ಬಿಇಒ ಕಚೇರಿ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಿ

16. Pyp.01
ಪಿರಿಯಾಪಟ್ಟಣ ತಾಲೂಕಿನಲ್ಲಿ ಶಿಕ್ಷಕರ ವೇತನ ತಾರತಮ್ಯವನ್ನು ಸರಿಪಡಿಸಲು ನಿರಾಕರಿಸುತ್ತಿರುವ ಬಿಇಒ ಕಚೇರಿ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ 60ಕ್ಕೂ ಹೆಚ್ಚು ಶಿಕ್ಷಕರು ಬಿಇಒ ಬಸವರಾಜು ಅವರಿಗೆ ಮನವಿ ಸಲ್ಲಿಸಿದರು. ರಾಮಚಂದ್ರ, ಎಂ.ಶ್ರೀನಿವಾಸ್, ಪ್ರಸಾದ್, ಚಂದ್ರು, ರಿಯಾಜ್ ಪಾಷ ಮತ್ತಿತರರು ಇದ್ದರು.
Published on

ಪಿರಿಯಾಪಟ್ಟಣ: ತಾಲೂಕಿನ ಕೆಲ ಶಿಕ್ಷಕರ ವೇತನ ತಾರತಮ್ಯವನ್ನು ಸರಿಪಡಿಸಲು ನಿರಾಕರಿಸುತ್ತಿರುವ ಬಿಇಒ ಕಚೇರಿ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ 60ಕ್ಕೂ ಹೆಚ್ಚು ಶಿಕ್ಷಕರು ಗುರುವಾರ ಬಿಇಒ ಬಸವರಾಜು ಅವರಿಗೆ ಮನವಿ ಸಲ್ಲಿಸಿದರು.


ವೇತನ ತಾರತಮ್ಯಕ್ಕೊಳಗಾಗಿರುವ ಶಿಕ್ಷಕರ ಪರವಾಗಿ ಮಾತನಾಡಿದ ಜೆ.ಯು.ದೇವರಾಜು, 2005, 2007, 2008ರಲ್ಲಿ ನೇಮಕವಾಗಿರುವ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ವೇತನ ತಾರತಮ್ಯವಾಗಿದ್ದು, ಈ ಹಿಂದೆ ಡಿಡಿಪಿಐ ಆಗಿದ್ದ ಪಾಂಡುರಂಗ ಅವರು 2021ರಲ್ಲಿ ವೇತನ ತಾರತಮ್ಯ ಸರಿಪಡಿಸುವಂತೆ ಆದೇಶಿಸಿದ್ದಾರೆ. ಆ ಸಮಯದಲ್ಲಿ ಬಿಇಒ ಕಚೇರಿಯಲ್ಲಿ ನೌಕರ ಪದ್ಮನಾಭ ಸ್ಪಷ್ಟನೆ ಕೋರಿ ಬಿಇಒ ಅವರಿಂದ ಪತ್ರ ಬರೆಸಿದ್ದರು ಎಂದು ತಿಳಿಸಿದರು. ಆದರೆ ಮತ್ತೆ ಮತ್ತೆ ಸ್ಪಷ್ಟನೆ ಕೋರಿ ಪತ್ರ ಬರೆಯುವ ಅವಶ್ಯಕತೆ ಇಲ್ಲ. ವೇತನ ತಾರತಮ್ಯ ಸರಿಪಡಿಸಿ ಎಂದು ಡಿಡಿಪಿಐ ಆದೇಶಿಸಿದ್ದರೂ ಇಲ್ಲಿನ ಸಿಬ್ಬಂದಿ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.


ಪದ್ಮನಾಭ ಅವರ ಹಠಮಾರಿತನದಿಂದ ಬಿಇಒಗಳನ್ನು ದಾರಿ ತಪ್ಪಿಸಿ ವೇತನ ತಾರತಮ್ಯ ಸರಿಪಡಿಸದಂತೆ ಮಾಡಿದ್ದಾರೆ ಎಂದು ಆರೋಪಿಸಿದರು.


ಈಗ ಬಿಇಒ ಆದೇಶಿಸಿದ್ದರೂ ಕಚೇರಿಯ ಕೆಲ ಸಿಬ್ಬಂದಿ 50 ಶಿಕ್ಷಕರ ವೇತನ ತಾರತಮ್ಯ ಮಾತ್ರ ಸರಿಪಡಿಸಿದ್ದು ಉಳಿದ ಶಿಕ್ಷಕರ ವೇತನ ತಾರತಮ್ಯ ಸರಿಪಡಿಸಲು ನಿರಾಕರಿಸುವ ಮೂಲಕ ಶಿಕ್ಷಕರಿಗೆ ಅನ್ಯಾಯವೆಸಗುತ್ತಿದ್ದಾರೆ ಎಂದು ಆರೋಪಿಸಿದರು. ಕಚೇರಿ ಸಿಬ್ಬಂದಿ ರವೀಂದ್ರ, ಪ್ರಸನ್ನ, ಫೈರೋಜ್, ಯಮುನಾ ಅವರು ಡಿಡಿಪಿಐ ಮತ್ತು ಬಿಇಒ ಅವರ ಆದೇಶಕ್ಕೂ ಬೆಲೆ ನೀಡುತ್ತಿಲ್ಲ. ಆದ್ದರಿಂದ ಕೂಡಲೇ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ರವೀಂದ್ರ ಅವರನ್ನು ಅಮಾನತು ಪಡಿಸಬೇಕು ಎಂದು ಒತ್ತಾಯಿಸಿದರು.


ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ರಾಮಚಂದ್ರ, ಶಿಕ್ಷಕರಾದ ಎಂ.ಶ್ರೀನಿವಾಸ್, ಪ್ರಸಾದ್, ಚಂದ್ರು, ರಿಯಾಜ್ ಪಾಷ, ಮಹೇಶ್, ಎ.ಎಂ.ನಿರಂಜನ, ಸಂತೋಷ್, ಲೋಕೇಶ್, ಸುರೇಂದ್ರಶೆಟ್ಟಿ, ವಸಂತ, ರಘು, ಶಿವಕುಮಾರ್, ಪುಷ್ಪಾವತಿ, ಪದ್ಮಾವತಿ, ನಿಲುಫರ್, ಚೇತನ್, ರವಿ, ರೂಪಾ, ಜೆ.ದೀಪಾ, ಶ್ವೇತಾ, ಶೋಭಾರಾಣಿ, ಮೋಹನಾಚಾರಿ ಸೇರಿದಂತೆ ಇತರರು ಹಾಜರಿದ್ದರು.


ಮನವಿ ಸ್ವೀಕರಿಸಿದ ಬಿಇಒ ಬಸವರಾಜು, ನಿಮ್ಮ ಬೇಡಿಕೆ ನ್ಯಾಯಯುತವಾಗಿದ್ದಲ್ಲಿ, ಈಡೇರಿಸಲಾಗುವುದು ಎಂದು ಭರವಸೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net