

ಬೆಂಗಳೂರು: ಬಿಜೆಪಿ ಅವಧಿಯಲ್ಲಿ ಹೆಚ್ಚು ವಕ್ಫ್ ನೋಟಿಸ್(More Waqf notices during BJP tenure) ನೀಡಲಾಗಿದೆ. ಬಿಜೆಪಿಯವರು 2900 ಎಕರೆಗೆ ನೋಟಿಸ್ ನೀಡಿದ್ದಾರೆ. ಸಿದ್ದರಾಮಯ್ಯನವರ ಕಾಲದಲ್ಲಿ ಕೇವಲ 300 ಎಕರೆಗೆ ನೋಟಿಸ್ ನೀಡಲಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ(G Parameswar) ಹೇಳಿದರು.
ಸದಾಶಿವನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಮುಖಂಡರಿಗೆ ಮುಖಭಂಗ ಮಾಡಲು ಯತ್ನಾಳ್ ಹೋರಾಟ ಮಾಡುತ್ತಿದ್ದಾರೆ. ರೈತರಿಗೆ ವಕ್ಫ್ ನೋಟಿಸ್ ವಿಚಾರದಲ್ಲಿ ನಮ್ಮ ಸರ್ಕಾರದ ಮೇಲೆ ಮಾಡುತ್ತಿದ್ದ ಆಪಾದನೆ ಏನೆಂಬ ಸತ್ಯ ಬಯಲಾಗಿದೆ ತಿಳಿಸಿದರು.
ಬಿ.ಎಸ್.ಯಡಿಯೂರಪ್ಪ ಮತ್ತು ಬಸವರಾಜ್ ಬೊಮ್ಮಾಯಿ ಅವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ರೈತರಿಗೆ ಹೆಚ್ಚು ನೋಟಿಸ್ ನೀಡಲಾಗಿದೆ. ಈಗ ಬಿಜೆಪಿಯವರು ಏನು ಹೇಳುತ್ತಾರೆ ಎಂದು ಪ್ರಶ್ನಿಸಿದರು.
ಮಾಜಿ ಶಾಸಕ ಕುಮಾರ್ ಬಂಗಾರಪ್ಪ ಅವರ ಅಧ್ಯಕ್ಷತೆಯಲ್ಲಿ ಸಮಿತಿ ಮಾಡಿ ನೋಟಿಸ್ ಜಾರಿ ಮಾಡಿದ್ದಾರೆ. ಸುಮಾರು 2900 ಎಕರೆಗೆ ನೋಟಿಸ್ ನೀಡಿದ್ದಾರೆ. ಸಿದ್ದರಾಮಯ್ಯನವರ ಕಾಲದಲ್ಲಿ ಕೇವಲ 300 ಎಕರೆಗೆ ನೋಟಿಸ್ ನೀಡಲಾಗಿದೆ. ವಕ್‌ಫ್ ವಿಚಾರವನ್ನಿಟ್ಟುಕೊಂಡು ರಾಜ್ಯ ಸುತ್ತಲು ಹೊರಟಿರುವ ಬಿಜೆಪಿ ನಾಯಕರು, ಯಾರು ಜಾಸ್ತಿ ನೋಟಿಸ್ ನೀಡಿದ್ದು? ಯಾರ ಮೇಲೆ ಆಪಾದನೆ ಮಾಡಬೇಕು? ಎಂಬುದನ್ನು ಈಗಲಾದರು ಅರ್ಥ ಮಾಡಿಕೊಳ್ಳಬೇಕು ಎಂದರು.
ನಾವು ವಿರೋಧ ಪಕ್ಷದಲ್ಲಿದ್ದಾಗ ರೈತರಿಗೆ ನೋಟಿಸ್ ನೀಡಿರುವ ವಿಚಾರ ನಮ್ಮ ಗಮನಕ್ಕೆ ಬಂದಿಲ್ಲ. ಹಾಗಾಗಿ ನಾವು ಆ ವಿಚಾರವನ್ನು ಕೈಗೆತ್ತಿಕೊಂಡಿಲ್ಲ. ಈಗ ನಮ್ಮ ಗಮನಕ್ಕೆ ಬಂದಿದೆ. ಎಚ್ಚರಿಕೆ ವಹಿಸಿಕೊಂಡು ಕೆಲಸ ಮಾಡುತ್ತೇವೆ ಎಂದು ಹೇಳಿದರು.