ಬಾಳೆ ಹಣ್ಣು ಮಾರಾಟಕ್ಕೆ ಬಂದಿದ್ದ ದಂಪತಿ ಬಳಿ 50 ಸಾವಿರ ಕಳವು

crime
Published on

ಬೆಂಗಳೂರು : ನಂಜನಗೂಡಿನಿಂದ ಸಾರಕ್ಕಿಗೆ ಬಾಳೆಹಣ್ಣು ಮಾರಾಟಕ್ಕೆ ಬಂದಿದ್ದ ದಂಪತಿಯನ್ನು ಯಾಮಾರಿಸಿ ವಂಚಕರು 50 ಸಾವಿರ ರೂ. ದೋಚಿದ್ದಾರೆ.

ನಂಜನಗೂಡಿನ ಕೆಎಚ್‌ಬಿ ಕಾಲನಿ ನಿವಾಸಿ ದಿಲೀಪ್ ಕುಮಾರ್ ವಂಚನೆಗೆ ಒಳಗಾದವರು. ಈತ ಕೊಟ್ಟ ದೂರಿನ ಮೇರೆಗೆ ವಂಚಕನ ವಿರುದ್ಧ ಎ್ಐಆರ್ ದಾಖಲಿಸಿ ಕಗ್ಗಲಿಪುರ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಡಿ.26ರ ಬೆಳಗಿನ ಜಾವ ರೇವಣ್ಣ ಎಂಬಾತನ ತೋಟದಲ್ಲಿ ಬಾಳೆಹಣ್ಣನ್ನು ಬೊಲೆರೋ ವಾಹನದಲ್ಲಿ ತುಂಬಿಕೊಂಡು ದಿಲೀಪ್ ದಂಪತಿ ಸಾರಕ್ಕಿಗೆ ಬಂದಿದ್ದರು. 95 ಸಾವಿರ ರೂ.ಗೆ ಮಾರಾಟ ಮಾಡಿ ವಾಹನದ ಡ್ಯಾಶ್‌ಬೋರ್ಡ್‌ನಲ್ಲಿ ಹಣವಿಟ್ಟುಕೊಂಡು ಊರಿನತ್ತ ಹೊರಟಿದ್ದರು.

ಕನಕಪುರ ರಸ್ತೆ ತಾತಗುಣಿ ಮಾರ್ಗವಾಗಿ ಮೈಸೂರು ರಸ್ತೆಗೆ ತೆರಳುತ್ತಿದ್ದಾಗ ಮಧ್ಯಾಹ್ನ 12.30ರಲ್ಲಿ ದ್ವಿಚಕ್ರ ವಾಹನದಲ್ಲಿ ಬಂದ ಸವಾರ ತಾತಗುಣಿ ನೀಲಗಿರಿ ತೋಪಿನ ಬಳಿ ಅಡ್ಡಗಟ್ಟಿ ನಿಲ್ಲಿಸಿದ್ದಾನೆ. ಬೊಲೆರೋ ನಿಲ್ಲಿಸಿದ ದಿಲೀಪ್‌ಗೆ ಬೈಕ್ ಸವಾರ ಏಕಾಏಕಿ ಕಪಾಳಕ್ಕೆ ಹೊಡೆದು ಯಾಕೆ ಯುವತಿ ಮೇಲೆ ಎಂಜಲು ಉಗಿದು ಬಂದಿದ್ದೀಯಾ ಎಂದು ನಿಂದಿಸಿದ್ದಾನೆ. ಹಲ್ಲೆಯಿಂದ ಹೆದರಿದ ದಿಲೀಪ್‌ನನ್ನು ಡ್ರೈವರ್ ಸೀಟ್‌ನಿಂದ ಪಕ್ಕಕ್ಕೆ ಕುಳಿತುಕೊಳ್ಳುವಂತೆ ತಳ್ಳಿದ ಸವಾರ, ವಾಹನ ಚಲಾಯಿಸಿಕೊಂಡು ಅಗರ ಗ್ರಾಮಕ್ಕೆ ಬಂದು ಬೇಕರಿಯಲ್ಲಿ ನೀರು ತರುವಂತೆ ತಾಕೀತು ಮಾಡಿದ್ದಾನೆ. ನೊಂದ ಚಾಲಕ ಬೇಕರಿಗೆ ಹೋಗಿ ನೀರು ತಂದಾಗ ಆರೋಪಿ ಕೋಲ್ಡ್ ನೀರು ತರುವಂತೆ ಬೈದು ಮತ್ತೆ ಕಳುಹಿಸಿದ್ದಾನೆ. ದಿಲೀಪ್ ಬೇಕರಿಗೆ ಹೋಗಿದ್ದಾಗ ಇತ್ತ ವಾಹನದಲ್ಲಿ ಕುಳಿತಿದ್ದ ಆತನ ಪತ್ನಿಯನ್ನು ಕೆಳಗೆ ಇಳಿಸಿ ಕಲ್ಲಿನ ಮೇಲೆ ಕೂರಿಸಿದ್ದಾನೆ.

ದಿಲೀಪ್ ನೀರು ತಂದಾಗ ಇಬ್ಬರನ್ನೂ ವಾಹನಕ್ಕೆ ಹತ್ತಿಸಿಕೊಂಡು, ‘ತಾತಗುಣಿಯಲ್ಲಿ ನಮ್ಮ ಪಂಚಾಯಿತಿ ಅಧ್ಯಕ್ಷ ಅಪ್ಪಾಜಿ ಇದ್ದಾರೆ. ಅವರ ಬಳಿ ಕ್ಷಮೆ ಕೇಳಿ’ ಎಂದು ಕರೆದುಕೊಂಡು ತಾತಗುಣಿಗೆ ಬಂದು ತಾನು ದ್ವಿಚಕ್ರ ವಾಹನ ನಿಲ್ಲಿಸಿದ್ದ ಸ್ಥಳದಲ್ಲಿ ಬೊಲೆರೋ ನಿಲ್ಲಿಸಿದ್ದಾನೆ. ನಂತರ ನನ್ನನ್ನು ಹಿಂಬಾಲಿಸುವಂತೆ ಹೇಳಿ, ತನ್ನ ದ್ವಿಚಕ್ರ ವಾಹನದಲ್ಲಿ ವೇಗವಾಗಿ ಹೊರಟುಹೋಗಿದ್ದಾನೆ. ದಂಪತಿ ವಾಹನದ ಡ್ಯಾಶ್‌ಬೋರ್ಡ್‌ನಲ್ಲಿದ್ದ ಹಣ ಪರಿಶೀಲನೆ ನಡೆಸಿದಾಗ 50 ಸಾವಿರ ರೂ. ಕಳವಾಗಿರುವುದು ಗೊತ್ತಾಗಿದೆ. ದಂಪತಿ ಮೇಲೆ ಹಲ್ಲೆ ನಡೆಸಿದ ಆರೋಪಿ ಗಮನ ಬೇರೆಡೆ ಸೆಳೆದು ಹಣ ದೋಚಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕಗ್ಗಲಿಪುರ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net