ಬಿತ್ತನೆ ಕಾರ್ಯ ಕುಂಠಿತ

22NGD3
Published on

ನಂಜನಗೂಡು: ಮುಂಗಾರು ಮಳೆ ಆಗಮನ ವಿಳಂಬವಾಗಿರುವುದರಿಂದ ಮಳೆಯಾಶ್ರಿತ ಪ್ರದೇಶಗಳಲ್ಲಿ ಬಿತ್ತನೆ ಕಾರ್ಯ ಕುಂಠಿತವಾಗಿದ್ದು, ರೈತರು ಆತಂಕದಲ್ಲಿ ಸಿಲುಕಿದ್ದಾರೆ.

ತಾಲೂಕಿನಲ್ಲಿ ಒಟ್ಟು 71,973 ಹೆಕ್ಟೇರ್ ಪ್ರದೇಶದಲ್ಲಿ ಭೂ ಹಿಡುವಳಿದಾರರಿದ್ದು, 25,328 ಹೆಕ್ಟೇರ್ ನೀರಾವರಿ ಹಾಗೂ 46,898 ಹೆಕ್ಟೇರ್ ಮಳೆಯಾತ್ರಿತ ಅಚ್ಚುಕಟ್ಟು ಪ್ರದೇಶವಿದೆ. ಮುಂಗಾರು ಬಿತ್ತನೆಗಾಗಿ ಈಗಾಗಲೇ ಒಟ್ಟು 270 ಕ್ವಿಂಟಾಲ್ ವಿವಿಧ ದ್ವಿದಳ ಧಾನ್ಯಗಳ ಬಿತ್ತನೆ ಬೀಜವನ್ನು ರೈತರಿಗೆ ವಿತರಣೆ ಮಾಡಲಾಗಿದೆ. ಆದರೆ ನಿರೀಕ್ಷಿತ ಮಟ್ಟದಲ್ಲಿ ಮುಂಗಾರು ಮಳೆ ಆಗದ ಕಾರಣ ರೈತರು ಬಿತ್ತನೆ ಮಾಡಲು ಸಾಧ್ಯವಾಗಿಲ್ಲ.

ಏಪ್ರಿಲ್ ತಿಂಗಳಲ್ಲಿ ಅಶ್ವಿನಿ, ಭರಣಿ, ಮೇ ತಿಂಗಳಲ್ಲಿ ಕೃತ್ತಿಕಾ, ರೋಹಿಣಿ ಮಳೆ ವಾಡಿಕೆಯಂತೆ ನಿರೀಕ್ಷಿತ ಮಟ್ಟದಲ್ಲಿ ಆಗಿಲ್ಲ. ಏಪ್ರಿಲ್ ತಿಂಗಳಿನಲ್ಲಿ ತಾಲೂಕಿನಲ್ಲಿ 65.9 ಮಿ.ಮೀ. ಮಳೆ ಆಗುವ ನಿರೀಕ್ಷೆಯಿತ್ತು. ಆದರೆ ಆಗಿದ್ದು 25.5 ಮಿ.ಮೀ. ಮಳೆ ಮಾತ್ರ. ಈಗಾಗಲೇ ವಿವಿಧ ಬೆಳೆಗಳನ್ನು ಬಿತ್ತನೆ ಮಾಡಿ ಮುಂಗಾರು ಮಳೆಗಾಗಿ ಕಾಯುತ್ತಿರುವ ರೈತರಿಗೂ ಹಿನ್ನಡೆ ಉಂಟಾಗಿದೆ. ಎಳ್ಳು, ಚೆಂಡು ಹೂ, ಹತ್ತಿ ಸೇರಿದಂತೆ ಇತರ ಫಸಲಿನ ಲಾಭದ ನಿರೀಕ್ಷೆಯಲ್ಲಿದ್ದ ರೈತರಿಗೂ ಬಿಸಿ ತಟ್ಟಿದೆ.

2023-24ನೇ ಸಾಲಿನಲ್ಲಿ ಒಟ್ಟು 66,795 ಹೆಕ್ಟೇರ್ ಪ್ರದೇಶದಲ್ಲಿ ವಿವಿಧ ಬೆಳೆಗಳ ಗುರಿ ಹೊಂದಲಾಗಿತ್ತು. ಆದರೆ ಮಳೆ ಅಭಾವದಿಂದ 35,140 ಹೆಕ್ಟೇರ್ ಪ್ರದೇಶದಲ್ಲಷ್ಟೇ ಬಿತ್ತನೆ ಸಾಧ್ಯವಾಗಿದ್ದು, ಈ ಬಾರಿ ಶೇ.50ರಷ್ಟು ಸಹ ಗುರಿ ಮುಟ್ಟಲು ಸಾಧ್ಯವಾಗಿಲ್ಲ ಎಂಬುದು ಗಮನಾರ್ಹ ಸಂಗತಿಯಾಗಿದೆ.
ಸೂರ್ಯಕಾಂತಿಗೆ ಮೊರೆ

ಪ್ರಸಕ್ತ ಸಾಲಿನಲ್ಲಿ 2,500 ಹೆಕ್ಟೇರ್ ಪ್ರದೇಶದಲ್ಲಿ ಸೂರ್ಯಕಾಂತಿ ಬಿತ್ತನೆ ಗುರಿ ಹೊಂದಲಾಗಿತ್ತು. ಆದರೆ, 4,530 ಹೆಕ್ಟೇರ್ ಪ್ರದೇಶದಲ್ಲಿ ಸೂರ್ಯಕಾಂತಿ ಬೆಳೆಯುವ ಮೂಲಕ ರೈತರು ದುಪ್ಪಟ್ಟು ಪ್ರಮಾಣದಲ್ಲಿ ಗುರಿ ಸಾಧನೆ ಮಾಡಿದ್ದಾರೆ. ಆದರೆ ಹತ್ತಿ ಬೆಳೆ ಗುರಿ ಸಾಧನೆ ನಿರೀಕ್ಷಿತ ಮಟ್ಟದಲ್ಲಿ ಆಗಿಲ್ಲ. 14 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಈ ಬಾರಿ ಹತ್ತಿ ಗುರಿ ಹೊಂದಲಾಗಿತ್ತು. ಆದರೆ 9,020 ಹೆಕ್ಟೇರ್ ಪ್ರದೇಶದಲ್ಲಷ್ಟೇ ಗುರಿ ತೋರಲು ಸಾಧ್ಯವಾಗಿದೆ. ಮಳೆಯಾಶ್ರಿತ ಪ್ರದೇಶದ ರೈತರ ಪ್ರಮುಖ ಬೆಳೆಯಾಗಿದ್ದ ಹತ್ತಿ ಬಿತ್ತನೆ ಬೀಜ ಲಭ್ಯವಾಗದ ಕಾರಣ ಹಿನ್ನಡೆಯಾಗಿದೆ. ಮುಂಗಾರು ಮಳೆ ಕೊರತೆಯಿಂದಾಗಿ ಹೈಬ್ರಿಡ್ ಜೋಳ, ರಾಗಿ, ಹುರುಳಿ, ನೆಲಗಡಲೆ ಬಿತ್ತನೆಯಲ್ಲೂ ತೀರಾ ಕಡಿಮೆಯಾಗಿದೆ ಎನ್ನಲಾಗಿದೆ.

ನೀರಾವರಿ ಪ್ರದೇಶಕ್ಕೂ ತಟ್ಟಿದ ಬಿಸಿ: ಕಬಿನಿ ಹಾಗೂ ನುಗು ಜಲಾಶಯಗಳು ಭರ್ತಿಯಾಗದ ಕಾರಣ ಕಬಿನಿ ಬಲದಂಡೆ, ನುಗು ಮೇಲ್ದಂಡೆ, ಹಲಸೂರು ನಾಲೆಗಳಿಗೆ ಸಮರ್ಪಕವಾಗಿ ನೀರು ಹರಿಸಲು ಸಾಧ್ಯವಾಗಿಲ್ಲ. ಪರಿಣಾಮ ಈ ನಾಲೆಗಳ ಕೊನೆ ಭಾಗದ ಅಚ್ಚುಕಟ್ಟು ಪ್ರದೇಶಗಳಲ್ಲಿ ರೈತರು ಬೆಳೆದಿದ್ದ ಭತ್ತದ ಫಸಲಿಗೂ ಬಿಸಿ ತಟ್ಟಿದೆ. ಇದರಿಂದಾಗಿ ಭತ್ತದ ಇಳುವರಿಯೂ ಕೈಕೊಟ್ಟಿದೆ. ಜತೆಗೆ ಮಾರುಕಟ್ಟೆಯಲ್ಲಿ ಭತ್ತದ ದರವೂ ಕುಸಿದಿರುವುದರಿಂದ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಶುಂಠಿ ಬೆಳೆಗೆ ಗುತ್ತಿಗೆ: ಮುಂಗಾರು ಮಳೆ ಕೈಕೊಟ್ಟಿರುವುದರಿಂದ ತಾಲೂಕಿನ ಅನೇಕ ಕಡೆ ರೈತರು ಶುಂಠಿ ಬೆಳೆಯುವ ಕೇರಳ ಮೂಲದವರಿಗೆ ಜಮೀನು ಗುತ್ತಿಗೆ ನೀಡುತ್ತಿದ್ದಾರೆ. ಈಗಾಗಲೇ ಶುಂಠಿ ಬೆಲೆ ಗಗನಕ್ಕೇರಿರುವುದರಿಂದ ಜಮೀನು ಗುತ್ತಿಗೆ ಪಡೆಯಲು ಕೇರಳ ಮೂಲವರು ಹೆಚ್ಚಿನ ಹಣದ ಆಮಿಷ ತೋರಿಸಿ ರೈತರಿಂದ ಭೂಮಿ ಗುತ್ತಿಗೆ ಪಡೆಯುತ್ತಿದ್ದಾರೆ. ಹೀಗಾಗಿ ಮಳೆಯಾಶ್ರಿತ ಪ್ರದೇಶದಲ್ಲಿ ದ್ವಿದಳ ಧಾನ್ಯ, ಹತ್ತಿ, ರಾಗಿ, ಜೋಳ ಬೆಳೆಯುತ್ತಿದ್ದ ಜಮೀನುಗಳಲ್ಲಿ ಈಗ ಶುಂಠಿ ಬೆಳೆ ಕಾಣಲಾರಂಭಿಸಿದೆ.

ನಂಜನಗೂಡು ತಾಲೂಕಿನಲ್ಲಿ ಈ ಬಾರಿ ಸೂರ್ಯಕಾಂತಿ ಹಾಗೂ ಹೆಸರುಕಾಳು ಬೆಳೆಯಲ್ಲಿ ನಿಗದಿತ ಗುರಿಗಿಂತ ಹೆಚ್ಚು ಹೆಕ್ಟೇರ್ ಪ್ರದೇಶದಲ್ಲಿ ರೈತರು ಫಸಲು ಬೆಳೆದಿದ್ದಾರೆ. ಆದರೆ ಮುಂಗಾರು ಮಳೆ ವಿಳಂಬದಿಂದಾಗಿ ಹತ್ತಿ ಬೆಳೆಯಲ್ಲಿ ನಿಗದಿತ ಗುರಿ ತಲುಪಲು ಸಾಧ್ಯವಾಗಿಲ್ಲ. ಎಣ್ಣೆಕಾಳು ಬೆಳೆಗೆ ರೈತರನ್ನು ಪ್ರೇರಪಿಸಲಾಗುತ್ತಿದೆ. ಆ ಮೂಲಕ ವಿದೇಶದಿಂದ ಎಣ್ಣೆಕಾಳು ಆಮದು ಮಾಡಿಕೊಳ್ಳುವುದನ್ನು ತಪ್ಪಿಸಬಹುದಾಗಿದೆ.
ದೀಪಕ್
ಸಹಾಯಕ ನಿರ್ದೇಶಕ, ಕೃಷಿ ಇಲಾಖೆ.

ಮುಂಗಾರು ಮಳೆ ನಿರೀಕ್ಷಿತ ಮಟ್ಟದಲ್ಲಿ ಆಗಿಲ್ಲ. ಇದರಿಂದಾಗಿ ಈಗಾಗಲೇ ಬಿತ್ತನೆ ಮಾಡಿರುವ ರೈತರ ಫಸಲು ಒಣಗಿ ನಿರೀಕ್ಷಿತ ಮಟ್ಟದಲ್ಲಿ ಲಾಭ ಕಂಡುಕೊಳ್ಳಲು ಸಾಧ್ಯವಾಗಿಲ್ಲ. ಬಿತ್ತನೆ ಮಾಡುವ ಸಲುವಾಗಿ ಮುಂಗಾರು ಮಳೆ ನಿರೀಕ್ಷೆಯಲ್ಲಿರುವ ರೈತರಿಗೂ ನಿರಾಸೆ ಉಂಟಾಗಿದೆ. ಹೀಗಾಗಿ, ಈ ಬಾರಿ ನಿರೀಕ್ಷಿತ ಮಟ್ಟದಲ್ಲಿ ವಿವಿಧ ಬೆಳೆಗಳ ಗುರಿ ಸಾಧನೆ ತೋರುವುದು ತುಸು ಕಷ್ಟವೇ ಆಗಿದೆ.
ರಾಜಶೇಖರ್, ಹುಸ್ಕೂರು ರೈತ, ನಂಜನಗೂಡು ತಾಲೂಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net