತಮ್ಮ ಸನಿಹದಲ್ಲೇ ಸಿಗುವಂತೆ ಮಾಡಿದ್ದು ಈ ಶಿಕ್ಷಣ ಸಂಸ್ಥೆಯ ಹೆಮ್ಮೆಯಾಗಿದ್ದು, ನಾಗವಾರ ಮತ್ತು ಮತ್ತೀಕೆರೆಯಲ್ಲಿ ಶಾಲಾ ಕಾಲೇಜು ತೆರೆದ ಪರಿಣಾಮ ಅಸಂಖ್ಯಾತ ಗ್ರಾಮೀಣ ಹೆಣ್ಣುಮಕ್ಕಳು ಶಿಕ್ಷಣ ಪಡೆಯಲು ಸಾಧ್ಯವಾಗಿದೆ.

ಬಿರುಸಿನ ಅಖಾಡ: ತಾಲೂಕಿನ ಯಾವುದೇ ಸಾರ್ವತ್ರಿಕ ಚುನಾವಣೆಗೆ ಕಡಿಮೆ ಇಲ್ಲದಂತೆ ಈ ಚುನಾವಣೆ ಸಹ ಕಾವು ಪಡೆದುಕೊಂಡಿದೆ. ಆಡಳಿತ ಮಂಡಳಿಯನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳಬೇಕು ಎನ್ನುವ ಕಾರಣಕ್ಕೆ ಆಕಾಂಕ್ಷಿಗಳು ಕಸರತ್ತು ನಡೆಸುತ್ತಿದ್ದಾರೆ. ಚುನಾವಣಾ ಅಖಾಡ ಕಾವು ಪಡೆದು, ಮತಬೇಟೆಯೂ ಆರಂಭಗೊಂಡಿದೆ.

15 ನಿರ್ದೇಶಕರ ಆಡಳಿತ ಮಂಡಳಿಗೆ ಒಟ್ಟು 47 ಮಂದಿ ಸ್ಪರ್ಧಿಸಿದ್ದಾರೆ. ಸುಮಾರು 2500 ಸದಸ್ಯರಿದ್ದು, ಎರಡು ಪ್ರಮುಖ ಸಿಂಡಿಕೇಟ್‌ಗಳು ರಚನೆಯಾಗಿವೆ. ಈ ಸಿಂಡಿಕೇಟ್‌ಗಳ ಜತೆಗೆ ಕೆಲವರು ಸ್ವತಂತ್ರರಾಗಿ ಸ್ಪರ್ಧೆಯಲ್ಲಿದ್ದಾರೆ.

ಕಣದಲ್ಲಿ ಪ್ರಮುಖರು

ಒಕ್ಕಲಿಗರ ವಿದ್ಯಾ ಸಂಸ್ಥೆ ಚುನಾವಣೆಯಲ್ಲಿ ಚನ್ನಪಟ್ಟಣ ತಾಲೂಕಿನ ತಾಲೂಕಿನ ಪ್ರಮುಖರು ಕಣದಲ್ಲಿದ್ದಾರೆ. ಮಾಜಿ ಶಾಸಕ ಟಿ.ವಿ.ಕೃಷ್ಣಪ್ಪ ಪುತ್ರ ಟಿ.ಕೆ.ಯೋಗೀಶ್(ಪಾಪು), ಜಿಪಂ ಮಾಜಿ ಸದಸ್ಯ ಟಿ.ಪಿ.ಪುಟ್ಟಸಿದ್ದೇಗೌಡ, ಕಸಾಪ ಜಿಲ್ಲಾಧ್ಯಕ್ಷ ಸಿಂ.ಲಿಂ.ನಾಗರಾಜು, ನಗರಸಭಾ ಮಾಜಿ ಸದಸ್ಯ ಉಮಾಶಂಕರ್, ಕುವೆಂಪು ಕಾಲೇಜಿನ ನಿವೃತ್ತ ಅಧೀಕ್ಷಕ ವಿ.ಬಿ.ಚಂದ್ರು, ನಿವೃತ್ತ ಉಪನ್ಯಾಸಕ ಡಿ.ಪುಟ್ಟಸ್ವಾಮಿ, ಕಳೆದ ಸಾಲಿನ ಆಡಳಿತ ಮಂಡಳಿ ಕಾರ್ಯದರ್ಶಿ ಮೆಹರೀಶ್, ರಂಗಸ್ವಾಮಿ ನಾಗವಾರ, ಪಿಡಬ್ಲುಡಿ ನಿವೃತ್ತ ಇಂಜಿನಿಯರ್ ಎಸ್.ಟಿ.ನಾರಾಯಣಗೌಡ, ನಿವೃತ್ತ ರೈಲ್ವೆ ಪೊಲೀಸ್ ರಾಂಪುರ ಮಲ್ಲೇಶ್, ಖಾಸಗಿ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರಾದ ಪಟೇಲ್ ಸಿ.ರಾಜು, ಎಲ್.ವರದರಾಜು, ಪುಟ್ಟರಾಮೇಗೌಡ, ನಿವೃತ್ತ ಆಡಿಟರ್ ಬೈರನಾಯ್ಕನಹಳ್ಳಿ ರಾಮಚಂದ್ರು ಸೇರಿದಂತೆ ಹಲವಾರು ಪ್ರಮುಖರು ಅಖಾಡದಲ್ಲಿ ತಮ್ಮ ಅದೃಷ್ಟವನ್ನು ಪರೀಕ್ಷೆಗೆ ಒಡ್ಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net