ಬಿಜೆಪಿಗೆ ಎಡಗೈ ಸಮುದಾಯ ಬೆಂಬಲ

03HDK2
Published on

ಎಚ್.ಡಿ.ಕೋಟೆ: ರಾಜ್ಯ ಸರ್ಕಾರ ಒಳ ಮೀಸಲಾತಿ ಜಾರಿ ಮಾಡಲು ಕ್ರಮ ವಹಿಸಿದ್ದರಿಂದ ಈ ಬಾರಿ ಪರಿಶಿಷ್ಟ ಜಾತಿಯ ಎಡಗೈ (ಮಾದಿಗ) ಸಮುದಾಯ ಬಿಜೆಪಿ ಪಕ್ಷವನ್ನು ಬೆಂಬಲಿಸಿದೆ ಎಂದು ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಕೋಟೆ ಎಂ. ಶಿವಣ್ಣ ತಿಳಿಸಿದರು.


ಪಟ್ಟಣದಲ್ಲಿ ಬುಧವಾರ ಬಿಜೆಪಿ ಅಭ್ಯರ್ಥಿ ಕೆ.ಎಂ. ಕೃಷ್ಣ ನಾಯಕ ಪರವಾಗಿ ವಿವಿಧ ವಾರ್ಡ್‌ಗಳಲ್ಲಿ ಸಂಚರಿಸಿ ಮತಯಾಚನೆ ಮಾಡಿ ಮಾತನಾಡಿದರು.


ಪರಿಶಿಷ್ಟರ ಹೆಸರಿನಲ್ಲಿ ಅಧಿಕಾರಕ್ಕೆ ಬರುತ್ತಿದ್ದ ಕಾಂಗ್ರೆಸ್ ಸರ್ಕಾರ ಒಳ ಮೀಸಲಾತಿ ಜಾರಿ ಮಾಡುವಲ್ಲಿ ಮೀನಮೇಷ ಎಣಿಸಿತ್ತು. ಆದರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಮೀಸಲಾತಿ ಹೆಚ್ಚಳ ಮಾಡುವುದರ ಜತೆಗೆ ಒಳ ಮೀಸಲಾತಿ ಜಾರಿ ಮಾಡಲು ಕ್ರಮವಹಿಸಿ ಪರಿಶಿಷ್ಟ ಜಾತಿಯ ಎಲ್ಲ ಜಾತಿಗಳಿಗೆ ಸಾಮಾಜಿಕ ನ್ಯಾಯ ಒದಗಿಸಿದೆ. ಆ ಕಾರಣಕ್ಕೆ ಈ ಬಾರಿ ಮಾದಿಗ ಸಮುದಾಯ ಬಿಜೆಪಿಗೆ ಹೆಚ್ಚು ಬೆಂಬಲ ನೀಡಲಿದೆ ಎಂದರು.


ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಈ ಬಾರಿ ಬಿಜೆಪಿ 140 ಸ್ಥಾನಗಳನ್ನು ಗೆಲ್ಲಲಿದೆ. ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಕೊಟ್ಟಂತಹ ಯೋಜನೆಗಳು ಹಾಗೂ ರಾಜ್ಯದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೀಡಿದ ಜನಪರ ಆಡಳಿತ ತಾಲೂಕಿನಲ್ಲಿ ಬಿಜೆಪಿಗೆ ಗೆಲುವಿಗೆ ವರದಾನವಾಗಲಿದೆ ಎಂದು ಹೇಳಿದರು.


ತಾಲೂಕು ಅಭಿವೃದ್ಧಿ ಆಗಬೇಕಾದರೆ ಬಿಜೆಪಿ ಶಾಸಕ ಆಯ್ಕೆಯಾಗಬೇಕು. ತಾಲೂಕು ಅಭಿವೃದ್ಧಿಯಲ್ಲಿ ಹಿಂದೆ ಬಿದ್ದಿದೆ. ರಾಜ್ಯದಲ್ಲಿ ಅಧಿಕಾರದಲ್ಲಿ ಒಂದು ಪಕ್ಷವಿದ್ದರೆ ತಾಲೂಕಲ್ಲಿ ಇನ್ನೊಂದು ಪಕ್ಷದ ಶಾಸಕರು ಆಯ್ಕೆಯಾಗುತ್ತಿದ್ದರಿಂದ ತಾಲೂಕು ಅಭಿವೃದ್ಧಿಯಲ್ಲಿ ಹಿಂದುಳಿದಿದೆ. ಈ ಬಾರಿ ರಾಜ್ಯದಲ್ಲಿ ಮತ್ತೆ ಬಿಜೆಪಿ ಪಕ್ಷ ಅಧಿಕಾರಕ್ಕೆ ಬರಲಿದೆ. ಅದೇ ರೀತಿ ತಾಲೂಕಿನಲ್ಲಿಯೂ ಬಿಜೆಪಿ ಶಾಸಕರಾಗಿ ಆಯ್ಕೆ ಆಗಲಿದ್ದು ತಾಲೂಕು ಸಂಪೂರ್ಣ ಅಭಿವೃದ್ಧಿ ಹೊಂದಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.


ಬಿಜೆಪಿ ತಾಲೂಕು ಉಸ್ತುವಾರಿ ಅಶ್ವತ್ಥನಾರಾಯಣ, ತಾಲೂಕು ಬಿಜೆಪಿ ಅಧ್ಯಕ್ಷ ಹಂಚಿಪುರ ಗುರುಸ್ವಾಮಿ, ಸುರೇಂದ್ರ, ಉಡ ನಾಗರಾಜು, ಶಿವಯ್ಯ, ಚಾಮರಾಜು, ನರಸಿಂಹಮೂರ್ತಿ, ಶಿವಲಿಂಗು, ಶಿವರಾಜು, ಗೋವಿಂದು, ನಾಗರಾಜು, ಶ್ರೀನಿವಾಸ್ ಬೂದನೂರು, ಸ್ವಾಮಣ್ಣ, ಪ್ರಸಾದ್, ಕಾಳಪ್ಪಾಜಿ, ಚಾಮರಾಜು ಕೃಷ್ಣಪುರ, ವೆಂಕಟೇಶ್, ರಾಮು, ನಾಗೇಂದ್ರ, ಹರೀಶ್, ನಾಗರಾಜು ಹಂಚಿಪುರ, ಕಟ್ಟೆಹುಂಡಿ ಬಸವರಾಜು, ಶಿವಣ್ಣ, ಚಲುವರಾಜು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net