ಬಿಜೆಪಿ ಅಧಿಕಾರದಲ್ಲಿದ್ದರೆ ದೇಶ ನಂಬರ್ ಒನ್

16 charan 3
Published on

ಚಾಮರಾಜನಗರ: ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಮುಂಬರುವ 10 ವರ್ಷಗಳ ಕಾಲ ನಿರಂತರವಾಗಿ ಅಧಿಕಾರಕ್ಕೆ ಬಂದಲ್ಲಿ ವಿಶ್ವದಲ್ಲೇ ಭಾರತ ನಂ.1 ರಾಷ್ಟ್ರವಾಗಿ ಹೊರಹೊಮ್ಮತ್ತದೆ ಎಂದು ಕೊಳ್ಳೇಗಾಲ ಶಾಸಕ ಎನ್.ಮಹೇಶ್ ಅಭಿಪ್ರಾಯಪಟ್ಟರು.

ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಬಿಜೆಪಿ ವತಿಯಿಂದ ಮಂಗಳವಾರ ಆಯೋಜಿಸಿದ್ದ ಜಿಲ್ಲಾ ಪ್ರಕೋಷ್ಠಗಳ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. ಬಿಜೆಪಿ ಸಾಕಷ್ಟು ಸಾಧನೆ ಮಾಡುತ್ತಿದೆ. ಆದರೆ ಮಾತನಾಡಲ್ಲ. ಇದು ಬಿಜೆಪಿಯ ಕೊರತೆ. ಬಿಜೆಪಿ ರಾಜಕೀಯ ಸಂಸ್ಕೃತಿ ವಿರೋಧ ಪಕ್ಷಗಳನ್ನು ಬದಲಾವಣೆ ಮಾಡಲು ಸಹಕಾರಿಯಾಗಿದೆ. ಗಾಂಧಿ, ನೆಹರು ಕುಟುಂಬದಿಂದ ಆಚೆಗೆ ಬಾರದ ರಾಜಕೀಯ ವ್ಯವಸ್ಥೆಯನ್ನು ಮೊಬೈಲ್ ರಾಜಕೀಯ ವ್ಯವಸ್ಥೆಯಾಗಿ ಮಾಡಿದ್ದು ಬಿಜೆಪಿ. ಇದರ ಪರಿಣಾಮ ನರೇಂದ್ರ ಮೋದಿ ದೇಶದ ಪ್ರಧಾನಿ ಮಂತ್ರಿಯಾಗಿದ್ದಾರೆ. ದೇಶದ ರಾಜಕೀಯ, ಆರ್ಥಿಕ, ಸಾಂಸ್ಕೃತಿಕ ಬದಲಾವಣೆಗಳನ್ನು ಬಿಜೆಪಿ ಸರ್ಕಾರ ಮಾಡುತ್ತಿದೆ ಎಂದು ಹೇಳಿದರು.
ಬಿಜೆಪಿಯ 24 ಪ್ರಕೋಷ್ಠಗಳು ಸಮಾಜದ ವಿವಿಧ ವಲಯಗಳನ್ನು ಪ್ರತಿನಿಧಿಸುವ ಗುಂಪಾಗಿದೆ. ಬಹುಶಃ ಈ ಆಲೋಚನೆ ಬಿಜೆಪಿಯಲ್ಲಿ ಮಾತ್ರ ಇದೆ. ಬಿಜೆಪಿಯ ಸಂಘಟನಾ ಜಾಲದ ಜತೆಗೆ ಪ್ರಕೋಷ್ಠಗಳು ಕೂಡ ವ್ಯವಸ್ಥಿತವಾಗಿ ಕೆಲಸ ಮಾಡಿದರೆ ಮುಂಬರುವ ಚುನಾವಣೆಯಲ್ಲಿ ಗೆಲವು ನಮ್ಮದಾಗುತ್ತದೆ. ಪಕ್ಷವನ್ನು ಸದೃಢವಾಗಿ ಕಟ್ಟಲು ಪ್ರಕೋಷ್ಠಗಳ ಸಂಕಲ್ಪ ಬಹಳ ಅಗತ್ಯ. ಸ್ವಾತಂತ್ರೃದ ಅಮೃತ ಮಹೋತ್ಸವದಲ್ಲಿ ತ್ರಿವರ್ಣ ಧ್ವಜವನ್ನು ಮನೆ ಮನೆಗಳಲ್ಲಿ ಹಾರಿಸಬೇಕು. ಸ್ವಾತಂತ್ರ್ಯದ ಮಹತ್ವವನ್ನು ಪ್ರತಿಯೊಬ್ಬ ಪ್ರಜೆಗೂ ತಲುಪಿಸಬೇಕು ಎಂಬ ಅಭಿಯಾನವನ್ನು ಮಾಡಿದ್ದು, ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಎಂದರು.

ಪ್ರಕೋಷ್ಠಗಳ ಬಿಜೆಪಿ ರಾಜ್ಯ ಉಪಾಧ್ಯಕ್ಷ ರಾಜೇಂದ್ರ, ರಾಜ್ಯ ಸಂಚಾಲಕ ಪ್ರತಾಪ್ ಸಿಂಹ ನಾಯಕ, ಸಹ ಸಂಚಾಲಕ ಸದಾಶಿವಯ್ಯ, ಬಿಜೆಪಿ ಜಿಲಾಧ್ಯಕ್ಷ ಆರ್.ಸುಂದರ್, ಕಾಡಾ ಅಧ್ಯಕ್ಷ ಜಿ.ನಿಜಗುಣರಾಜು, ರಾಜ್ಯ ಸಮಿತಿ ಸದಸ್ಯೆ ಕಮಲಮ್ಮ, ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಎಂ.ರಾಮಚಂದ್ರ, ಜಿಪಂ ಮಾಜಿ ಸದಸ್ಯ ಸಿ.ಎನ್.ಬಾಲರಾಜು, ಮುಖಂಡರಾದ ಡಾ.ಎ.ಆರ್.ಬಾಬು, ಅಮ್ಮನಪುರ ಮಲ್ಲೇಶ್ ಇತರರು ಇದ್ದರು.

ಸಿದ್ದರಾಮಯ್ಯ ಹಿಂದೆ ಮುಂದೆ ನೋಡುತ್ತಿದ್ದಾರೆ

ಈಗ ಎಲ್ಲರೂ ಭಾರತ್ ಮಾತಾಕಿ ಜೈ ಎನ್ನುವ ಮೂಲಕ ಭಾಷಣ ಪ್ರಾರಂಭಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕೂಡ ಭಾರತ್ ಮಾತಾಕಿ ಜೈ ಎಂದು ಕೂಗಿ ತಮ್ಮ ಮಾತುಗಳನ್ನು ಪ್ರಾರಂಭಿಸುತ್ತಾರೆ. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಭಾರತ್ ಮಾತಾಕಿ ಜೈ ಎಂದು ಹೇಳಲು ಸ್ವಲ್ಪ ಹಿಂದೆ ಮುಂದೆ ನೋಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಅವರು ಕೂಡ ಭಾರತ್ ಮಾತಾಕಿ ಜೈ ಎಂದು ಕೂಗುತ್ತಾರೆ. ಭಾರತ್ ಮಾತಾಕಿ ಜೈ ಎಂದು ಕೂಗಲು ಎಲ್ಲರಿಗೂ ಅವಕಾಶವಿದೆ. ಎಲ್ಲರೂ ಕೂಡ ಅದನ್ನು ಹೇಳಬೇಕು ಎಂದು ಶಾಸಕ ಎನ್.ಮಹೇಶ್ ತಿಳಿಸಿದರು.

ಜಿಲ್ಲೆಯಲ್ಲಿ 24 ಪ್ರಕೋಷ್ಠ, 6 ಸಂಕುಲಗಳಿವೆ. ಆಯಾ ಪ್ರಕೋಷ್ಠದ ಸಂಚಾಲಕರು ಜನರ ಕಷ್ಟಗಳಿಗೆ ಸ್ಪಂದಿಸಿ ಅವರನ್ನು ಮುಖ್ಯ ವಾಹಿನಿಗೆ ತರುವುದು ಪ್ರಕೋಷ್ಠಗಳ ಮುಖ್ಯ ಉದ್ದೇಶವಾಗಿದೆ.ಜಿ.ನಿಜಗುಣರಾಜು, ಕಾಡಾ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net