ಬಾಳೆಹೊನ್ನೂರಿನಲ್ಲಿ ಗೌರಿ-ಗಣೇಶ ಹಬ್ಬದ ಸಂಭ್ರಮ

sriram ganapa
ಬಾಳೆಹೊನ್ನೂರಿನ ಕಲಾರಂಗ ಕ್ರೀಡಾಂಗಣದಲ್ಲಿ ವಿದ್ಯಾಗಣಪತಿ ಸೇವಾ ಸಮಿತಿಯಿಂದ 65ನೇ ವರ್ಷದ ಗಣೇಶೋತ್ಸವ ಅಂಗವಾಗಿ ಪ್ರತಿಷ್ಠಾಪಿಸಿರುವ ಆಕರ್ಷಕ ಶ್ರೀರಾಮ ಸ್ವರೂಪಿ ವಿದ್ಯಾಗಣಪತಿ ವಿಗ್ರಹ.
Published on

ಬಾಳೆಹೊನ್ನೂರು: ಹೋಬಳಿಯಾದ್ಯಂತ ಸೋಮವಾರ ಸ್ವರ್ಣ ಗೌರಿ ವ್ರತ ಹಾಗೂ ಗಣೇಶ ಚತುರ್ಥಿಯನ್ನು ಸಂಭ್ರಮದಿಂದ ಆಚರಿಸಲಾಯಿತು. ಗೌರಿ ಹಬ್ಬದ ಅಂಗವಾಗಿ ಮಹಿಳೆಯರು ಕೆರೆಕಟ್ಟೆ, ಬಾವಿ, ಹಳ್ಳ ಕೊಳ್ಳಗಳಿಗೆ ತೆರಳಿ ಗೌರಿ ಪೂಜೆ ನೆರವೇರಿಸಿ ಮನೆಗಳಲ್ಲಿ ಕಲಶ ಪ್ರತಿಷ್ಠಾಪಿಸಿದರು. ಮುತ್ತೈದೆಯರಿಗೆ ಸಾಂಪ್ರದಾಯಿಕವಾಗಿ ಬಾಗಿನ ಕೊಡುವ ಸಂಪ್ರದಾಯ ಎಲ್ಲೆಡೆ ಕಂಡುಬಂದಿತ್ತು. ಗೌರಿ ಪೂಜೆಗೆ ಶ್ರೇಷ್ಠವಾದ ಗೌರಿ ಹೂಗಳನ್ನು ಇಟ್ಟು ಪೂಜಿಸಿದ ವನಿತೆಯರು ಗೌರಿ ದಾರಗಳನ್ನು ಮನೆ ಮಂದಿಗೆ ಕಟ್ಟಿ ಸಂಭ್ರಮಿಸಿದರು.
ಚತುರ್ಥಿ ಅಂಗವಾಗಿ ಎಲ್ಲಾ ದೇವಸ್ಥಾನ ಹಾಗೂ ಮನೆಗಳಲ್ಲಿ ವಿಶೇಷ ಪೂಜೆ ಸಲ್ಲಿಸಿ, ವಿನಾಯಕನನ್ನು ಪ್ರತಿಷ್ಠಾಪಿಸಿ ಗಣಪತಿಗೆ ಕಾಯಿ ಕಡುಬು, ಮೋದಕ, ಕರ್ಜಿಕಾಯಿ, ಕಬ್ಬು, ಚಕ್ಕುಲಿ, ಉಂಡೆಗಳನ್ನು ನೈವೇದ್ಯ ಮಾಡಲಾಯಿತು. ಇದರೊಂದಿಗೆ ಗಣೇಶನಿಗೆ ಪ್ರಿಯವಾದ ಗರಿಕೆಯನ್ನೂ ಸಹ ಅರ್ಚನೆ ಮಾಡಲಾಯಿತು.
ಹೋಬಳಿಯ ವಿವಿಧೆಡೆ ಗಣೇಶೋತ್ಸವ ಸಮಿತಿಗಳು ಆಯೋಜಿಸಿದ್ದ ಸಾರ್ವಜನಿಕ ಗಣಪತಿ ಉತ್ಸವದಲ್ಲಿ ಸ್ಥಳೀಯ ಕಲಾವಿದರು ತಯಾರಿಸಿದ ವಿವಿಧ ಮಾದರಿಯ ಆಕರ್ಷಕ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲಾಯಿತು.
ಪಟ್ಟಣದ ವಿದ್ಯಾಗಣಪತಿ ಸಮಿತಿಯಿಂದ 65ನೇ ವರ್ಷದ ಗಣೇಶೋತ್ಸವದ ಅಂಗವಾಗಿ ಆಕರ್ಷಕ ಶ್ರೀರಾಮ ಸ್ವರೂಪಿ ಮೂಷಿಕ ವಾಹನ ಹಾಗೂ ಬಿಲ್ಲನ್ನು ಹಿಡಿದ ವಿದ್ಯಾಗಣಪತಿ, ಇಟ್ಟಿಗೆ ಸೀಗೋಡಿನಲ್ಲಿ ಶಿರಡಿ ಸಾಯಿ ಬಾಬಾ ಸ್ವರೂಪಿ ವಿದ್ಯಾಗಣಪತಿ ಪ್ರತಿಷ್ಠಾಪಿಸಿದ್ದು ಭಕ್ತರ ಗಮನ ಸೆಳೆಯುತ್ತಿದೆ. ಇದಲ್ಲದೆ ವಿವಿಧೆಡೆ ಹಲವು ಗಣೇಶ ಸಮಿತಿಗಳು ಆಕರ್ಷಕ ಗಣಪತಿ ವಿಗ್ರಹಗಳನ್ನು ಪ್ರತಿಷ್ಠಾಪಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net