ಬಿಜೆಪಿ ನಿರೀಕ್ಷೆಗೆ ಜೆಡಿಎಸ್ ತಣ್ಣಿರು: ದೊಡ್ಡ ಗೌಡರಿಂದ ರಾಮು ಪರ ಬ್ಯಾಟಿಂಗ್ , ಅಡ್ಡಗೋಡೆ ಮೇಲೆ ದೀಪವಿಟ್ಟ ಎಚ್‌ಡಿಕೆ

07 mlr 1
Published on

ಕೋಲಾರ: ವಿಧಾನ ಪರಿಷತ್ ಚುನಾವಣೆಗೆ ಇನ್ನು ಎರಡು ದಿನ ಬಾಕಿ ಇರುವಾಗ ಜೆಡಿಎಸ್ ವರಿಷ್ಟರು ತಮ್ಮ ಅಭ್ಯರ್ಥಿಗಳು ಸ್ಪರ್ಧಿಸದ ಕ್ಷೇತ್ರಗಳಲ್ಲಿ ಯಾರಿಗೆ ಬೆಂಬಲ ನೀಡಬೇಕೆಂಬ ವಿಚಾರಕ್ಕೆ ಸಂಬಂಧಿಸಿದಂತೆ ನೀಡಿರುವ ಸಂದೇಶ ಪಕ್ಷದ ಕಾರ್ಯಕರ್ತರನ್ನು ಧರ್ಮ ಸಂಕಟದಲ್ಲಿ ಸಿಲುಕಿಸಿರುವುದಲ್ಲದೆ, ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳ ಲೆಕ್ಕಾಚಾರವನ್ನು ತಲೆಕೆಳಗಾಗಿಸಿದೆ.

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಕೋಲಾರ ಮತ್ತು ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಸ್ಪರ್ಧಿಸಿರುವ ವಕ್ಕಲೇರಿ ರಾಮಚಂದ್ರ ಅವರನ್ನು ಗೆಲ್ಲಿಸುವಂತೆ ಸಂದೇಶ ನೀಡಿದ್ದರೆ, ಎಚ್.ಡಿ.ಕುಮಾರಸ್ವಾಮಿ ಜೆಡಿಎಸ್ ಅಭ್ಯರ್ಥಿ ಇಲ್ಲದ ಕಡೆ ಪಕ್ಷದ ಸ್ಥಳೀಯ ಮುಖಂಡರು ಕಾಂಗ್ರೆಸ್ ಅಥವಾ ಬಿಜೆಪಿ ಅಭ್ಯರ್ಥಿ ಪರವಾಗಿ ಕೈಗೊಳ್ಳುವ ತೀರ್ಮಾನಕ್ಕೆ ಬದ್ಧ ಎಂದಿರುವುದು ಈಗಾಗಲೇ ಮಾನಸಿಕವಾಗಿ ಸಿದ್ಧರಾಗಿರುವ ಮತದಾರ ಹಾಗೂ ಅಭ್ಯರ್ಥಿ ಪರವಾಗಿ ಕೆಲಸ ಮಾಡುತ್ತಿರುವ ಕಾರ್ಯಕರ್ತರನ್ನು ಅಡ ಕತ್ತರಿಯಲ್ಲಿ ಸಿಲುಕುವಂತೆ ಮಾಡಿದೆ.

ಕಳೆದ ಸಲ ಜೆಡಿಎಸ್ ಅಭ್ಯರ್ಥಿ ಗೆದ್ದಿದ್ದ ಹಿನ್ನೆಲೆಯಲ್ಲಿ ಮತ್ತೆ ಪಕ್ಷಕ್ಕೆ ಜಯ ಸಿಗಬಹುದೆಂಬ ವಿಶ್ವಾಸದಿಂದ ವಕ್ಕಲೇರಿ ರಾಮು ಅವರನ್ನು ಕಣಕ್ಕಿಳಿಸಿರುವ ಎಚ್.ಡಿ.ದೇವೇಗೌಡ, ಎಚ್.ಡಿ.ಕುಮಾರಸ್ವಾಮಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಪ್ರಚಾರ ನಡೆಸಿ ಕಾಂಗ್ರೆಸ್ ಮತ್ತು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಇತ್ತ ಬಿಜೆಪಿಯ ಅಭ್ಯರ್ಥಿ ಡಾ.ಕೆ.ಎನ್.ವೇಣುಗೋಪಾಲ್ ಪ್ರಚಾರದಲ್ಲಿ ಮುಂಚೂಣಿಯಲ್ಲಿದ್ದು 3 ದಿನಗಳ ಹಿಂದೆ ಜೆಡಿಎಸ್‌ನ ಕೆಲವರು ಹೊಂದಾಣಿಕೆ ವಿಚಾರವಾಗಿ ಹಬ್ಬಿದ ವದಂತಿಯಿಂದ ಪೇಚಿಗೆ ಸಿಲುಕಿದ್ದರು. ಮಂಗಳವಾರ ಸಚಿವರಾದ ಡಾ.ಕೆ.ಸುಧಾಕರ್, ಮುನಿರತ್ನ, ಸಂಸದ ಎಸ್.ಮುನಿಸ್ವಾಮಿ, ಮಾಜಿ ಸಚಿವ ವರ್ತೂರು ಪ್ರಕಾಶ್, ಮಾಜಿ ಶಾಸಕ ಕೆ.ಎಸ್.ಮಂಜುನಾಥಗೌಡ, ಕೆ.ಚಂದ್ರಾರೆಡ್ಡಿ ನೀಡಿದ ಧೈರ್ಯ ಹಾಗೂ ಜೆಡಿಎಸ್‌ನವರೇ ನಮಗೆ ಬೆಂಬಲ ನೀಡಲಿ ಎಂಬ ಮಾತಿನಿಂದ ಮತ್ತೆ ಫೀಲ್ಡ್‌ಗೆ ಇಳಿದಿದ್ದಾರೆ. ಆದರೆ ಕುಮಾರಸ್ವಾಮಿನಿರ್ಧಾರದಿಂದ ಜೆಡಿಎಸ್ ಮತ ಕಾಂಗ್ರೆಸ್ ಪಾಲಾಗದಂತೆ ನೋಡಿಕೊಳ್ಳುವುದು ಸವಾಲಾಗಿದೆ.

ಕೈ ಅಭ್ಯರ್ಥಿ ಎಂ.ಎಲ್.ಅನಿಲ್ ಕುಮಾರ್ ಕಳೆದ ಬಾರಿ ಸೋಲಿನ ಕಹಿ ಅನುಭವ ಮರುಕಳಿಸಬಾರದೆಂದು ಎರಡೂ ಜಿಲ್ಲೆಯ ಕಾಂಗ್ರೆಸ್‌ನ ಹಾಲಿ ಮತ್ತು ಮಾಜಿ ಶಾಸಕರ ಪಡೆಯೊಂದಿಗೆ ಪ್ರಚಾರ ನಡೆಸಿದ್ದು, ಜೆಡಿಎಸ್ ಮತ್ತು ಬಿಜೆಪಿಯಲ್ಲಿನ ಅಪ್ತರನ್ನು ಭೇಟಿಯಾಗಿ ಸಹಕಾರ ಕೋರಿದ್ದಾರೆ. ತ್ರಿಕೋನ ಸ್ಪರ್ಧೆಯಿಂದ ತನಗೆ ಲಾಭವಾಗಬಹುದೆಂದು ಮತಗಳ ಕುರಿತು ಲೆಕ್ಕಾಚಾರದಲ್ಲಿ ತೊಡಗಿದ್ದಾರೆ.

ಜಿಲ್ಲೆಯ ರಾಜಕಾರಣ 20 ವರ್ಷಗಳಿಂದ ಮ್ಯಾಚ್ ಫಿಕ್ಸಿಂಗ್ ಅಡಿಯಲ್ಲಿ ಸಾಗಿರುವುದರಿಂದ ಯಾವ ಪಕ್ಷದವರು ಯಾರಿಗೆ ಕೈ ಕೊಡುತ್ತಾರೆ, ಯಾರ ಕೈ ಹಿಡಿಯುತ್ತಾರೆಂದು ಹೇಳಲು ಸಾಧ್ಯವಿಲ್ಲ. 7 ಬಾರಿ ಸಂಸತ್ತಿಗೆ ಆಯ್ಕೆಯಾಗಿ ಸೋಲಿಲ್ಲದ ಸರದಾರ ಎಂದು ಕರೆಸಿಕೊಂಡಿದ್ದ ಕೆ.ಎಚ್.ಮುನಿಯಪ್ಪ ಅವರನ್ನು ಹೇಗೆ ಸೋಲಿಸಲಾಯಿತು ಎಂಬುದು ಗೊತ್ತಿರುವ ವಿಚಾರ, ಈಗಲೂ ಒಳೇಟಿನ ಬಗ್ಗೆ ಚರ್ಚೆ ನಡೆಯುತ್ತಿದ್ದು, ದೇವೇಗೌಡ ಮತ್ತು ಕುಮಾರಸ್ವಾಮಿಯ ನಿರ್ಧಾರ ಯಾರಿಗೆ ಲಾಭ, ಯಾರಿಗೆ ನಷ್ಟವನ್ನು ತರುವುದೋ ಕಾದು ನೋಡಬೇಕಿದೆ.

ತ್ರಿಕೋನ ಸ್ಪರ್ಧೆಯಿಂದ ನನಗೆ ಲಾಭವಾಗಲಿದೆ, ನೇರ ಸ್ಪರ್ಧೆ ಇದ್ದಿದ್ದರೆ ಹೆಚ್ಚು ಶ್ರಮ ಪಡೆಬೇಕಾಗಿತ್ತು. ಕೋಲಾರ ಮತ್ತು ಚಿಕ್ಕಬಳ್ಳಾಪುರದಲ್ಲಿ ಮೊದಲಿನಿಂದಲೂ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಒಳ್ಳೆಯ ಹೊಂದಾಣಿಕೆ ಇದೆ. ಜೆಡಿಎಸ್ ನಾಯಕರ ನಿರ್ಧಾರದಿಂದ ನನಗೆ ಹೆಚ್ಚಿನ ಅನುಕೂಲವಾಗುವ ನಿರೀಕ್ಷೆ ಇದೆ. ಎಂ.ಎಲ್.ಅನಿಲ್ ಕುಮಾರ್, ಕಾಂಗ್ರೆಸ್ ಅಭ್ಯರ್ಥಿ ಜೆಡಿಎಸ್ ಈ ಬಾರಿ ನಮ್ಮ ಅಭ್ಯರ್ಥಿಗೆ ಬೆಂಬಲ ನೀಡಬೇಕಿತ್ತು. ಎರಡೂ ಜಿಲ್ಲೆಯಲ್ಲಿ ನಾವು ಭರ್ಜರಿಯಾಗಿ ಪ್ರಚಾರ ನಡೆಸಿದ್ದೇವೆ. ಗೆಲುವಿನ ಸಂಪೂರ್ಣ ವಿಶ್ವಾಸವಿದೆ, ಜೆಡಿಎಸ್ ನಾಯಕರು ತೆಗೆದುಕೊಂಡಿರುವ ನಿರ್ಧಾರದಿಂದ ನಮಗೆ ಲಾಭವಾಗಲಿದೆ. ಎಸ್.ಬಿ.ಮುನಿವೆಂಕಟಪ್ಪ, ಜಿಲ್ಲಾ ಬಿಜೆಪಿ ಕೋರ್ ಕಮಿಟಿ ಸದಸ್ಯ ಹಾಗೂ ಮಾಧ್ಯಮ ಕ್ತಾರ, ಕೋಲಾರ ಕಾಂಗ್ರೆಸ್ ಮತ್ತು ಬಿಜೆಪಿ ಬಗ್ಗೆ ಮತದಾರರು ಅಸಮಾಧಾನಗೊಂಡಿರುವುದರಿಂದ ನಮ್ಮ ಅಭ್ಯರ್ಥಿ ಗೆಲುವು ಖಚಿತ, ಬಿಜೆಪಿ ಕೇವಲ ಅಬ್ಬರ ತೋರಿಸುತ್ತಿದೆಯೇ ಹೊರತು ಗೆಲ್ಲಲು ಬೇಕಾದ ಸತ್ವ ಇಲ್ಲ. ಕಾಂಗ್ರೆಸ್‌ನಲ್ಲಿರುವ ಒಳ ಜಗಳ ನಮಗೆ ಪ್ಲಸ್ ಪಾಯಿಂಟ್. ಹೊಂದಾಣಿಕೆ ವಿಚಾರ ಈಗ ಅಪ್ರಸ್ತುತ, ಬಿಜೆಪಿಯವರಿಗೆ ನಿಜಕ್ಕೂ ಕಾಂಗ್ರೆಸ್ ಬಗ್ಗೆ ಸಿಟ್ಟಿದ್ದರೆ ಜೆಡಿಎಸ್‌ಗೆ ಬೆಂಬಲ ನೀಡಲಿ. ಕುರ್ಕಿ ರಾಜರಾಜೇಶ್ವರಿ, ಅಧ್ಯಕ್ಷರು, ತಾ. ಘಟಕ, ಕೋಲಾರ ಜೆಡಿಎಸ್ ನಾಯಕರ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯೆ ನೀಡಲಾರೆ. ನನ್ನ ಹೋರಾಟ ಗೆಲುವಿನವರೆಗೆ ಮುಂದುವರಿಯಲಿದೆ. ನಮ್ಮ ಪಕ್ಷದ ನಾಯಕರು, ಕಾರ್ಯಕರ್ತರು ಹಾಗೂ ಮತದಾರರ ಸಂಪೂರ್ಣ ಬೆಂಬಲವಿದೆ, ತ್ರಿಕೋನ ಸ್ಪರ್ಧೆಯಿಂದ ನನಗೆ ಇನ್ನಷ್ಟು ಲಾಭವಾಗಲಿದೆ. ಡಾ.ಕೆ.ಎನ್.ವೇಣುಗೋಪಾಲ್, ಬಿಜೆಪಿ ಅಭ್ಯರ್ಥಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net