

ಬೆಂಗಳೂರು: ಬಿಜೆಪಿಯವರು ಸಿಬಿಐ ಸಂಸ್ಥೆಯನ್ನು ತಮ್ಮ ಮನೆ ಸರಕಿನಂತೆ ಭಾವಿಸಿದ್ದಾರೆ(CBI home goods for BJP: D.K. Suresh is sarcastic) . ಮನೆಗೆಲಸದವರನ್ನು ಬಳಸಿಕೊಂಡಂತೆ ಸಿಬಿಐ ಬಳಸಿಕೊಳ್ಳುವ ಪ್ರವೃತ್ತಿ ಎದ್ದು ಕಾಣುತ್ತಿದೆ ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ಟೀಕಿಸಿದರು.
ಸದಾಶಿವನಗರ ನಿವಾಸದಲ್ಲಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಮೇಲ್ಮನೆಯಲ್ಲಿ ಸಿ.ಟಿ. ರವಿ ಆಡಿರುವ ಮಾತು, ನಡೆದುಕೊಂಡಿರುವ ರೀತಿ, ಪದೇ ಪದೆ ಹೆಣ್ಣು ಮಕ್ಕಳ ಬಗ್ಗೆ ಆಡಿರುವ ಮಾತು ಬಿಜೆಪಿಗೆ ಶೋಭೆ ತರುತ್ತದೆಯೇ? ಎಂದು ಪ್ರಶ್ನಿಸಿದರು.
ಸಂಸ್ಕೃತಿ ಬಗ್ಗೆ ಮಾತನಾಡುತ್ತ ಜನರ ಮುಂದೆ ಬರುವ ಬಿಜೆಪಿಗರಿಗೆ ಆ ಸಂಸ್ಕೃತಿ ಎಲ್ಲಿ ಹೋಯ್ತು? ಆರ್‌ಎಸ್‌ಎಸ್ ಹೇಳಿಕೊಡುವ ಸಂಸ್ಕೃತಿ ಇದೇನಾ? ಬಿಜೆಪಿ ನಾಯಕರು ನಿರಂತರವಾಗಿ ಮಹಿಳೆಯರ ಜತೆ ನಡೆದುಕೊಳ್ಳುವ ರೀತಿ ನೀತಿಯನ್ನು ರಾಜ್ಯದ ಜನ ಗಮನಿಸಬೇಕು ಎಂದು ಹೇಳಿದರು.
ಬಿಜೆಪಿ ನಾಯಕರಿಗೆ ಸಂಸ್ಕೃತಿ ಬಗ್ಗೆ ಪಾಠ ಮಾಡುವ ಆರ್‌ಎಸ್‌ಎಸ್‌ನವರು ಈಗಲಾದರೂ ಅವರಿಗೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು.
ರವಿ ಅವರ ಹೇಳಿಕೆಯನ್ನು ಬಿಜೆಪಿಯ ಯಾವುದೇ ನಾಯಕನ ಬಳಿ ಖಂಡಿಸಲು ಮಾತುಗಳು ಇಲ್ಲ. ಹೆಣ್ಣಿನ ಕುಲಕ್ಕೆ ಅಪಮಾನ ಮಾಡಿರುವುದನ್ನು ಖಂಡಿಸದಿದ್ದಾಗ ಮಾಧ್ಯಮ ಸ್ನೇಹಿತರು ಅವರಿಗೆ ಬೆಂಬಲ ನೀಡುವುದೇಕೆ? ಅವರ ಮಾತುಗಳ ಬಗ್ಗೆ ಮಾಧ್ಯಮಗಳ ಬಳಿ ದಾಖಲೆಗಳು ಇದ್ದರೂ ಮಾಧ್ಯಮಗಳು ಬೇರೆ ವಿಚಾರಗಳನ್ನು ಪ್ರಚಾರಕ್ಕೆ ಬಿಡುತ್ತಿದ್ದೀರಿ ಎಂದು ಬೇಸರ ವ್ಯಕ್ತಪಡಿಸಿದರು.
ರಾಹುಲ್ ಗಾಂಧಿ ಅವರನ್ನು ಡ್ರಗ್ ಅಡಿಕ್ಟ್ ಎಂದು ಹೇಳಿದ್ದೆ ಇಷ್ಟೆಲ್ಲದಕ್ಕೂ ಕಾರಣವಾಯಿತೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ರಾಹುಲ್ ಗಾಂಧಿ ಅವರನ್ನು ಡ್ರಗ್ ಅಡಿಕ್ಟ್ ಎಂದಿದ್ದು ಆಯಿತು, ಅವರನ್ನು ಕೊಲೆಗಾರ ಎಂದಿದ್ದೂ ಆಯಿತು. ಮಾಧ್ಯಮ ಸ್ನೇಹಿತರು ಯಾವುದನ್ನು ಖಂಡಿಸುತ್ತಿಲ್ಲ. ನೀವೆಲ್ಲರೂ ಚರ್ಚೆ ಮಾಡುತ್ತಿರುವುದು ರವಿ ಅವರ ಬಂಧನದ ವಿಚಾರವನ್ನು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಆರೋಪ ಮಾಡುವುದರಲ್ಲಿ, ಮಾತು ತಿರುಚುವುದರಲ್ಲಿ ಸಿ.ಟಿ. ರವಿ ನಿಪುಣ. ಅವರ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ. ಅವರು ಮಾಡಿರುವ ತಪ್ಪಿಗೆ ರಾಜ್ಯದ ಮಹಿಳೆಯರಲ್ಲಿ ಕ್ಷಮೆ ಕೋರುವುದು ಒಳಿತು ಎಂದರು.
ನನಗೇನಾದರೂ ಆದರೆ ಡಿ.ಕೆ. ಶಿವಕುಮಾರ್ ಹಾಗೂ ಲಕ್ಷ್ಮಿ ಹೆಬ್ಬಾಳ್ಕರ್ ಅವರೇ ಕಾರಣ ಎಂಬ ರವಿ ಅವರ ಹೇಳಿಕೆ ಬಗ್ಗೆ ಕೇಳಿದಾಗ, ಸಿ.ಟಿ. ರವಿ ಕೆಲವು ವಿಚಾರದಲ್ಲಿ ಪ್ರಚಂಡರು. ದೆಹಲಿಯಲ್ಲಿ ಅವರದೇ ಸರ್ಕಾರ ಇದೆ. ಅವರಿಗೆ ಹೇಳಿ ಎಸ್‌ಪಿಜಿ ಭದ್ರತೆ ತೆಗೆದುಕೊಳ್ಳಲಿ ಅಥವಾ ರಾಜ್ಯ ಸರ್ಕಾರದಿಂದ ಭದ್ರತೆ ಪಡೆದು ಹಿಂದೊಂದು ಮುಂದೆ ಒಂದು ಭದ್ರತಾ ವ್ಯಾನ್ ಹಾಕಿಕೊಂಡು ಓಡಾಡಲಿ. ರಾಜ್ಯ ಪೊಲೀಸರ ಮೇಲೆ ನಂಬಿಕೆ ಇಲ್ಲವಾದರೆ ಎಸ್‌ಪಿಜಿ ಭದ್ರತೆ ಪಡೆಯಲಿ ಎಂದು ಡಿ.ಕೆ.ಸುರೇಶ್ ಟಾಂಗ್ ಕೊಟ್ಟರು.