ಬಾಳೆಹೊನ್ನೂರಲ್ಲಿ ಕಳೆಗಟ್ಟಿದ ಕ್ರಿಸ್‌ಮಸ್ ಸಂಭ್ರಮ

24BHR 1 cristmas
ಬಾಳೆಹೊನ್ನೂರಿನಲ್ಲಿ ರೇಣುಕನಗರದಲ್ಲಿ ಕಾಫಿ ಸಂಶೋಧನಾ ಕೇಂದ್ರದ ನಿವೃತ್ತ ಉಪ ಕಾರ್ಯದರ್ಶಿ ಓ.ಡಿ.ಸ್ಟೀನ್ ಅವರ ಮನೆಯಲ್ಲಿ ಕ್ರಿಸ್‌ಮಸ್ ಮುನ್ನಾ ದಿನವಾದ ಮಂಗಳವಾರ ಆಕರ್ಷಕ ಗೋದಲಿ ನಿರ್ಮಿಸಿರುವುದು.
Published on

ಬಾಳೆಹೊನ್ನೂರು: ಬಾಳೆಹೊನ್ನೂರು ಹೋಬಳಿಯಾದ್ಯಂತ ಎಲ್ಲೆಡೆ ಪವಿತ್ರ ಕ್ರಿಸ್‌ಮಸ್‌ಗೆ ಸಂಭ್ರಮ ಕಳೆಗಟ್ಟಿದ್ದು, ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಊರುಗಳಲ್ಲಿ ಹಬ್ಬದ ವಾತಾವರಣ ಮನೆಮಾಡಿದೆ.

ಕ್ರಿಸ್‌ಮಸ್ ಈವ್‌ನ ದಿನವಾದ ಮಂಗಳವಾರ ಕ್ರೈಸ್ತರು ಕ್ರಿಸ್‌ಮಸ್ ಹಿನ್ನೆಲೆಯಲ್ಲಿ ತಮ್ಮ ಮನೆಗಳ ಮುಂದೆ ಏಸುಕ್ರಿಸ್ತನ ಜನನ ವೃತ್ತಾಂತವನ್ನು ತಿಳಿಸುವ ಆಕರ್ಷಕ ಗೋದಲಿಗಳ ನಿರ್ಮಾಣದಲ್ಲಿ ತಲ್ಲೀನರಾಗಿದ್ದು, ನಾನಾ ಬಗೆಯ ಅಲಂಕೃತ ಗೋದಲಿಗಳನ್ನು ನಿರ್ಮಿಸುತ್ತಿದ್ದಾರೆ. ಹಾಗೂ ಮನೆಗಳನ್ನು ನಕ್ಷತ್ರ, ಕ್ರಿಸ್‌ಮಸ್ ಟ್ರೀ, ಬಗೆಬಗೆಯ ವಿದ್ಯುತ್ ದೀಪಗಳಿಂದ ಅಲಂಕರಿಸುತ್ತಿದ್ದಾರೆ.

ಮಂಗಳವಾರ ಪಟ್ಟಣದ ವಿವಿಧ ಅಂಗಡಿಗಳಲ್ಲಿ ನಕ್ಷತ್ರ, ವಿದ್ಯುದ್ದೀಪಗಳ ಮಾರಾಟ ಭರದಿಂದ ಸಾಗಿದ್ದರೆ ಬೇಕರಿಗಳಲ್ಲಿ ಕ್ರಿಸ್‌ಮಸ್ ಕೇಕ್ ಸೇರಿದಂತೆ ನಾನಾ ತಿಂಡಿ ತಿನಿಸುಗಳ ಮಾರಾಟ ಜೋರಾಗಿ ನಡೆದಿತ್ತು. ಸಂಜೆಯ ಬಳಿಕ ಕ್ರೈಸ್ತರು ತಮ್ಮ ಸಮೀಪದ ಚರ್ಚ್‌ಗಳಲ್ಲಿ ಕ್ರಿಸ್‌ಮಸ್ ಈವ್ ಪ್ರಾರ್ಥನೆ ಸಲ್ಲಿಸಲು ತೆರಳುತ್ತಿರುವುದು ಕಂಡುಬಂತು.

ಪಟ್ಟಣದ ವಿಜಯಮಾತೆ ಚರ್ಚ್‌ಗೆ ವಿವಿಧ ಬಗೆಯ ವಿದ್ಯುತ್ ದೀಪಗಳ ಅಲಂಕಾರ ಮಾಡಿದ್ದು ನೋಡುಗರ ಗಮನ ಸೆಳೆಯುತ್ತಿದೆ. ಕ್ರಿಸ್ಮಸ್ ಹಿನ್ನೆಲೆಯಲ್ಲಿ ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ ಸ್ಥಳೀಯ ಮುಖಂಡರೊಂದಿಗೆ ಬಾಳೆಹೊನ್ನೂರು ಸುತ್ತಮುತ್ತಲಿನ ವಿವಿಧ ಚರ್ಚ್‌ಗೆ ಭೇಟಿ ನೀಡಿ ಧರ್ಮಗುರುಗಳಿಗೆ ಹಬ್ಬದ ಶುಭಾಶಯ ಕೋರುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net