

ಚಾಮರಾಜನಗರ: ರಾಜ್ಯದ ಪ್ರಸಿದ್ಧ ಪೌರಾಣಿಕ ಶ್ರೀ ಕ್ಷೇತ್ರ ಯಳಂದೂರು ತಾಲೂಕಿನ ಬಿಳಿಗಿರಿರಂಗನಬೆಟ್ಟಕ್ಕೆ ಕಡೇ ಶ್ರಾವಣ ಶನಿವಾರ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು.
ಈ ಪುಣ್ಯ ಕ್ಷೇತ್ರಕ್ಕೆ, ಶ್ರಾವಣ ಮಾಸದಲ್ಲಿ ಅದರಲ್ಲೂ ಶನಿವಾರಗಳಂದು ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ವಾಡಿಕೆ ಇದೆ. ಇದಕ್ಕಾಗಿ ಬೆಳಗ್ಗೆಯಿಂದಲೇ ಬಿಳಿಗಿರಿರಂಗನಾಥಸ್ವಾಮಿ, ಅಲಮೇಲು ರಂಗನಾಯಕಿ ಅಮ್ಮನವರಿಗೆೆ ಅಭಿಷೇಕ ಮಾಡಿ, ವಿಶೇಷ ಅಲಂಕಾರ ಮಾಡಲಾಗಿತ್ತು.
ಬ್ಯಾಟೆಮನೆ ಸೇವೆ: ಈ ವೇಳೆ ಇಲ್ಲಿ ದಾಸಂದಿರು ಅಕ್ಕಿ, ಕಜ್ಜಾಯ, ಬೆಲ್ಲ, ತೆಂಗಿನಕಾಯಿ, ಕಡ್ಲೆಯನ್ನು ಹಾಕಿ ಬ್ಯಾಟೆಮನೆ ಸೇವೆ ಸಲ್ಲಿಸಿದರು. ದೇಗುಲದ ಸುತ್ತ ಜಾಗಟೆ, ಶಂಖನಾದ ಹೊಮ್ಮಿಸಿ ಹಾಪರಾಕ್, ಬೋಪರಾಕ್ ಎಂದು ಕೂಗಿ ವಿಶಿಷ್ಟವಾಗಿ ಆಚರಿಸುವ ಈ ಸಂಪ್ರದಾಯಕ್ಕೆ ಇದು ಸಾಕ್ಷಿಯಾಯಿತು. ಸರತಿ ಸಾಲಿನಲ್ಲಿ ನಿಂತು ಭಕ್ತರು ದೇವರ ದರ್ಶನವನ್ನು ಪಡೆದರು. ನಂತರ ಭಕ್ತರು ಇಲ್ಲಿರುವ ದೇವರ ದೊಡ್ಡ ಪಾದುಕೆಗಳಿಂದ ತಲೆಗೆ ಹೊಡಿಸಿಕೊಳ್ಳುವ ಮೂಲಕ ಭಕ್ತಿ ಮೆರೆದರು.
ಬಸ್‌ಗಾಗಿ ಭಕ್ತರ ಪರದಾಟ: ಪಟ್ಟಣದಿಂದ ಬೆಟ್ಟಕ್ಕೆ ತೆರಳಲು ಬೆಳಗ್ಗೆ ಸಮರ್ಪಕ ಬಸ್ ಸೌಲಭ್ಯವಿಲ್ಲದೇ ಭಕ್ತರು ಪರದಾಡುವಂತಾಯಿತು. ಆದರೂ ಕಾರು, ಬೈಕ್ ಸೇರಿದಂತೆ ನೂರಾರು ವಾಹನಗಳಲ್ಲಿ ಭಕ್ತರು ಬೆಟ್ಟಕ್ಕೆ ಆಗಮಿಸಿದ್ದರು. ದೇಗುಲದ ಕಮರಿ ಮೇಲೆ ವಾಹನಗಳ ನಿಲುಗಡೆಯನ್ನು ನಿಷೇಧಿಸಲಾಗಿತ್ತು. ದೇವಸ್ಥಾನದ ವತಿಯಿಂದ ಬರುವ ಭಕ್ತರಿಗೆ ವಿಶೇಷವಾಗಿ ದಾಸೋಹದ ವ್ಯವಸ್ಥೆಯನ್ನು ಮಾಡಲಾಗಿತ್ತು. ಅಲ್ಲದೆ ಶೀಘ್ರ ದರ್ಶನಕ್ಕೂ ವ್ಯವಸ್ಥೆ ಮಾಡಲಾಗಿತ್ತು. ಭಕ್ತರ ದಟ್ಟಣೆ ನಿಯಂತ್ರಣಕ್ಕೆ ತಾತ್ಕಾಲಿಕವಾಗಿ ಬ್ಯಾರಿಕೇಡ್‌ಗಳನ್ನು ಹಾಕಲಾಗಿತ್ತು. ಕಡ್ಲೆಪುರಿ, ಖಾರ, ತಿಂಡಿ, ತಿನಿಸು, ಮಕ್ಕಳ ಆಟಿಕೆ ಸಾಮಾನುಗಳ ಅಂಗಡಿಯವರಿಗೆ ಭರ್ಜರಿ ವ್ಯಾಪಾರವಾಯಿತು.
ಇಲ್ಲಿನ ಸ್ಥಳೀಯ ಸೋಲಿಗರೂ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಹರಕೆ ಹೊತ್ತ ಭಕ್ತರು, ಗರುಡೋತ್ಸವ, ದಂಡಗೋಲು, ಉತ್ಸವಮೂರ್ತಿ ಸೇರಿದಂತೆ ವಿವಿಧ ಸೇವೆಗಳನ್ನು ಮಾಡಿಸುವ ಮೂಲಕ ಭಕ್ತಿ ಮೆರೆದರು.