ಬಸ್ಸಿಗಾಗಿ ಭಕ್ತರ ನೂಕು ನುಗ್ಗಲು

19 HANUR 1
Published on

ಹನೂರು: ತಾಲೂಕಿನ ಮಲೆಮಹದೇಶ್ವರ ಬೆಟ್ಟಕ್ಕೆ ಮಣ್ಣೆತ್ತಿನ ಅಮಾವಾಸ್ಯೆ ಹಿನ್ನೆಲೆ ತೆರಳಿದ್ದ ಸಾವಿರಾರು ಭಕ್ತರು ತಮ್ಮ ಊರುಗಳಿಗೆ ಹಿಂತಿರುಗುತ್ತಿದ್ದು, ಸೋಮವಾರ ಬಸ್ ನಿಲ್ದಾಣದಲ್ಲಿ ಬಸ್ಸಿಗಾಗಿ ನೂಕು ನುಗ್ಗಲು ನಿರ್ಮಾಣವಾಯಿತು.


ಈ ಬಾರಿ ಅಮಾವಾಸ್ಯೆಯ ಹಿನ್ನೆಲೆ ಮ.ಬೆಟ್ಟಕ್ಕೆ ಬೆಂಗಳೂರು, ಮೈಸೂರು, ಮಂಡ್ಯ, ಚಾ.ನಗರ, ರಾಮನಗರ, ಚನ್ನಪಟ್ಟಣ ಸೇರಿದಂತೆ ವಿವಿಧೆಡೆಯಿಂದ ಲಕ್ಷಾಂತರ ಭಕ್ತರು ಭೇಟಿ ನೀಡಿದ್ದರು. ಸರ್ಕಾರದ ಶಕ್ತಿ ಯೋಜನೆಯ ಪರಿಣಾಮ ಸರ್ಕಾರಿ ಬಸ್ಸಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಕುಟುಂಬ ಸಮೇತ ಆಗಮಿಸಿದ್ದರು. ಇದರಲ್ಲಿ ಕೆಲವರು ಮಾದಪ್ಪನ ಸನ್ನಿಧಿಯಲ್ಲಿ ಜರುಗುವ ವಿವಿಧ ಉತ್ಸವಾಧಿ ಸೇವೆ ನೆರವೇರಿಸಿ ಹಾಗೂ ಪೂಜೆ ಸಲ್ಲಿಸಿ ಭಾನುವಾರವೇ ತಮ್ಮ ಊರುಗಳಿಗೆ ಹಿಂತಿರುಗಿದರೆ ಬಹುತೇಕ ಭಕ್ತರು ಮ.ಬೆಟ್ಟದಲ್ಲೇ ಬೀಡು ಬಿಟ್ಟಿದ್ದರು.


ಬಸ್ಸಿಗಾಗಿ ನೂಕುನುಗ್ಗಲು: ಬೀಡು ಬಿಟ್ಟಿದ್ದ ಭಕ್ತರು ಸೋಮವಾರ ಊರುಗಳಿಗೆ ವಾಪಾಸಾಗಲು ಬಸ್ ನಿಲ್ದಾಣಕ್ಕೆ ಆಗಮಿಸಿದರು. ಆದರೆ ಜನಸಂಖ್ಯೆಗೆ ಅನುಗುಣವಾಗಿ ಬಸ್ ಸೌಕರ್ಯ ಇರಲಿಲ್ಲ. ಇದರಿಂದ ಮಹಿಳೆಯರು ಸರ್ಕಾರಿ ಬಸ್ಸಿಗಾಗಿ ಮುಗಿಬಿದ್ದು ನೂಕು ನುಗ್ಗಲು ನಿರ್ಮಾಣವಾಗಿತ್ತು. ಈ ವೇಳೆ ಕೆಲ ಪುರುಷರು ಶಕ್ತಿ ಯೋಜನೆಯ ಪರಿಣಾಮ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಸೀಟ್‌ಗಾಗಿ ಕಿಟಕಿಯ ಮೂಲಕ ಒಳನುಗ್ಗಿ ಪ್ರಯಾಸ ಪಟ್ಟರು. ಇನ್ನು ಉಚಿತ ಪ್ರಯಾಣದ ಹಿನ್ನೆಲೆಯಲ್ಲಿ ಮಹಿಳೆಯರು ಗಂಟೆಗಟ್ಟಲೇ ಬಸ್ ನಿಲ್ದಾಣದಲ್ಲೇ ಕಾದು ಕುಳಿತು ಆಗಮಿಸುವ ಸರ್ಕಾರಿ ಬಸ್ಸಿನಲ್ಲಿ ಕಿಕ್ಕಿರಿದ ಜನರೊಂದಿಗೆ ನಿಂತುಕೊಂಡೇ ಪ್ರಯಾಣ ಬೆಳೆಸುವಂತಾಯಿತು. ಇದರಿಂದ ಜನರು ತುಂಬಾ ತೊಂದರೆ ಅನುಭವಿಸಿದರು.


ಖಾಸಗಿ ಬಸ್‌ಗಳು ಹೌಸ್‌ಫುಲ್: ಶಕ್ತಿ ಯೋಜನೆಯಿಂದ ನಷ್ಟ ಅನುಭವಿಸುತ್ತಿದ್ದ ಹಿನ್ನೆಲೆ ಸುಮಾರು 50ಕ್ಕೂ ಹೆಚ್ಚು ಖಾಸಗಿ ಬಸ್‌ಗಳು ಅಮಾವಾಸ್ಯೆ ಅಂಗವಾಗಿ ಮ.ಬೆಟ್ಟಕ್ಕೆ ಸಂಚರಿಸುತ್ತಿದ್ದವು. ಸೋಮವಾರ ಸರ್ಕಾರಿ ಬಸ್‌ನಲ್ಲಿ ನೂಕುನುಗ್ಗಲು ಉಂಟಾದ್ದರಿಂದ ಪುರುಷರು ಸೇರಿದಂತೆ ಮಹಿಳೆಯರು ಸಹ ಖಾಸಗಿ ಬಸ್‌ನಲ್ಲಿ ತಮ್ಮ ಊರುಗಳಿಗೆ ಪ್ರಯಾಣ ಬೆಳೆಸಿದರು. ಇದರಿಂದ ಖಾಸಗಿ ಬಸ್‌ಗಳು ಹೌಸ್‌ಫುಲ್‌ನಿಂದ ಕೂಡಿದ್ದು, ಕೆಲವರು ನಿಂತುಕೊಂಡೇ ಪ್ರಯಾಣಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net