ಬಿರುಗಾಳಿ ಮಳೆಗೆ ಬಾಳೆ ತೋಟ ನಾಶ

12tnp01
ತಿ.ನರಸೀಪುರ ಸಮೀಪದ ಸುಜ್ಜಲೂರು ಗ್ರಾಮದಲ್ಲಿ ಗುರುವಾರ ರಾತ್ರಿ ಬಿರುಗಾಳಿ ಸಮೇತ ಬಿದ್ದ ಮಳೆಗೆ ಬಾಳೆ ಗಿಡಗಳು ನೆಲಕ್ಕುರುಳಿರುವುದು.
Published on

ತಿ.ನರಸೀಪುರ: ತಾಲೂಕಿನ ಸುಜ್ಜಲೂರು ಗ್ರಾಮದಲ್ಲಿ ಗುರುವಾರ ಬಿರುಗಾಳಿ ಸಹಿತ ಬಿದ್ದ ಮಳೆಯ ರಭಸಕ್ಕೆ ಬಾಳೆ ತೋಟ ನಾಶವಾಗಿದೆ.


ಗ್ರಾಮದ ನಾಗಮ್ಮ ಅವರ 4.20 ಎಕರೆ ತೋಟದಲ್ಲಿ ಸಾಲ ಮಾಡಿ ಬೆಳೆದಿದ್ದ 5500ಕ್ಕೂ ಹೆಚ್ಚು ಬಾಳೆಗಿಡಗಳು ಬಿರುಗಾಳಿಯಿಂದ ನಾಶವಾಗಿವೆ.


ಬಿರುಗಾಳಿಯಿಂದ ನೇಂದ್ರ ಬಾಳೆ ಗಿಡಗಳು ನೆಲಕ್ಕುರುಳಿ ನಷ್ಟ ಅನುಭವಿಸಿ ಕಂಗಾಲಾಗಿರುವ ನಾಗಮ್ಮ ಅವರ ಪುತ್ರ ಪರಶಿವಪ್ಪ ಮಾತನಾಡಿ, ಕೈ ಸಾಲ ಹಾಗೂ ಬ್ಯಾಂಕ್‌ಗಳಲ್ಲಿ ಸಾಲ ಮಾಡಿ 6 ತಿಂಗಳ ಹಿಂದೆ ತೋಟ ಬಾಳೆ ಗಿಡ ಹಾಕಲಾಗಿತ್ತು. ಇನ್ನು ಒಂದೂವರೆ ತಿಂಗಳಲ್ಲಿ ಫಸಲು ಕೈ ಸೇರುವ ನಿರೀಕ್ಷೆ ಇತ್ತು. ಗುರುವಾರ ವಿಪರೀತ ಗಾಳಿ, ಮಳೆಯಿಂದ ಕೈಗೆ ಬಂದಿದ್ದ ಬೆಳೆ ನಾಶವಾಗಿದೆ. ಬಾಳೆ ಬೆಳೆ ಫಸಲಿಗೆ ಬಂದಿದ್ದು 30 ದಿನಗಳಲ್ಲಿ ಬಾಳೆಗೊನೆ ಕಟಾವು ಮಾಡಬೇಕಿತ್ತು. ಇದರಿಂದ ಕೆಲವರ ಸಾಲ ತೀರಿಸಬಹುದು ಎಂದು ಕೊಂಡಿದ್ದೆ. ಮಳೆ, ಬಿರುಗಾಳಿಯಿಂದ ಬಾಳೆ ತೋಟ ನೆಲಕ್ಕೆ ಉರುಳಿರುವುದರಿಂದ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ ಎಂದರು.


ತೋಟಗಾರಿಕೆ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಆಗಿರುವ ನಷ್ಟದ ಪ್ರಮಾಣ ಅಂದಾಜಿಸಿ ಸರ್ಕಾರದಿಂದ ಪರಿಹಾರ ಕೊಡಿಸುವಂತೆ ಅವರು ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net