

ಬೆಂಗಳೂರು: ಉಪ ಲೋಕಾಯುಕ್ತ ಕೆ.ಎನ್.ಫಣೀಂದ್ರ ಅವರ ನೇತೃತ್ವದ ಲೋಕಾಯುಕ್ತ ಅಧಿಕಾರಿಗಳ ತಂಡ ಬಿಬಿಎಂಪಿ ಎಆರ್‌ಒ ಕಚೇರಿಗಳ ಮೇಲೆ ಗುರುವಾರ ದಿಡೀರ್ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.
ಸಾಲು ಸಾಲು ದೂರುಗಳು ಬಂದ ಹಿನ್ನೆಲೆಯಲ್ಲಿ ಇತ್ತೀಚೆಗೆ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ನೇತೃತ್ವದ ೧೨ ತಂಡ ನಗರದಲ್ಲಿರುವ ವಿವಿಧ ಬಿಬಿಎಂಪಿ ಎಆರ್‌ಒ ಕಚೇರಿಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದರು. ಅದರ ಮುಂದುವರಿದ ಭಾಗವಾಗಿ ಉಪಲೋಕಾಯುಕ್ತರು ಬಿಬಿಎಂಪಿಯ ಸಹಾಯಕ ಕಂದಾಯ ಅಧಿಕಾರಿ(ಎಆರ್‌ಒ) ಮತ್ತು ಎಕ್ಸಿಕ್ಯುಟಿವ್ ಇಂಜಿನಿಯರಿಂಗ್ ಅಧಿಕಾರಿಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.
ಡಾ.ಟಿಸಿಎಂ ರಾಯನ್ ರಸ್ತೆಯಲ್ಲಿರುವ ಗಾಂಧಿನಗರ ಉಪವಿಭಾಗದ ಎಆರ್‌ಒ ಕಚೇರಿ,
ವಸಂತನಗರದ ತಿಮ್ಮಯ್ಯ ರಸ್ತೆಯಲ್ಲಿರುವ ಎಕ್ಸಿಕ್ಯುಟಿವ್ ಇಂಜಿನಿಯರಿಂಗ್ ಕಚೇರಿ, ವಿಜಯನಗರ ಸಮೀಪದ ಎಂ.ಸಿ ಲೇಔಟ್‌ನಲ್ಲಿರುವ ಗೋವಿಂದರಾಜನಗರ ಉಪ ವಿಭಾಗದ ಎಆರ್‌ಒ ಕಚೇರಿ ಮತ್ತು ತಿಮ್ಮಯ್ಯ ರಸ್ತೆಯಲ್ಲಿರುವ ವಸಂತನಗರ ಉಪ ವಿಭಾಗದ ಎಆರ್‌ಒ ಕಚೇರಿಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದು, ಈ ವೇಳೆ ಹಲವು ಲೋಪದೋಷಗಳು ಕಂಡು ಬಂದಿದ್ದು, ಉಪ ಲೋಕಾಯುಕ್ತ ಕೆ.ಎನ್.ಫಣೀಂದ್ರ ಅವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.