

ಬೆಂಗಳೂರು: ಮಧ್ಯಂತರ ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆಯಾಗಿರುವ ನಟ ದರ್ಶನ್ ಬೆನ್ನು ನೋವಿಗೆ ಚಿಕಿತ್ಸೆ ಪಡೆಯಲು ಕೆಂಗೇರಿ ಬಳಿ ಇರುವ ಬಿಜಿಎಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಶುಕ್ರವಾರ ಮಧ್ಯಾಹ್ನ ಪತ್ನಿ ವಿಜಯಲಕ್ಷ್ಮಿ ಮತ್ತು ನಟ ಧನ್ವೀರ್ ಅವರೊಂದಿಗೆ ಐಷಾರಾಮಿ ಕಾರಿನಲ್ಲಿ ಆಗಮಿಸಿದ ದರ್ಶನ್ ಕುಂಟುತ್ತಲೇ ಆಸ್ಪತ್ರೆಯೊಳಗೆ ಹೋದರು. ಮೊದಲು ಬಿಪಿ, ಶುಗರ್, ಇಸಿಜಿ ಸ್ಕಾೃನಿಂಗ್ ಸೇರಿ ಕೆಲವೊಂದು ವೈದ್ಯಕೀಯ ಪರೀಕ್ಷೆ ನಡೆಸಿದ ವೈದ್ಯರು ನಂತರ ಆಸ್ಪತ್ರೆಗೆ ದಾಖಲು ಮಾಡಿಕೊಂಡಿದ್ದಾರೆ. ಸದ್ಯ ವಿಐಪಿ ವಾರ್ಡ್‌ನಲ್ಲಿ ದರ್ಶನ್‌ಗೆ ಚಿಕಿತ್ಸೆ ನೀಡಲಾಗುತ್ತಿದೆ. ಹಿರಿಯ ವೈದ್ಯ ಡಾ.ನವೀನ್ ಚಿಕಿತ್ಸೆ ನೀಡುತ್ತಿದ್ದಾರೆ. ಮೊದಲು ಬೆನ್ನು ನೋವಿಗೆ ಸಂಬಂಧಿಸಿದಂತೆ ಫಿಸಿಯೋಥೆರಪಿಯನ್ನು ಮಾಡಲಾಗುತ್ತದೆ. ಆ ನಂತರ ಶಸ ಚಿಕಿತ್ಸೆ ಮಾಡಬೇಕಾ ಎಂಬುದರ ಬಗ್ಗೆ ವೈದ್ಯರು ನಿರ್ಧಾರ ಮಾಡಲಿದ್ದಾರೆ.
ಈಗಾಗಲೇ ದರ್ಶನ್ ಕುಟುಂಬದವರು ಬೆನ್ನುನೋವಿನ ಬಗ್ಗೆ ವೈದ್ಯರಿಗೆ ಮಾಹಿತಿ ನೀಡಿದ್ದಾರೆ. ಮೊದಲಿಗೆ ಫಿಸಿಯೋ ಥೆರಪಿ ಹಾಗೂ ಔಷಧಿಯಿಂದ ಗುಣಪಡಿಸಲು ಮನವಿ ಮಾಡಿದ್ದಾರೆ. ಶಸ್ತ್ರಚಿಕಿತ್ಸೆಯನ್ನು ಕೊನೆಯ ಆಯ್ಕೆಯಾಗಿ ಪರಿಗಣಿಸುವಂತೆ ಕುಟುಂಬ ಮನವಿ ಮಾಡಿಕೊಂಡಿದೆ ಎಂದು ತಿಳಿದುಬಂದಿದೆ.
ಅಭಿಮಾನಿಗಳ ಜೈಕಾರ:
ದರ್ಶನ್ ಆಸ್ಪತ್ರೆಗೆ ಆಗಮಿಸುತ್ತಿದಂತೆ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿ ಜೈ ಡಿ ಬಾಸ್ ಎಂದು ಜೈಕಾರ ಹಾಕಿದರು. ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು.ದರ್ಶನ್ ಚಿಕಿತ್ಸೆಗೆ ದಾಖಲಾದ ಹಿನ್ನೆಲೆ ಆಸ್ಪತ್ರೆ ಸುತ್ತಲೂ ಪೊಲೀಸರ ಬಿಗಿ ಬಂದೋ ಬಸ್ತ್ ನಿಯೋಜಿಸಲಾಗಿದೆ. ಆಸ್ಪತ್ರೆ ಮುಂಭಾಗ ಬ್ಯಾರಿಕೇಡ್ ಅಳವಡಿಸಿದ್ದು, ಕೆಎಸ್‌ಆರ್‌ಪಿ ತುಕಡಿಗಳನ್ನು ನಿಯೋಜಿಸಲಾಗಿದೆ. ಚಿತ್ರದುರ್ಗ ಮೂಲದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನಲ್ಲಿದ್ದ ದರ್ಶನ್‌ಗೆ ಹೈಕೋರ್ಟ್ ೬ ವಾರಗಳ ಕಾಲ ಮಧ್ಯಂತರ ಜಾಮೀನು ಮಂಜೂರು ಮಾಡಿತ್ತು. ಬುಧವಾರ ಬಿಡುಗಡೆಯಾಗಿದ್ದ ದರ್ಶನ್ ಬೆಂಗಳೂರಿನ ಹೊಸಕೆರೆಹಳ್ಳಿಯ ಅಪಾರ್ಟ್‌ಮೆಂಟ್‌ನಲ್ಲಿ ದೀಪಾವಳಿ ಹಬ್ಬ ಆಚರಿಸಿದ ಬಳಿಕ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಕುದುರೆ ಮೇಲಿನಿಂದ ಬಿದ್ದಿದ್ದ ದರ್ಶನ್:
ದರ್ಶನ್ ಈ ಹಿಂದೆ ಬೃಂದಾವನ ಚಿತ್ರದ ಚಿತ್ರೀಕರಣ ಮಾಡುವ ಸಂದರ್ಭದಲ್ಲಿ ಕುದುರೆ ಮೇಲಿನಿಂದ ಬಿದ್ದಾಗ ಬೆನ್ನಿಗೆ ಪೆಟ್ಟಾಗಿತ್ತು. ಜತೆಗೆ ೨೦೧೮ ರಲ್ಲಿ ನಡೆದ ಕಾರು ಅಪಘಾತದಲ್ಲಿ ಬಲಗೈಗೆ ಗಾಯವಾಗಿತ್ತು. ಅಲ್ಲದೇ ಕಾಟೇರ ಸಿನಿಮಾದ ಶೂಟಿಂಗ್ ವೇಳೆಯಲ್ಲಿಯೂ ದರ್ಶನ್ ಅವರ ಕೈಗೆ ಪೆಟ್ಟಾಗಿತ್ತು.