ಬಿಳಿಗೆರೆ ಗ್ರಾಮ ಮನೆ ಮನೆಗೆ ಆರೋಗ್ಯ ನಿರ್ವಹಣಾ ತಂಡ ಭೇಟಿ

HUN-MAY-29-2(GAVADAGERE PHC PROGRAMME)
Published on

ಹುಣಸೂರು: ತಾಲೂಕಿನ ಗಾವಡಗೆರೆ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಗ್ರಾಮಗಳಿಗೆ ಸಾಂಕ್ರಾಮಿಕ ರೋಗಗಳ ನಿಯಂತ್ರಣ ಮತ್ತು ನಿರ್ವಹಣಾ ತಂಡದ ಸದಸ್ಯರು ಭೇಟಿ ನೀಡಿ ಗ್ರಾಮೀಣರಲ್ಲಿ ರೋಗ ನಿಯಂತ್ರಣದ ಕುರಿತು ಅರಿವು ಮೂಡಿಸಿದರು. ಬುಧವಾರ ಪಿಎಚ್‌ಸಿ ವ್ಯಾಪ್ತಿಯ ಬಿಳಿಗೆರೆ ಗ್ರಾಮ ಪಂಚಾಯಿತಿಯ ಪಿಡಿಒ ಶೀಲಾ ನೇತೃತ್ವದಲ್ಲಿ ತಂಡವು ಬಿಳಿಗೆರೆ ಗ್ರಾಮದ ಮನೆಮನೆಗೆ ಭೇಟಿ ನೀಡಿ ಪರಿಸರ ನೈರ್ಮಲ್ಯ, ಕುಡಿಯುವ ನೀರಿನ ಬಳಕೆ, ವೈಯಕ್ತಿಕ ಶುಚಿತ್ವ ಕಾಪಾಡಿಕೊಳ್ಳುವ ಕುರಿತು ಮಾಹಿತಿ ನೀಡಿದರು. ಈ ಸಂದರ್ಭ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಹನುಮಂತು ಮಾತನಾಡಿ, ಮನೆಗಳಲ್ಲಿ ಡ್ರಮ್‌ಗಳಲ್ಲಿ ನೀರು ಶೇಖರಿಸಿಡುವುದು ವಾಡಿಕೆಯಾಗಿದೆ. ಗ್ರಾಮೀಣರು ಈ ಡ್ರಂಗಳನ್ನು ವಾರಕ್ಕೆರಡು ಬಾರಿ ಶುಚಿಗೊಳಿಸಿ ಒಣಗಿಸಿ ನಂತರವೇ ನೀರು ತುಂಬಿಸಬೇಕು. ಮನೆಯ ಸುತ್ತಮುತ್ತಲು ನೀರು ನಿಲ್ಲದಂತೆ ಕ್ರಮವಹಿಸಬೇಕು. ಕುದಿಸಿ ಆರಿಸಿದ ನೀರನ್ನು ಮಾತ್ರ ಸೇವಿಸುವುದು ಅಗತ್ಯ. ವಾಂತಿ ಬೇಧಿ, ಸತತ ಜ್ವರದಿಂದ ಬಳಲುತ್ತಿದ್ದವರನ್ನು ಗುರುತಿಸಿ ಕೂಡಲೇ ಸಮೀಪದ ಸರ್ಕಾರಿ ಆಸ್ಪತೆಗೆ ದಾಖಲಿಸಬೇಕು. ಆರೋಗ್ಯ ಸಿಬ್ಬಂದಿಗೆ ಮಾಹಿತಿ ನೀಡಬೇಕು ಎಂದು ಮನವಿ ಮಾಡಿದರು. ಭೇಟಿ ವೇಳೆ ಆರೋಗ್ಯ ನಿರೀಕ್ಷಕರಾದ ಮಾದೇವಿ, ಶ್ರೀನಿವಾಸರಾವ್ ಸಿಂಧೆ, ಆಶಾ ಕಾರ್ಯಕರ್ತೆ ಸುಜಾತಾ, ಮತ್ತು ಗ್ರಾಮದ ಮುಖಂಡರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net