

ಡಬಲ್ ಇಂಜಿನ್ ಸರ್ಕಾರದ್ದು ಸುಳ್ಳು ಭರವಸೆ
ಹುಣಸೂರು: ರಾಜ್ಯದಲ್ಲಿರುವ ಡಬಲ್ ಇಂಜಿನ್ ಸರ್ಕಾರದಿಂದ ಜನಕಲ್ಯಾಣ ಆಗಿಲ್ಲ. ಉದ್ಯೋಗ ಸೃಷ್ಟಿಯಾಗಲಿಲ್ಲ. ಖಾತೆಗೆ 15 ಲಕ್ಷ ರೂ. ಬರಲಿಲ್ಲ. ಇಂತಹ ಸರ್ಕಾರ ಬೇಕೆ ಅಥವಾ ದಾನ-ಧರ್ಮಗಳನ್ನು ಮಾಡುವ ಹಸ್ತದ ಸರ್ಕಾರ ಬೇಕೇ ಎನ್ನುವುದನ್ನು ಮತದಾರರೇ ತೀರ್ಮಾನಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಎಂದರು.
ನಗರದ ಮುನೇಶ್ವರ ಕಾವಲ್ ಮೈದಾನದಲ್ಲಿ ಬುಧವಾರ ಆಯೋಜಿಸಿದ್ದ ಪ್ರಜಾಧ್ವನಿ ಯಾತ್ರೆಯಲ್ಲಿ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಡಬಲ್ ಇಂಜಿನ್ ಸರ್ಕಾರದ ಭರವಸೆಗಳು ಸುಳ್ಳು ಭರವಸೆಗಳಾಗಿವೆ. ಆದರೆ ಕಾಂಗ್ರೆಸ್ ಪಕ್ಷಕ್ಕೆ ಸುಳ್ಳು ಹೇಳುವ ಅವಶ್ಯಕತೆಯಿಲ್ಲ. ಸಿದ್ಧರಾವಯ್ಯ ಅವರ ಸರ್ಕಾರದ ಭಾಗ್ಯಗಳ ಯೋಜನೆಗಳೇ ಇದಕ್ಕೆ ಸಾಕ್ಷಿ. ಕಾಂಗ್ರೆಸ್‌ಗೆ ಶಕ್ತಿ ಎಂದರೆ ಅದು ದೇಶದ ಶಕ್ತಿ. ಕಾಂಗ್ರೆಸ್‌ನ ಇತಿಹಾಸವೆಂದರೆ ಅದು ದೇಶದ ಇತಿಹಾಸ ಎಂದರು.
ಅವಕಾಶ ಸದುಪಯೋಗಪಡಿಸಿಕೊಳ್ಳಿ: ದೇವರು ವರ, ಶಾಪ ಎರಡನ್ನೂ ಕೊಡುವುದಿಲ್ಲ. ಆದರೆ ಪ್ರತಿಯೊಬ್ಬರಿಗೂ ಅವಕಾಶ ನೀಡುತ್ತಾನೆ. ಹುಣಸೂರಿನ ಶಾಸಕ ಎಚ್.ಪಿ. ಮಂಜುನಾಥ್ ಸಿಕ್ಕ ಅವಕಾಶವನ್ನು ತಾಲೂಕಿನ ಸರ್ವಜನರ ಅಭಿವೃದ್ಧಿಗಾಗಿ ಬಳಸಿಕೊಂಡಿದ್ದಾರೆ. ತಾಲೂಕಿನಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಿಕೊಂಡಿದ್ದಾರೆ. ದಾನ-ಧರ್ಮಗಳಲ್ಲಿ ಎತ್ತಿದ ಕೈ ಅವರದ್ದು. ನಾವ್ಯಾರೂ ಶಾಶ್ವತವಲ್ಲ, ನಮ್ಮ ಕೊಡುಗೆಗಳೇ ಎಂದಿಗೂ ಶಾಶ್ವತವಾಗಿರುತ್ತವೆ. ಸಾಂಸ್ಕೃತಿಕ ನಗರಿ ಮೈಸೂರು ಭಾಗದ ಸರ್ವತೋಮುಖ ಅಭಿವೃದ್ಧಿಯಲ್ಲಿ ಯದುವಂಶದ ದೊರೆಗಳ ಕೊಡುಗೆ ಅಪಾರ. ಅಂತೆಯೆ ಕಾಂಗ್ರೆಸ್ ಸರ್ಕಾರ ಆಹಾರ, ಅಕ್ಷರ, ಆರೋಗ್ಯ ಮತ್ತು ಆಶ್ರಯಕ್ಕೆ ಹೆಚ್ಚಿನ ಆದ್ಯತೆ ನೀಡಿ ಅನೇಕ ಕೊಡುಗೆಗಳನ್ನು ನೀಡಿದೆ ಎಂದರು.
ಒಡೆದ ಮನಸುಗಳನ್ನು ಒಂದುಗೂಡಿಸಲು ಯತ್ನ: ಕಾಂಗ್ರೆಸ್ ಈ ದೇಶದಲ್ಲಿ ಒಡೆದು ಹೋಗಿರುವ ಮನಸುಗಳನ್ನು ಒಂದುಗೂಡಿಸಲು ಯತ್ನ ಮಾಡಿದೆ. ರೈತ, ಕೂಲಿ ಕಾರ್ಮಿಕರ ಪರವಾದ ಸರ್ಕಾರ ಕಾಂಗ್ರೆಸ್ ಸರ್ಕಾರದ್ದಾಗಿದೆ. ಜನರ ಕಷ್ಟ-ಕಾರ್ಪಣ್ಯಗಳನ್ನು ಅರಿತುಕೊಳ್ಳುವುದೇ ಪ್ರಜಾಧ್ವನಿ ಯಾತ್ರೆಯ ಮುಖ್ಯ ಉದ್ದೇಶ. ಜನರ ಅನುಕೂಲಕ್ಕಾಗಿ ಈಗಾಗಲೇ ಪಕ್ಷದ ಹಿರಿಯ ನಾಯಕಿ ಪ್ರಿಯಾಂಕಾ ಗಾಂಧಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದಲ್ಲಿ ಗೃಹಲಕ್ಷ್ಮೀಯರಿಗಾಗಿ ಪ್ರತಿ ತಿಂಗಳು 2 ಸಾವಿರ ರೂ. ಮತ್ತು 200 ಯೂನಿಟ್‌ವರೆಗೆ ಉಚಿತ ವಿದ್ಯುತ್ ಘೋಷಣೆ ಮಾಡಿದ್ದಾರೆ. ಜನಕಲ್ಯಾಣಕ್ಕಾಗಿ ಮತದಾರರು ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಬೇಕೆಂದು ಕೋರಿದರು.
ಶಾಸಕ ಎಚ್.ಪಿ. ಮಂಜುನಾಥ್ ಪ್ರಾಸ್ತಾವಿಕವಾಗಿ ಮಾತನಾಡಿ, ನಿಮ್ಮ ಮಂಜಣ್ಣ ಈ ಮಣ್ಣಿನಲ್ಲೇ ಹುಟ್ಟಿ, ಬೆಳೆದು, ಆಟವಾಡಿ, ಇಲ್ಲೇ ಮಣ್ಣಾಗುವವನು. ಕೊನೆಯುಸಿರು ಇರುವವರೆಗೆ ನಿಮ್ಮ ಸೇವೆಗಾಗಿಯೇ ಜೀವನವನ್ನು ಮುಡಿಪಾಗಿಟ್ಟಿದ್ದೇನೆ. 14 ವರ್ಷಗಳ ನನ್ನ ಕಾಲದ ಅಧಿಕಾರಾವಧಿಯಲ್ಲಿನ ಅಭಿವೃದ್ಧಿ ಕಾರ್ಯಗಳು ನಿಮ್ಮ ಕಣ್ಣ ಮುಂದೆಯೇ ಇವೆ. ಎಲ್ಲವನ್ನೂ ಗಮನಿಸಿ ಉತ್ತಮ ತೀರ್ಮಾನ ತೆಗೆದುಕೊಳ್ಳಿ ಎಂದು ಕೋರಿದರು.
ಮಾಜಿ ಸಚಿವರಾದ ಎಚ್.ಸಿ. ಮಹದೇವಪ್ಪ, ರೇವಣ್ಣ ಮಾತನಾಡಿದರು. ಮಾಜಿ ಸಂಸದ ಆರ್. ಧ್ರುವನಾರಾಯಣ, ಪ್ರಜಾಧ್ವನಿ ಯಾತ್ರೆಯ ಸಂಚಾಲಕ ಬಿ.ಸಿ. ಚಂದ್ರಶೇಖರ್, ಜಿಲ್ಲಾಧ್ಯಕ್ಷ ಡಾ. ವಿಜಯಕುಮಾರ್, ಮುಖಂಡರಾದ ರಾಣಿ ಸತೀಶ್, ಲಕ್ಷ್ಮಣ್, ಸೂರಜ್ ಹೆಗಡೆ, ಜಿ. ಬಾವ, ಧರ್ಮಸೇನ ಸೇರಿದಂತೆ ಕಾಂಗ್ರೆಸ್ ರಾಜ್ಯ ಸಮಿತಿ ಸದಸ್ಯರು ಹಾಗೂ 5000ಕ್ಕೂ ಹೆಚ್ಚು ಪಕ್ಷದ ಅಭಿಮಾನಿಗಳು ಭಾಗವಹಿಸಿದ್ದರು.
ಕಾರ್ಯಕ್ರಮಕ್ಕೂ ಮುನ್ನ ನಗರದ ಅರಸು ಪುತ್ಥಳಿಯಿಂದ ಮೆರವಣಿಗೆ ಮೂಲಕ ಡಿಕೆಶಿ ಮತ್ತವರ ತಂಡವನ್ನು ವೇದಿಕೆಗೆ ಕರೆತರಲಾಯಿತು. ಮಹಿಳೆಯರು ಪೂರ್ಣಕುಂಭ ಸ್ವಾಗತ ಕೋರಿದರು. ಕಿತ್ತಳೆ ಮತ್ತು ಸೇಬಿನ ಹಣ್ಣಿನ ಹಾರ ಹಾಕಿ ಕಾರ್ಯಕರ್ತರು ಸಂಭ್ರಮಿಸಿದರು.