ಬಾಲ್ಯ ವಿವಾಹ ಶಿಕ್ಷಾರ್ಹ ಅಪರಾಧ

Published on

ನ್ಯಾಯಾಧೀಶ ಸಂದೇಶ್ ಪ್ರಭು ಎಚ್ಚರಿಕೆ

ಮೈಸೂರು ಸರಗೂರು
ಬಾಲ್ಯ ವಿವಾಹ ಶಿಕ್ಷಾರ್ಹ ಅಪರಾಧ ಎಂದು ನ್ಯಾಯಾಧೀಶರಾದ ಸಂದೇಶ್ ಪ್ರಭು ಎಂದು ತಿಳಿಸಿದರು.
ತಾಲೂಕಿನ ಹೆಗ್ಗನೂರು ಗ್ರಾಮದ ಶ್ರೀ ಆದಿಚುಂಚನಗಿರಿ ಪ್ರಥಮ ದರ್ಜೆ ಕಾಲೇಜಿನಿಂದ ಹಮ್ಮಿಕೊಂಡಿರುವ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಅಂಗವಾಗಿ ಗುರುವಾರ ಆಯೋಜಿಸಿದ್ದ ಕಾನೂನು ಅರಿವು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಬಾಲ್ಯ ವಿವಾಹ ಅಪಾಯಕಾರಿ ಪದ್ಧತಿಯಾಗಿದೆ. ಇದು 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಅಥವಾ ಹದಿಹರೆಯದವರ ವಿವಾಹವನ್ನು ಸೂಚಿಸುತ್ತದೆ. ಬಾಲ್ಯ ವಿವಾಹವು ಮಾನವ ಹಕ್ಕುಗಳ ಗಂಭೀರ ಉಲ್ಲಂಘನೆಯಾಗಿದೆ ಎಂದರು.
ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಕೆ.ಜೆ.ಸತೀಶ್ ಮಾತನಾಡಿ, ಸಮಾಜದಲ್ಲಿ ಅನಿಷ್ಟ ಪದ್ಧತಿಗಳನ್ನು ನಿರ್ಮೂಲನೆ ಮಾಡಬೇಕು. ಇತ್ತೀಚಿನ ದಿನಗಳಲ್ಲಿ ಹೆಣ್ಣು ಭ್ರೂಣ ಹತ್ಯೆಗಳು ನಿರಂತರವಾಗಿ ನಡೆಯುತ್ತಿದೆ. ಇದು ಕಾನೂನು ಬಾಹಿರ ಚಟುವಟಿಕೆಯಾಗಿದೆ. ಹೆಣ್ಣು ಭ್ರೂಣ ಹತ್ಯೆ ಮಾಡಿದವರಿಗೆ ಕಾನೂನಿನ ಮೂಲಕ ಶಿಕ್ಷ ನೀಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಹೆಗ್ಗನೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಸುಧೀರ್ ಮಾತನಾಡಿ, ಸರಿಯಾಗಿ ಕಾನೂನುಗಳು ಜಾರಿಯಾಗದ ಹಿನ್ನೆಲೆಯಲ್ಲಿ ಬಾಲ್ಯ ವಿವಾಹ, ಹೆಣ್ಣು ಭ್ರೂಣ ಹತ್ಯೆ ಪ್ರಕರಣಗಳು ನಡೆಯುತ್ತಿದೆ. ಈ ಬಗ್ಗೆ ಯುವ ಜನರಲ್ಲಿ ಅರಿವು ಮೂಡಿಸುವ ಅಗತ್ಯವಿದೆ ಎಂದರು.
ಹೆಚ್ಚುವರಿ ನ್ಯಾಯಾಧೀಶ ಎಚ್.ಎನ್.ಸುರೇಶ್, ಗ್ರಾಮದ ಜನರಿಗೆ ಕಾನೂನಿನ ಮೂಲಕ ಪಡೆದುಕೊಳ್ಳಬಹುದಾದ ಸೌಲಭ್ಯಗಳನ್ನು ತಿಳಿಸಿದರು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲರು ಡಾ.ಜೆ.ಎನ್.ವೆಂಕಟೇಶ್, ಎನ್‌ಎಸ್‌ಎಸ್ ಅಧಿಕಾರಿಗಳಾದ ರಾಮಚಂದ್ರ, ಎಂ.ಆರ್.ಸಿದ್ದೇಗೌಡ, ಸಹ ಶಿಬಿರಾಧಿಕಾರಿ ಚೆನ್ನಕೇಶವ ನಾಯಕ, ವಿದ್ಯಾರ್ಥಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net