

ರಾಜ್ಯದ ಪೊಲೀಸರಿಗೆ ದಕ್ಷತೆ ಇದ್ದರೂ ಕೆಲಸ ಮಾಡಲು ಮುಕ್ತ ವಾತಾವರಣ ಇಲ್ಲದಂತಾಗಿದ್ದು, ಮೈಸೂರು ಪೊಲೀಸರಿಗೆ ಮುಖ್ಯಮಂತ್ರಿ ಪುತ್ರ ಯತೀಂದ್ರ ಸಿದ್ದರಾಮಯ್ಯ ಕಾಟ ಹೆಚ್ಚಾಗಿದೆ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಆರೋಪಿಸಿದರು.
ಮೈಸೂರಿನಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಸೂರಿನಲ್ಲಿ ಒಂದರ ಹಿಂದೆ ಒಂದು ಕೊಲೆಗಳು ಆಗುತ್ತಿದ್ದು, ಬಾಲಕಿ ಕೊಲೆ ಪ್ರಕರಣದ ಬಗ್ಗೆ ಸರ್ಕಾರದ ಯಾರೊಬ್ಬರೂ ಏಕೆ ಧ್ವನಿ ಎತ್ತಿಲ್ಲ? ಉಕ್ರೇನ್, ರಷ್ಯಾದ ಬಗ್ಗೆ ಕಾಮೆಂಟ್ ಮಾಡುವ ಹಾಗೂ ಡೊನಾಲ್ಡ್ ಟ್ರಂಪ್ ಬಗ್ಗೆ ಮಾತನಾಡುತ್ತಾರೆ. ಆದರೆ, ಬಾಲಕಿ ಕೊಲೆ ಪ್ರಕರಣದ ಬಗ್ಗೆ ಏಕೆ ಮಾತನಾಡಲ್ಲ? ಎಂದು ಪ್ರಶ್ನಿಸಿದರು.
ರಾಜ್ಯ ಸರ್ಕಾರದಲ್ಲಿರುವ ಪ್ರಿಯಾಂಕ್ ಖರ್ಗೆ, ಸಂತೋಷ್ ಲಾಡ್, ಚಿಕ್ಕಬಳ್ಳಾಪುರದ ಕೂಗು ಮಾರಿಗಳಲ್ಲಿ ಒಬ್ಬನಾದರೂ ಬಾಯಿ ತೆರೆದಿಲ್ಲ. ಸಿಎಂ, ಡಿಸಿಎಂ ಏಕೆ ಮಾತನಾಡುತ್ತಿಲ್ಲ? ಸಿದ್ದರಾಮಯ್ಯ ಅವರೇ ಯಾವ ಪುರುಷಾರ್ಥಕ್ಕೆ ನೀವು ಸಿಎಂ ಆಗಿದ್ದೀರಿ? ಎಂದು ಪ್ರಶ್ನಿಸಿದರು.
ರಾಜ್ಯದ ಪೊಲೀಸರಿಗೆ ದಕ್ಷತೆ ಇದ್ದರೂ ಕೆಲಸ ಮಾಡಲು ಮುಕ್ತ ವಾತಾವರಣವಿಲ್ಲ. ನಳಪಾಕ್‌ನಲ್ಲಿ ಕಾಫಿ ಕುಡಿಯಲು, ಮೈಲಾರಿ ದೋಸೆ ತಿನ್ನಲಷ್ಟೇ ಪೊಲೀಸರನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಮಹದೇವಪ್ಪ ಸಂವಿಧಾನ ಪೀಠಿಕೆ ಓದಿಸೋದು ಬಿಟ್ಟರೆ ಬೇರೆ ಏನು ಮಾಡುತ್ತಿದ್ದಾರೆ? ಹಕ್ಕಿಪಿಕ್ಕಿ ಜನಾಂಗದ ಬಾಲಕಿ ಕೊಲೆಗೆ ಏಕೆ ಯಾರೂ ಧ್ವನಿ ಎತ್ತುತ್ತಿಲ್ಲ ಎಂದು ಟೀಕಿಸಿದರು.
ಸಿಎಂ ಪುತ್ರನಿಗೆ ತೆರಿಗೆ: ಯತೀಂದ್ರ ವರ್ಗಾವಣೆ ಸಚಿವರಾಗಿದ್ದಾರೆ. ಪೊಲೀಸ್ ಇಲಾಖೆಯಲ್ಲಿ ಮಿನೀಟ್(ಶಿಫಾರಸು ಪತ್ರ) ಕಾಟ ಹೆಚ್ಚಾಗಿದೆ. ಯಾವುದೇ ವರ್ಗಾವಣೆ ಆಗಬೇಕಾದರೂ ಸಿಎಂ ಪುತ್ರನಿಗೆ ತೆರಿಗೆ ಕಟ್ಟಬೇಕು. ಕಲೆಕ್ಷನ್ ವಿಚಾರದಲ್ಲಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಪೈಪೋಟಿಗೆ ಇಳಿದಿದ್ದಾರೆ. ಯಾರು ಜಾಸ್ತಿ ಕಲೆಕ್ಷನ್ ಮಾಡಿ ರಾಹುಲ್ ಗಾಂಧಿಗೆ ಕೊಡ್ತಿವೋ ಅಂತಾ ಪೈಪೋಟಿ ನಡೆಯುತ್ತಿದೆ. ಸಿಎಂ ಸಿದ್ದರಾಮಯ್ಯಗೆ ಅಂತಃಕರಣವೇ ಇಲ್ಲ. ಅವರ ಹೃದಯ ಕಲ್ಲಾಗಿದ್ದು, ಯಾವ ಜಾತಿಯವನು ಆರೋಪಿ ಎಂದು ನೋಡಿ ನಂತರ ಅವನನ್ನು ಹಿಡಿಯಬೇಕಾದ ಪರಿಸ್ಥಿತಿ ಮೈಸೂರು ಪೊಲೀಸರಿಗೆ ಬಂದಿದೆ ಎಂದು ಕಿಡಿಕಾರಿದರು.
ಮೈಸೂರು ಪೊಲೀಸರಿಗೆ ಮಿನೀಟ್ ಕಾಟ, ವರ್ಗಾವಣೆ ಕಾಟ, ಜಾತಿ ಕಾಟ ಜಾಸ್ತಿ ಆಗಿದ್ದು, ಇದರಿಂದಾಗಿ ಇಸ್ಪೀಟ್ ಅಡ್ಡೆಗಳ ಮೇಲೂ ದಾಳಿ ನಡೆಸಲೂ ಹೆದರುತ್ತಿದ್ದಾರೆ. ಯಾವ ಸಚಿವ, ಶಾಸಕರ ಫೋನ್ ಬರುತ್ತದೆ ಎಂದು ಪೊಲೀಸರಿಗೆ ಭಯವಿದೆ. ಇನ್ನು ಗೃಹ ಸಚಿವರು ಸಿದ್ದರಾಮಯ್ಯ ಕುರ್ಚಿ ಖಾಲಿಯಾದರೆ ನನಗೆ ಸಿಗುತ್ತೆ ಅಂತಾ ಇಲಾಖೆಯನ್ನೇ ಮರೆತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.