

ಹಾನಗಲ್: ಹಾನಗಲ್ ಉಪಚುನಾವಣಾ ಅಖಾಡಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಜತೆಯಾಗಿ ಶುಕ್ರವಾರ ಇಳಿದಿದ್ದು, ಕ್ಷೇತ್ರದಾದ್ಯಂತ ಮಿಂಚಿನ ಸಂಚಾರ ಮಾಡಿ ಅಬ್ಬರದ ಪ್ರಚಾರ ನಡೆಸಿದರು. ಇಬ್ಬರೂ ನಾಯಕರ ಆಗಮನದಿಂದ ಕಾರ್ಯಕರ್ತರಲ್ಲಿ ಉತ್ಸಾಹ ಇಮ್ಮಡಿಗೊಂಡಿತ್ತು.
ತಾಲೂಕಿನ ಬಮ್ಮನಹಳ್ಳಿ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಶಿವರಾಜ ಸಜ್ಜನರ ಪರ ಪ್ರಚಾರ ಸಭೆಯಲ್ಲಿ ಯಡಿಯೂರಪ್ಪ ಮಾತನಾಡಿ, ಪ್ರಧಾನಿ ಮೋದಿ ಅವರ ಆಡಳಿತವನ್ನು ಪ್ರಪಂಚವೇ ಮೆಚ್ಚಿದೆ. ಕಾಂಗ್ರೆಸ್ನವರು ಮಾತ್ರ ಹಗುರವಾಗಿ ಟೀಕೆ ಮಾಡುತ್ತಿದ್ದು, ಮುಂದಿನ 50 ವರ್ಷ ನಿಮಗೆ ಅಡ್ರೆಸ್ ಇರದಂತಹ ಸ್ಥಿತಿ ಬರುತ್ತೆ. ನಿಮ್ಮ ಮಕ್ಕಳು, ಮೊಮ್ಮಕ್ಕಳಿಗೆಲ್ಲ ಬಿಜೆಪಿ ಸೇರುವಂತೆ ಹೇಳಿ. ಏಕೆಂದರೆ ನೀವೆಲ್ಲ ಕಾಂಗ್ರೆಸ್ ಹಡಗಿನಲ್ಲಿ ಮುಳುಗಿ ಹೋಗಲಿದ್ದೀರಿ ಎಂದು ವ್ಯಂಗ್ಯವಾಡಿದರು.
ಟೀಕೆ ಮಾಡುವ ಮುನ್ನ ವಾಸ್ತವಿಕ ಸತ್ಯವನ್ನು ಹೇಳಿ. ಗೋಣಿಚೀಲದಲ್ಲಿ ದುಡ್ಡು ತುಂಬಿಕೊಂಡು ಹೋಗಿದ್ದಾರೆ ಎನ್ನುತ್ತೀರಿ. ನಾಚಿಕೆಯಾಗಬೇಕು ನಿಮಗೆ ಈ ರೀತಿ ಮಾತನಾಡಲು. ಮತದಾರರಿಗೆ ಅಪಮಾನ ಮಾಡುವ ಕೆಲಸ ಮಾಡಬೇಡಿ, ಅಭಿವೃದ್ಧಿ ಕೆಲಸ ಮಾಡಿ ಮತ ಕೇಳಿ ಎಂದರು.
ಬೊಮ್ಮಾಯಿ ಗೌರವದ ಪ್ರಶ್ನೆ: ಇದು ಬೊಮ್ಮಾಯಿ ಅವರ ಸ್ವಂತ ಜಿಲ್ಲೆ. ಉಪಚುನಾವಣೆ ಅವರ ಗೌರವದ ಪ್ರಶ್ನೆಯಾಗಿದೆ. ಶಿವರಾಜ ಸಜ್ಜನರ ಅವರನ್ನು ಗೆಲ್ಲಿಸಿ ಎಂದು ಯಡಿಯೂರಪ್ಪ ಮನವಿ ಮಾಡಿದರು.
ವಿಜಯಪುರ: ಸಿಂದಗಿ ಕ್ಷೇತ್ರದ ಉಪಚುನಾವಣೆ ಪ್ರಚಾರ ಭರಾಟೆ ಜೋರಾಗಿದ್ದು, ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ನಾಯಕರು ಕ್ಷೇತ್ರದಲ್ಲಿ ಸಂಚರಿಸಿ ಮತಯಾಚಿಸಿದರು. ಸಿಂದಗಿ ಉಪಚುನಾವಣೆ ಹಿನ್ನೆಲೆ ಶುಕ್ರವಾರ ಪಟ್ಟಣದಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ಪರ ರೋಡ್ ಶೋ ಮೂಲಕ ಮತಯಾಚಿಸಿದ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ, ಕೋವಿಡ್ನಿಂದ ಸಂಕಷ್ಟದಲ್ಲಿರುವ ಜನರಿಗೆ 1480 ಕೋಟಿ ರೂ. ಸಹಾಯಧನ ನೀಡಿದ ದೇಶದಲ್ಲೇ ಮೊದಲ ಮುಖ್ಯಮಂತ್ರಿ ಯಡಿಯೂರಪ್ಪ ಆವರಾಗಿದ್ದಾರೆ. ಅವರ ಯೋಜನೆಗಳನ್ನು ಮುಂದುವರಿಸಿಕೊಂಡು ಉತ್ತಮ ಆಡಳಿತ ನೀಡುತ್ತಿರುವ ಬಸವರಾಜ ಬೊಮ್ಮಾಯಿ ಸರ್ಕಾರಕ್ಕೆ ಸಿಂದಗಿ ಕ್ಷೇತ್ರದ ಜನ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವ ಮೂಲಕ ಬಲ ತುಂಬಬೇಕೆಂದು ಮನವಿ ಮಾಡಿದರು.
ಜೆಡಿಎಸ್ ಋಣ ತೀರಿಸಲಿ: ಸಿಂದಗಿ ಮತಕ್ಷೇತ್ರದ ಅಂದಾಜು 20 ಸಾವಿರ ರೈತರ ಸಾಲಮನ್ನಾ ಮಾಡಿದ್ದು ಜೆಡಿಎಸ್. ಜಿಲ್ಲೆಯನ್ನು ನೀರಾವರಿಗೊಳಪಡಿಸಿದ್ದು ಜೆಡಿಎಸ್. ಈ ಕ್ಷೇತ್ರದ ಜನರು ಪಕ್ಷದ ಋಣ ತೀರಿಸುವ ಅವಕಾಶ ಬಂದಿದೆ. ಮತದಾರರು ಜೆಡಿಎಸ್ ಬೆಂಬಲಿಸಬೇಕೆಂದು ಮಾಜಿ ಸಚಿವ ಎಚ್.ಡಿ. ರೇವಣ್ಣ ಹೇಳಿದರು.
ಅಕ್ಕಿಆಲೂರ: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಹಾನಗಲ್ ವಿಧಾನಸಭೆ ಕ್ಷೇತ್ರದ ಬಡವರಿಗೆ ಒಂದೇ ಒಂದು ಆಶ್ರಯ ಮನೆ ನಿರ್ವಿುಸಿ ಕೊಟ್ಟಿದ್ದನ್ನು ಸಿಎಂ ಬಸವರಾಜ ಬೊಮ್ಮಾಯಿ ದಾಖಲೆ ಸಮೇತ ತೋರಿಸಿದರೆ ಅದೇ ದಿನ ರಾಜಕೀಯ ನಿವೃತ್ತಿ ಹೊಂದುತ್ತೇನೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸವಾಲು ಹಾಕಿದರು. ನರೇಗಲ್ಲ ಸೇರಿ ವಿವಿಧೆಡೆ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ ಪರ ಶುಕ್ರವಾರ ಮತಯಾಚನೆ ಮಾಡಿ ಮಾತನಾಡಿದರು. ‘ಬೊಮ್ಮಾಯಿಗೆ ಧಮ್ ಇದ್ದರೆ ಅಭಿವೃದ್ಧಿ ಕಾರ್ಯಗಳ ಬಗ್ಗೆ ನನ್ನೊಂದಿಗೆ ವೇದಿಕೆ ಮೇಲೆ ಚರ್ಚೆಗೆ ಬರಲಿ. ಆಶ್ರಯ ನೀಡಿರುವ ಕುರಿತು ದಾಖಲೆ ಸಮೇತ ಸಾರ್ವಜನಿಕರ ಎದುರು ಮಾಹಿತಿ ನೀಡಲಿ ಎಂದರು.
ಸಿದ್ದರಾಮಯ್ಯ ಕಾಗದದಲ್ಲಿ ಮನೆ ಮಂಜೂರು ಮಾಡಿದ್ದರು. ಅದರಿಂದ ಬಡವರಿಗೆ ಸೂರು ಸಿಗುತ್ತದೆಯೇ? ನಿಮಗೆ ಕ್ಷೇತ್ರದ ಸಮಸ್ಯೆಗಳೇ ಗೊತ್ತಿಲ್ಲ. ಬಹಿರಂಗ ಚರ್ಚೆಗೆ ಬಂದು ಏನು ಉತ್ತರ ಕೊಡ್ತೀರಾ? ಬಾಳಂಬೀಡ ಏತ ನೀರಾವರಿ ಯೋಜನೆ ಸಾಕಾರಗೊಂಡಿದೆ. ನೀವು ಬಂದರೆ ಡಿಸೆಂಬರ್ನಲ್ಲಿ ನಿಮ್ಮಿಂದಲೇ ಬೇಕಾದರೆ ಉದ್ಘಾಟಿಸುತ್ತೇವೆ. ಹೀಗೆಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಹೇಳಿಕೆಗೆ ತಿರುಗೇಟು ನೀಡಿದರು. ಹಾನಗಲ್ ತಾಲೂಕು ಬೆಳಗಾಲಪೇಟ, ಬಮ್ಮನಹಳ್ಳಿ ಗ್ರಾಮದಲ್ಲಿ ಪ್ರಚಾರ ಸಭೆಯಲ್ಲಿ ಮಾತನಾಡಿ, ಹಾನಗಲ್ಗೆ ನೀರಾವರಿ ಯೋಜನೆಯನ್ನು ಮಂಜೂರು ಮಾಡಿದ್ದು ಯಡಿಯೂರಪ್ಪ ಅವರು. ಸಿದ್ದರಾಮಯ್ಯ ಜನರನ್ನು ತಪ್ಪು ದಾರಿಗೆ ಎಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಪದೇಪದೆ ರಾಜಕೀಯ ನಿವೃತ್ತಿ ಬಗ್ಗೆ ಹೇಳುತ್ತಿದ್ದಾರೆ. ಅವರ ಮನಸ್ಸಿನಲ್ಲಿ ಏನಿದೆಯೋ ಗೊತ್ತಿಲ್ಲ ಎಂದರು.
ಬೆಂಗಳೂರು: ಉಪ ಚುನಾವಣೆಯಲ್ಲಿ ಜೆಡಿಎಸ್ತನ್ನೆಲ್ಲ ಶಕ್ತಿಯನ್ನು ಸಿಂದಗಿ ಕ್ಷೇತ್ರಕ್ಕೆ ಮೀಸಲಿರಿಸಿದೆ. ಹಾನಗಲ್ಗಿಂತ ಸಿಂದಗಿಯಲ್ಲಿ ಜೆಡಿಎಸ್ ನೆಲೆ ಭದ್ರವಾಗಿದ್ದು, ಗೆಲುವಿನ ರೇಖೆ ದಾಟಬಹುದು ಎನ್ನುವುದು ದಳಪತಿಗಳ ಲೆಕ್ಕಾಚಾರವಾಗಿದ್ದು, ಈ ನಿಟ್ಟಿನಲ್ಲಿಯೇ ಪ್ರಯತ್ನ ತೀವ್ರಗೊಳಿಸಲು ನಿರ್ಧರಿಸಲಾಗಿದೆ. ಮನಗೂಳಿ ಅವರನ್ನು ಸಚಿವರನ್ನಾಗಿ ಮಾಡುವ ಮೂಲಕ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿಯೂ ಜೆಡಿಎಸ್ ಯಾವ ಪ್ರಮಾಣದಲ್ಲಿ ಈ ಕ್ಷೇತ್ರಕ್ಕೆ ಆದ್ಯತೆ ನೀಡಿತ್ತು ಎನ್ನುವುದನ್ನು ಪ್ರಚಾರ ಸಭೆಗಳಲ್ಲಿ ನೆನಪು ಮಾಡುವ ಪ್ರಯತ್ನವನ್ನು ಮಾಡುತ್ತಿರುವ ಜೆಡಿಎಸ್, ಕೊನೆ ಕ್ಷಣದಲ್ಲಿ ಪಕ್ಷಾಂತರ ಮಾಡಿದ ಅಭ್ಯರ್ಥಿಗೂ ಪಾಠ ಕಲಿಸಬೇಕು ಎನ್ನುವ ಉದ್ದೇಶವನ್ನು ಹೊಂದಿದೆ. ತನ್ನ ಅಭ್ಯರ್ಥಿಯನ್ನು ಹೈಜಾಕ್ ಮಾಡಿಕೊಂಡಿರುವ ಕಾಂಗ್ರೆಸ್ ಮತ್ತು ಸಿದ್ದರಾಮಯ್ಯ ಅವರಿಗೂ ತಿರುಗೇಟು ನೀಡಬೇಕು ಎನ್ನುವುದು ಜೆಡಿಎಸ್ನ ಮತ್ತೊಂದು ಉದ್ದೇಶವಾಗಿದೆ.
ಬೆಂಗಳೂರು: ಹಾನಗಲ್, ಸಿಂದಗಿ ಕ್ಷೇತ್ರಗಳ ಉಪ ಚುನಾವಣೆಯನ್ನು ಬಿಜೆಪಿ ಸವಾಲಾಗಿ ಸ್ವೀಕರಿಸಿ ಸಚಿವ ಸಂಪುಟದ ಸದಸ್ಯರನ್ನು ಪ್ರತಿಯೊಂದು ಜಿಲ್ಲಾ ಪಂಚಾಯಿತಿಗೆ ನಿಯೋಜಿಸಿದ್ದು, ಪ್ರಚಾರದ ಜವಾಬ್ದಾರಿ ಹಂಚಿಕೆ ಮಾಡಿದೆ. ಜತೆಗೆ ಸಿಎಂ ಬಸವರಾಜ ಬೊಮ್ಮಾಯಿ, ಪ್ರತಿಯೊಬ್ಬ ಸಚಿವರು ಮತ್ತು ಶಾಸಕರಿಗೆ ಅಗತ್ಯ ಸಲಹೆ-ಸೂಚನೆ ನೀಡಿ, ರಣತಂತ್ರದ ಅನುಷ್ಠಾನದ ಹೊಣೆ ಒಪ್ಪಿಸಿದ್ದಾರೆ.
ಬೊಮ್ಮಾಯಿ, ಬಿ.ಎಸ್.ಯಡಿಯೂರಪ್ಪ, ಬಿ.ವೈ.ವಿಜಯೇಂದ್ರ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಉಭಯ ಕ್ಷೇತ್ರಗಳಲ್ಲಿ ಸುತ್ತಿ, ಬಿರುಸಿನ ಪ್ರಚಾರದಲ್ಲಿ ಭಾಗಿಯಾಗಿದ್ದಾರೆ. ಜಾತಿ-ಮತದ ಲೆಕ್ಕಾಚಾರ, ಆಯಾ ಸಮುದಾಯಗಳ ಓಲೈಕೆ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೀಡಿದ ನೆರವು ಮನವರಿಕೆ ಮಾಡಿಕೊಡುವ ಕಾರ್ಯಯೋಜನೆ ಪಕ್ಷ ರೂಪಿಸಿದೆ. ವಲಸಿಗ ಸಚಿವರಿಗೆ ಹೋಲಿಸಿದರೆ ಮೂಲ ಬಿಜೆಪಿ ಸಚಿವರು ಪೇಲವವೆನಿಸಿದ್ದಾರೆ. ಮನಸ್ಸಿಟ್ಟು ಕೆಲಸ ಮಾಡುತ್ತಿರುವುದು ವಿರಳವೆಂಬ ಮಾಹಿತಿ ವರಿಷ್ಠರಿಗೆ ರವಾನೆಯಾಗಿದೆ. ಹೊಸ ಯೋಜನೆಗಳು, ಅಭಿವೃದ್ಧಿ ಕೆಲಸಗಳ ಅನುಷ್ಠಾನದ ಜತೆಯಲ್ಲಿ ಪಕ್ಷದ ಸಂಘಟನೆ ಬಲ ತುಂಬುವ, ವರ್ಚಸ್ಸು ಹೆಚ್ಚಿಸುವ ಕಾರ್ಯಕ್ರಮಗಳಲ್ಲಿ ಸಕ್ರಿಯ ಪಾಲ್ಗೊಳ್ಳುವಿಕೆಯಲ್ಲಿ ವಲಸಿಗರ ಸಚಿವರು ಅಗ್ರ ಪಂಕ್ತಿ ಕಾಯ್ದುಕೊಂಡಿದ್ದಾರೆ.
ಉಪ ಚುನಾವಣೆಗೆ ಪಕ್ಷ ಹೆಣೆದಿರುವ ಕಾರ್ಯತಂತ್ರ ಜಾರಿ ವಿಷಯದಲ್ಲೂ ಅದೇ ನಿಲುವು ಹಾಗೂ ಉತ್ಸಾಹ ತೋರಿಸಿದ್ದು, ವರಿಷ್ಠರಿಗೆ ರವಾನೆಯಾದ ಆಂತರಿಕ ವರದಿಯಲ್ಲಿ ಈ ಅಂಶ ಪ್ರಧಾನವಾಗಿ ಪ್ರಸ್ತಾಪವಾಗಿದೆ ಎಂದು ಮೂಲಗಳು ತಿಳಿಸಿವೆ. ವಲಸಿಗ ಸಚಿವರಾದ ಬಿ.ಸಿ.ಪಾಟೀಲ್, ಬೈರತಿ ಬಸವರಾಜ, ಶಿವರಾಮ್ ಹೆಬ್ಬಾರ್, ಮುನಿರತ್ನ ಡಾ.ಕೆ.ಸುಧಾಕರ್, ಎಸ್.ಟಿ. ಸೋಮಶೇಖರ್, ಕೆ.ಗೋಪಾಲಯ್ಯ ಭಾಗವಹಿಸುವಿಕೆ ಹೆಚ್ಚಿದೆ. ಕೆ.ಸಿ.ನಾರಾಯಣಗೌಡ ಇದೀಗ ಪ್ರಚಾರ ಕಣಕ್ಕೆ ಧುಮುಕಿದ್ದಾರೆ. ಸಚಿವ ಸ್ಥಾನ ವಂಚಿತ ಅನೇಕ ಶಾಸಕರು ಅಭ್ಯರ್ಥಿಗಳ ಗೆಲುವಿಗೆ ಟೊಂಕ ಕಟ್ಟಿ ದುಡಿಯುತ್ತಿದ್ದಾರೆ.
ಉಪ ಚುನಾವಣೆ ಘೋಷಣೆ, ಉಸ್ತುವಾರಿ ತಂಡದಲ್ಲಿ ಹೆಸರು ಸೇರಿಸಿದ ಪಟ್ಟಿ ಪ್ರಕಟವಾದ ಬೆನ್ನಲ್ಲೇ ಸಚಿವರಾದ ಗೋವಿಂದ ಕಾರಜೋಳ, ವಿ.ಸೋಮಣ್ಣ, ಸಿ.ಸಿ.ಪಾಟೀಲ್ ಕ್ರಿಯಾಶೀಲರಾಗಿ ಹೊಣೆ ನಿಭಾಯಿಸುತ್ತಿದ್ದಾರೆ. ಈ ತಂಡದಲ್ಲಿದ್ದ ಸಚಿವ ಮುರಗೇಶ್ ನಿರಾಣಿ ಬಹಿರಂಗ ಪ್ರಚಾರಕ್ಕೆ ಇನ್ನೂ ಒಂದು ವಾರ ಬಾಕಿ ಉಳಿದಿರುವಾಗ ಈ ಕ್ಷೇತ್ರಗಳತ್ತ ಚಿತ್ತ ನೆಟ್ಟಿದ್ದಾರೆ. ಮೂಲ ಬಿಜೆಪಿ ಸಚಿವರ ಪೈಕಿ ಕೆ.ಎಸ್.ಈಶ್ವರಪ್ಪ, ಜೆ.ಸಿ.ಮಾಧುಸ್ವಾಮಿ, ಶ್ರೀರಾಮುಲು, ಕೋಟ ಶ್ರೀನಿವಾಸ ಪೂಜಾರಿ, ವಿ.ಸುನೀಲ್ ಕುಮಾರ್, ಶಂಕರ ಪಾಟೀಲ್ ಮುನೇನಕೊಪ್ಪ ‘ಫ್ಲೈಯಿಂಗ್ ವಿಸಿಟರ್ಸ್’ ರೀತಿ ಹೋಗಿ ಬಂದಿದ್ದಾರೆ. ಆರ್.ಅಶೋಕ್, ಡಾ.ಸಿ.ಎನ್.ಅಶ್ವತ್ಥ ನಾರಾಯಣ, ಎಸ್.ಅಂಗಾರ ಒಳಗೊಂಡು ಹಲವರ ನಿರಾಸಕ್ತಿ ಕಾರ್ಯಕರ್ತರಲ್ಲಿ ಬೇಸರ ಹುಟ್ಟಿಸಿದೆ ಎನ್ನಲಾಗಿದೆ.