ದಾವಣಗೆರೆ: ನಗರಪಾಲಿಕೆಯಲ್ಲಿ ಆಡಳಿತಾರೂಢ ಬಿಜೆಪಿ ಪಕ್ಷ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ಆರೋಪಿಸಿ ಕಾಂಗ್ರೆಸ್ ಮುಖಂಡರು ವೀರ ಮದಕರಿನಾಯಕ ವೃತ್ತದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು. ಬಿಜೆಪಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಪಾಲಿಕೆ ವಿಪಕ್ಷ ನಾಯಕ ಜಿ.ಎಸ್.ಮಂಜುನಾಥ ಗಡಿಗುಡಾಳ್ ಮಾತನಾಡಿ ಭ್ರಷ್ಟಾಚಾರ ವಿರುದ್ಧ ಮಾತನಾಡಿದರೆ ತುಚ್ಛವಾಗಿ ಟೀಕಿಸುವ ಸಂಸದರ ದಾಟಿ ಸರಿಯಲ್ಲ. ಕೇವಲ ಮೋದಿ ಭಾವಚಿತ್ರ ತೋರಿಸಿ ಗೆದ್ದು ಬಂದಿದ್ದಾರೆಯೆ ಹೊರತು ಅಭಿವೃದ್ಧಿ ಕಾರಣದಿಂದಲ್ಲ. ಬಿಜೆಪಿ ಭ್ರಷ್ಟಾಚಾರದ ವಿರುದ್ಧ ನಗರದ ವಿವಿಧ ವೃತ್ತಗಳಲ್ಲಿ ಸರಣಿ ಪ್ರತಿಭಟನೆ ಮುಂದುವರಿಯಲಿದೆ ಎಂದು ಹೇಳಿದರು.
ದಾವಣಗೆರೆ ಜಿಲ್ಲೆಗೆ ಪ್ರವಾಸಕ್ಕೆ ಬಂದವರಂತೆ ಕಾಣಿಸಿಕೊಳ್ಳುವ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೈರತಿ ನಗರಾಭಿವೃದ್ಧಿ ಸಚಿವರಾಗಿ ಉಳಿದಿಲ್ಲ, ಅವರು ಟೂರಿಸಂ ಮಂತ್ರಿ ಥರ ಕಾಣುತ್ತಿದ್ದಾರೆ. ಜಿಪಂ, ಸ್ಮಾರ್ಟ್‌ಸಿಟಿ ಕಚೇರಿಗಳಲ್ಲಿ ಸಭೆ ಮಾಡುವ ಅವರು ನಗರಪಾಲಿಕೆಯಲ್ಲಿ ಒಂದೇ ಒಂದು ಸಭೆ ಮಾಡಿಲ್ಲ ಎಂದು ದೂರಿದರು.
ಪಾಲಿಕೆ ಸದಸ್ಯ ಕೆ. ಚಮನ್‌ಸಾಬ್ ಮಾತನಾಡಿ ಮುಖ್ಯಮಂತ್ರಿಗಳ 100 ಕೋಟಿ ರೂ. ಅನುದಾನದಡಿ 13 ಟೆಂಡರ್‌ಗಳ ಪ್ರಕ್ರಿಯೆಗೆ ಶೇ.8ರಷ್ಟು ಹಣ ಪಡೆದಿರುವ ಆರೋಪವಿದೆ. ಈ ಹಗರಣದಲ್ಲೂ ಲೋಕಾಯುಕ್ತರು ಸ್ವಯಂಪ್ರೇರಿತ ದೂರು ದಾಖಲಿಸಿ ತನಿಖೆ ನಡೆಸಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಪಾಲಿಕೆ ಸದಸ್ಯರಾದ ವಿನಾಯಕ ಪೈಲ್ವಾನ್, ಬಿ.ಎಚ್.ಉದಯಕುಮಾರ್, ಎ.ನಾಗರಾಜ್‌ಎ.ಬಿ.ರಹೀಂಸಾಬ್, ಸವಿತಾ ಹುಲ್ಮನಿ ಗಣೇಶ, ಸುಧಾ ಇಟ್ಟಿಗುಡಿ ಮಂಜುನಾಥ, ಮೀನಾಕ್ಷಿ ಜಗದೀಶ, ಶಿವಲೀಲಾ ಕೊಟ್ರಯ್ಯ, ಜಿ.ಡಿ.ಪ್ರಕಾಶ್, ಕಬೀರ್ ಅಲಿ, ಸೈಯದ್ ಚಾರ್ಲಿ, ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ ಕೆ.ಶೆಟ್ಟಿ, ಕೆಪಿಸಿಸಿ ವಕ್ತಾರ ಡಿ. ಬಸವರಾಜ, ದೂಡಾ ಮಾಜಿ ಅಧ್ಯಕ್ಷ ಮಾಲತೇಶ ಜಾಧವ್, ಅಯೂಬ್ ಪೈಲ್ವಾನ್ ಇತರರಿದ್ದರು.