ಬಿಜೆಪಿ 14 ಜಿಲ್ಲೆಗಳ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಗೆ ಚಾಲನೆ: ವರಿಷ್ಠರ ಸೂಚನೆ | Tussle for post

BJP office security
Published on

ಬೆಂಗಳೂರು: ಬಿಜೆಪಿ ಕೇಂದ್ರ ಸಮಿತಿ ಸೂಚನೆಯಂತೆ ರಾಜ್ಯದ ಸಂಘಟನಾ ಪರ್ವದಡಿ ಉಳಿದ 14 ಜಿಲ್ಲೆಗಳ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಗೆ ಮರು ಚಾಲನೆ ದೊರೆಯಲಿದೆ.

ಮೂರು ಜಿಲ್ಲೆಗಳಿಗೆ ಒಬ್ಬ ವೀಕ್ಷಕ, ಆಯಾ ಜಿಲ್ಲೆಯ ನಿರ್ವಚನಾಧಿಕಾರಿ ಹಾಗೂ ಸಹಾಯಕ ನಿರ್ವಚನಾಧಿಕಾರಿ ಒಳಗೊಂಡ ತಂಡವು ಅಭಿಪ್ರಾಯ ಸಂಗ್ರಹಿಸಲು ಶನಿವಾರ ಹಾಗೂ ಭಾನುವಾರ ಜಿಲ್ಲಾ ಪ್ರವಾಸ ಕೈಗೊಳ್ಳಲಿವೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಮೊದಲ ಹಂತದಲ್ಲಿ 23 ಜಿಲ್ಲೆಗಳಿಗೆ ಅಧ್ಯಕ್ಷ, ತಲಾ ಒಬ್ಬ ಪ್ರತಿನಿಧಿ ಆಯ್ಕೆಯಾಗಿತ್ತು. ಈ ಪೈಕಿ ಪಕ್ಷದ ರಾಜ್ಯ ಉಸ್ತುವಾರಿ ಡಾ.ರಾಧಾ ಮೋಹನ್ ದಾಸ್ ನಿರ್ದೇಶನದಂತೆ ಚಿಕ್ಕಬಳ್ಳಾಪುರ ಜಿಲ್ಲಾ ಘಟಕದ ಅಧ್ಯಕ್ಷರ ಆಯ್ಕೆ ತಡೆಹಿಡಿಯಲಾಗಿದೆ.

ಹಗ್ಗಜಗ್ಗಾಟದಿಂದ ನನೆಗುದಿ

ಎರಡನೇ ಹಂತದಲ್ಲಿ ಮೂರು ಜಿಲ್ಲೆಗಳ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಮುಗಿದಿದೆ. ಹಿರಿಯ ನಾಯಕರ ಮಧ್ಯೆ ಅಭಿಪ್ರಾಯ ಬೇಧ, ಹಗ್ಗಜಗ್ಗಾಟದಿಂದ ಉಳಿದ 14 ಜಿಲ್ಲೆಗಳ ಅಧ್ಯಕ್ಷರ ಆಯ್ಕೆ ನನೆಗುದಿಗೆ ಬಿದ್ದಿದೆ.

ಸಮಸ್ಯೆ ದೆಹಲಿಗೂ ತಲುಪಿದ್ದರಿಂದ ಪ್ರಕ್ರಿಯೆ ನಿಲುಗಡೆಗೆ ವರಿಷ್ಠರು ಸೂಚಿಸಿದ್ದರು. ಮರು ಚಾಲನೆ ಸೂಚನೆ ಸಿಕ್ಕಿದೆ ಎಂದು ಬಿಕ್ಕಟ್ಟು ಬಗೆಹರಿದಿದೆ ಎಂದು ಅರ್ಥೈಸಲಾಗುತ್ತದೆ. ಸಂಪರ್ಕ, ಸಹಮತದ ಸೂತ್ರದಲ್ಲಿ ಬೂತ್, ಮಂಡಲ, ಜಿಲ್ಲಾ ಅಧ್ಯಕ್ಷರ ಆಯ್ಕೆಯಾಗುತ್ತಿದ್ದು, ರಾಜ್ಯಾಧ್ಯಕ್ಷ ಸ್ಥಾನಕ್ಕೂ ಇದೇ ಮಾನದಂಡವಿದೆ.

ಪೂರ್ವಭಾವಿ ಸಭೆ ಇಂದು

ಪರಿಶಿಷ್ಟ ಜಾತಿ, ಪಂಗಡಗಳ ಶಾಸನಬದ್ಧ ಅನುದಾನವನ್ನು ಕಾಂಗ್ರೆಸ್ ಸರ್ಕಾರ ದುರ್ಬಳಕೆ ಮಾಡಿಕೊಂಡಿದೆ ಎಂಬ ಆರೋಪವನ್ನು ಮುಂದೆ ಮಾಡಿ, ಪ್ರತಿಪಕ್ಷ ಬಿಜೆಪಿ ಮತ್ತೆ ಚಳವಳಿಗೆ ಧುಮುಕಲು ಸಿದ್ಧವಾಗುತ್ತಿದೆ.

ಬಜೆಟ್ ಅಧಿವೇಶನದ ಹೊಸ್ತಿಲಲ್ಲಿ ಜನಾಂದೋಲನಕ್ಕೆ ಇಳಿಯಲು ಮುಂದಾಗಿದ್ದು, 2025-26ರ ಬಜೆಟ್‌ನಲ್ಲಿ ಎಸ್‌ಸಿಪಿ, ಟಿಎಸ್‌ಪಿ ಅನುದಾನ ಅನ್ಯ ಉದ್ದೇಶಕ್ಕೆ ಮೀಸಲಿಡದಂತೆ ಒತ್ತಡ ಹೇರುವ ತಂತ್ರಗಾರಿಕೆ ಹೆಣೆದಿದೆ.

ಪಕ್ಷದ ರಾಜ್ಯ ಕಚೇರಿಯಲ್ಲಿ ಗುರುವಾರ ಮಧ್ಯಾಹ್ನ 12.30ಕ್ಕೆ ಜನಾಂದೋಲನದ ಪೂರ್ವಭಾವಿ ಸಭೆ ನಡೆಯಲಿದ್ದು, ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅದಕ್ಕಾಗಿ ಬುಧವಾರ ತಾಲೀಮು ನಡೆಸಿದರು.

ಸಭೆಯಲ್ಲಿ ವಿಧಾನಮಂಡಲದ ಉಭಯ ಸದನಗಳ ಪ್ರತಿಪಕ್ಷ ನಾಯಕರಾದ ಆರ್.ಅಶೋಕ್, ಛಲವಾದಿ ನಾರಾಯಣಸ್ವಾಮಿ, ಮತ್ತಿತರ ಪ್ರಮುಖರು ಭಾಗವಹಿಸಲಿದ್ದಾರೆ.

ಅಧಿವೇಶನಕ್ಕಾಗಿ ಶುಕ್ರವಾರ ಸಭೆ

ಅಧಿವೇಶನದ ಕಾರ್ಯತಂತ್ರ ರೂಪಿಸುವುದಕ್ಕಾಗಿ ೆ.21ರಂದು ಪಕ್ಷದ ರಾಜ್ಯ ಕಚೇರಿಯಲ್ಲಿ ಮತ್ತೊಂದು ಸಭೆ ನಡೆಯಲಿದೆ. ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಈ ಸಭೆ ಗೊತ್ತುಪಡಿಸಲಾಗಿದ್ದು, ಶಾಸಕರು ಹಾಗೂ ಪ್ರಮುಖರಿಗೆ ಆಹ್ವಾನಿಸಲಾಗಿದೆ ಎಂದು ತಿಳಿದಿದೆ.

ಕಚೇರಿಗೆ ಭದ್ರತೆ ಮತ್ತಷ್ಟು ಬಿಗಿ

ಬಿಜೆಪಿ ರಾಜ್ಯ ಕಚೇರಿಗೆ ಭದ್ರತಾ ವ್ಯವಸ್ಥೆಗೆ ಉನ್ನತ ತಂತ್ರಜ್ಞಾವನ್ನು ಅಳವಡಿಸಿಕೊಂಡು ಮತ್ತಷ್ಟು ಬಿಗಿಗೊಳಿಸುವ ಕೆಲಸ ಚುರುಕಿನಿಂದ ಸಾಗಿದೆ. ಕೇಂದ್ರ ಗುಪ್ತಚರ ಇಲಾಖೆ ಹೈಅಲರ್ಟ್ ಸಂದೇಶದ ಪ್ರಕಾರ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿದಿದೆ.

ಕಚೇರಿ ಮುಖ್ಯ ಪ್ರವೇಶದ್ವಾರದ ಒಂದು ಬದಿಯ ಕಾಂಪೌಂಡ್ ಒಡೆದು, ಕಬ್ಬಿಣದ ಚೌಕಟ್ಟಿನ ಪ್ರವೇಶ ದ್ವಾರ ನಿರ್ಮಿಸಲಾಗುತ್ತಿದೆ. ಲೋಹ ಶೋಧಕ, ಸ್ಕಾೃನರ್ ಮತ್ತಿತರ ಅತ್ಯಾಧುನಿಕ ಉಪಕರಣಗಳನ್ನು ಅಳವಡಿಸಲಾಗುತ್ತಿದೆ.

ಕಚೇರಿ ಸಮೀಪವೇ ಬಾಂಬ್ ಸ್ಪೋಟ, ಕಳೆದ ವರ್ಷ ರಾಮೇಶ್ವರಂ ಕೆೆಯಲ್ಲಿ ಸ್ಫೋಟ ಪ್ರಕರಣದ ಬಳಿಕ ಎಚ್ಚೆತ್ತುಕೊಂಡು ಭದ್ರತಾ ವ್ಯವಸ್ಥೆಯನ್ನು ಪರಿಷ್ಕರಿಸಿ, ಭದ್ರತಾ ಏಜೆನ್ಸಿಯನ್ನು ಕೂಡ ಈಚೆಗೆ ಬದಲಾಯಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net