ಬಿಜೆಪಿಯಿಂದ ರೇಣುಕಸ್ವಾಮಿ ಕುಟುಂಬಕ್ಕೆ 2 ಲಕ್ಷ ರೂ. ಪರಿಹಾರ

BYV
Published on

ಚಿತ್ರದುರ್ಗ: ಬೆಂಗಳೂರಿನಲ್ಲಿ ಬರ್ಬರವಾಗಿ ಕೊಲೆಯಾದ ರೇಣುಕಸ್ವಾಮಿ ಕುಟುಂಬಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪಕ್ಷದ ಪರವಾಗಿ ಮಂಗಳವಾರ 2 ಲಕ್ಷ ರೂ. ಪರಿಹಾರ ನೀಡಿದರು.

ಕುಟುಂಬಕ್ಕೆ ಸಾಂತ್ವಾನ ಹೇಳಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ದುರ್ಘಟನೆಯಿಂದ ಕುಟುಂಬಕ್ಕೆ ತುಂಬಲಾರದ ನಷ್ಟವಾಗಿದೆ. ರೇಣುಕಸ್ವಾಮಿ ಪತ್ನಿ ನಾಲ್ಕು ತಿಂಗಳ ಗರ್ಭಿಣಿಯಾಗಿದ್ದು, ಅವರಿಗೆ ಸರ್ಕಾರಿ ನೌಕರಿ, ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವ ಮೂಲಕ ರಾಜ್ಯ ಸರ್ಕಾರ ಧೈರ್ಯ ತುಂಬುವ ಕೆಲಸಕ್ಕೆ ಮುಂದಾಗಬೇಕು. ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಜಿ.ಪರಮೇಶ್ವರ್ ಅವರಿಗೆ ಒತ್ತಾಯಿಸಲಾಗುವುದು ಎಂದರು.

ಘಟನೆ ನಡೆದು ವಾರದ ಮೇಲಾದರೂ ಸರ್ಕಾರ ಪರಿಹಾರ ನೀಡಿ ಧೈರ್ಯ ತುಂಬುವ ಕೆಲಸ ಮಾಡಿಲ್ಲ. ಈಗಲಾದರೂ ಕುಟುಂಬಕ್ಕೆ ಅಗತ್ಯ ನೆರವು ನೀಡಬೇಕು ಎಂದು ಒತ್ತಾಯಿಸಿದರು.

ಇದೇ ವೇಳೆ ತಂದೆ ಕಾಶಿನಾಥಯ್ಯ, ತಾಯಿ ರತ್ನಪ್ರಭಾ ಮಾತನಾಡಿ, ನಾವು ಬಲಾಢ್ಯರಲ್ಲ. ಮಗನನ್ನು ಕಳೆದುಕೊಂಡ ದುಃಖ ಪ್ರತಿ ಕ್ಷಣವೂ ಕುಟುಂಬಸ್ಥರನ್ನು ಕಾಡುತ್ತಿದೆ. ಆದ್ದರಿಂದ ನೊಂದಿರುವ ನಮ್ಮ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಿ ಎಂದು ಮನವಿ ಮಾಡಿಕೊಂಡರು.

ಸಂಸದ ಗೋವಿಂದ ಎಂ ಕಾರಜೋಳ, ಹೊಳಲ್ಕೆರೆ ಶಾಸಕ ಡಾ.ಎಂ.ಚಂದ್ರಪ್ಪ, ಎಂಎಲ್ಸಿ ಕೆ.ಎಸ್.ನವೀನ್, ಮಾಜಿ ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ, ಎಸ್.ತಿಪ್ಪೇಸ್ವಾಮಿ, ರಾಜ್ಯ ಖನಿಜ ನಿಗಮದ ಮಾಜಿ ಅಧ್ಯಕ್ಷ ಎಸ್.ಲಿಂಗಮೂರ್ತಿ, ಮುಖಂಡರಾದ ಜಿ.ಎಸ್.ಅನಿತ್‌ಕುಮಾರ್‌, ಸುರೇಶ್‌ ಸಿದ್ದಾಪುರ, ಕೆ.ಟಿ.ಕುಮಾರಸ್ವಾಮಿ, ಪಕ್ಷದ ಜಿಲ್ಲಾಧ್ಯಕ್ಷ ಎ.ಮುರುಳಿ, ಮಧುಗಿರಿ ಅಧ್ಯಕ್ಷ ಹನುಂತೇಗೌಡ, ಮಾಧುರಿ ಗಿರೀಶ್‌, ನಗರಸಭೆ ಸದಸ್ಯ ಸೊಪ್ಪು ಸುರೇಶ್‌ ಇತರರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net